ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ಸ್ಥಿತಿಯಂತೂ ಕಳೆದೆಲ್ಲ ವರ್ಷಗಳಿಗಿಂತ ಈ ವರ್ಷ ತೀರಾ ಶೋಚನೀಯವಾಗಿದೆ. ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ. ಒಂದೊಂದು ರಸ್ತೆಯಲ್ಲೂ ಎಣಿಸಲಾರದಷ್ಟು ಗುಂಡಿಗಳು ಮೂಡಿದ್ದು, ಸಂಚಾರವೇ ಅಸಹನೀಯವಾಗಿದೆ.
ಕೊಡಗಿನ ಮಳೆಗಾಲ ನೋಡುವುದಕ್ಕೆಂದೇ ಹೊರರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಬಿಟ್ಟೂಬಿಡದೇ ಸುರಿಯುವ ಮಳೆ, ಗಂಟೆಗಟ್ಟಲೆ ಕಾಲ ಆವರಿಸುವ ದಟ್ಟ ಮಂಜು, ಬೆಟ್ಟಗಳನ್ನು ಮುತ್ತುವ ಮೋಡಗಳು, ಬೀಸುತ್ತಲೆ ಇರುವ ಬಲವಾದ ಗಾಳಿ ಹೀಗೆ ಇಲ್ಲಿ ಮಳೆಗಾಲ ನೋಡುವುದಕ್ಕೆ, ಅನುಭವಿಸುವುದಕ್ಕೆ ಚೆನ್ನ. ಆದರೆ, ಈ ಸೌಂದರ್ಯ ವೀಕ್ಷಿಸಲು ಸಾಗುವ ದಾರಿ ಮಾತ್ರ ಈಗ ದುರ್ಗಮ ಎನಿಸಿದೆ.
ಎಲ್ಲೆಲ್ಲೂ ಗುಂಡಿಗಳೇ ಇದ್ದು, ಅವುಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ದ್ವಿಚ್ರಕ್ರ ವಾಹನ ಸವಾರರು ಮೈಯೆಲ್ಲ ಕಣ್ಣಾಗಿಯೇ ಸಂಚರಿಸಬೇಕಿದೆ. ಗುಂಡಿ ತಪ್ಪಿಸಲು ಹರಸಾಹಸಪಡಬೇಕಿದೆ. ಗುಂಡಿಯಲ್ಲಿ ನೀರು ತುಂಬಿದ್ದು ವಾಹನಗಳು ಜೋರಾಗಿ ಸಂಚರಿಸಿದಾಗ ನೀರು ಪಾದಚಾರಿಗಳ ಮೇಲೆ ಹಾರುತ್ತಿದೆ. ಕೊಡೆ ಹಿಡಿದು ನಡೆದು ಹೋಗುವ ವಿದ್ಯಾರ್ಥಿಗಳಿಗೆ ಮಳೆಯಲ್ಲಿ ನೆನೆಯುವುದು ಅಥವಾ ಮಳೆ ಅವರಿಗೆ ಸಮಸ್ಯೆಯಾಗಿ ಕಾಡುತ್ತಿಲ್ಲ. ಅದಕ್ಕೆ ಬದಲಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ನಡೆಯುವುದು ಅವರಿಗೆ ಅಕ್ಷಶಃ ಸವಾಲು ಎನಿಸಿದೆ.
ವಾಹನಗಳ ಚಕ್ರ ಗುಂಡಿಗೆ ಬೀಳುತ್ತಲೇ ಅದರಲ್ಲಿ ತುಂಬಿರುವ ನೀರು ವಿದ್ಯಾರ್ಥಿಗಳ ಮೇಲೆ ಬೀಳುತ್ತಿದೆ. ಇದರಿಂದ ಬಟ್ಟೆ ಎಲ್ಲವೂ ಒದ್ದೆಯಾಗಿ, ಇಡೀ ದಿನ ಒದ್ದೆ ಬಟ್ಟೆಯಲ್ಲೇ ಪಾಠ ಕೇಳುವ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.
ಶಾಸಕ, ಅಧಿಕಾರಿಗಳು ಸಂಚರಿಸುವ ಮುಖ್ಯರಸ್ತೆಗಳಿಗೆ ಮಾತ್ರವೇ ಮಡಿಕೇರಿ ನಗರಸಭೆ ‘ವೆಟ್ ಮಿಕ್ಸ್’ ಹಾಕುತ್ತಿದೆ. ಈ ಮುಖ್ಯರಸ್ತೆಗಳಿಗಾಗಿಯೇ ಸುಮಾರು 6 ಲೋಡ್‌ನಷ್ಟು ‘ವೆಟ್ ಮಿಕ್ಸ್’ ಹಾಕಿದೆ. ಆದರೆ, ಬಡಾವಣೆಗಳ ಒಳಗಿನ ರಸ್ತೆಗಳ ಕುರಿತು ನಿರ್ಲಕ್ಷ್ಯ ಧೋರಣೆ ತಾಳಿದೆ.
ಟಿ.ಜಾನ್ ಬಡಾವಣೆ, ಕಾವೇರಿ ಲೇಔಟ್, ಮುತ್ತಪ್ಪ ದೇಗುಲದ ರಸ್ತೆ, ಸಂಪಿಗೆ ಕಟ್ಟೆಗೆ ಹೋಗುವ ರಸ್ತೆ, ಮಹದೇವಪೇಟೆ, ರಾಣಿಪೇಟೆ, ಹಿಲ್ ರೋಡ್ ಹೀಗೆ ನಗರದ ಬಹುತೇಕ ಎಲ್ಲ ಬಡಾವಣೆಯ ರಸ್ತೆಗಳ ಸ್ಥಿತಿ ಹಿಂದೆಂದಿಗಿಂತಲೂ ಹೆಚ್ಚು ದಯನೀಯ ಸ್ಥಿತಿಯಲ್ಲಿವೆ. ಈ ಭಾಗದ ರಸ್ತೆಗಳಿಗೂ ಒಂದಿಷ್ಟು ‘ವೆಟ್ ಮಿಕ್ಸ್’ ಹಾಕಬೇಕೆಂದು ನಿವಾಸಿಗಳು ಒತ್ತಾಯಿಸುತ್ತಾರೆ.
ಈಗ ಹಾಕುತ್ತಿರುವ ‘ವೆಟ್ ಮಿಕ್ಸ್’ ಬಾಳಿಕೆ ಬರುತ್ತಿಲ್ಲ. ಒಂದು ದೊಡ್ಡ ಮಳೆ ಬಂದರೆ ಸಾಕು ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳುತ್ತಿದೆ. ಮಡಿಕೇರಿ ನಗರಸಭೆಯ ಮಳೆಗಾಲದ ಆರಂಭದಲ್ಲಿ ಕೆಲವು ಮುಖ್ಯರಸ್ತೆಗೆ ಹಾಕಿದ 40 ಎಂ.ಎಂ ‘ವೆಟ್ ಮಿಕ್ಸ್’ ಕೆಲವೇ ದಿನಗಳಲ್ಲಿ ಕೊಚ್ಚಿಕೊಂಡು ಹೋಯಿತು. ಅದಕ್ಕಾಗಿ ಈಗ 20 ಎಂ.ಎಂ ವೆಟ್ ಮಿಕ್ಸ್ ತರಿಸಿ ಹಾಕುತ್ತಿದೆ. ಆದರೆ ಇದೂ ಸುರಿಯುತ್ತಿರುವ ಮಳೆ ನಿಲ್ಲುವಂತೆ ಕಾಣುತ್ತಿಲ್ಲ.
ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆಂದೇ ಇರುವ ನೂತನ ತಂತ್ರಜ್ಞಾನ ‘ಎಕೊ ಫಿಕ್ಸ್’ ಅನ್ನು ಸರ್ಕಾರ ಇನ್ನೂ ಕೊಡಗು ಜಿಲ್ಲೆಗೆ ನೀಡಿಲ್ಲ. ಇದು ಗುಂಡಿ ಮುಚ್ಚುವುದಕ್ಕೆ ಪರಿಣಾಮಕಾರಿ ತಂತ್ರಜ್ಞಾನ ಎಂದೇ ಹೇಳಲಾಗುತ್ತಿದೆ. ಇದನ್ನು ಕೊಡಗು ಜಿಲ್ಲೆಗೆ ನೀಡುವಂತೆ ಲೋಕೊಪಯೋಗಿ ಇಲಾಖೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ. ಆದರೆ ಇದುವರೆಗೂ ‘ಎಕೊ ಫಿಕ್ಸ್’ ಜಿಲ್ಲೆಗೆ ಬಂದಿಲ್ಲ. ಈಗ ಬಂದು ಅದನ್ನು ‘ಪೈಲಟ್ ಯೋಜನೆ’ಯಂತೆ ಒಂದಷ್ಟು ಹಾಕಿ ಗುಂಡಿ ಮುಚ್ಚಿದರೆ ಅದರ ಬಾಳಿಕೆಯ ಸಾಮರ್ಥ್ಯ ತಿಳಿಯುತ್ತದೆ. ಮಳೆಗಾಲದ ಮುಗಿದ ಮೇಲೆ ಬಂದರೆ ಏನೇನೂ ಪ್ರಯೋಜನವಾಗದು ಎಂದು ಅಧಿಕಾರಿಗಳು ಹೇಳುತ್ತಾರೆ.
ಗುಣಮಟ್ಟದ ಕಾಮಗಾರಿ ಮಾಡಿದರೆ ಈ ಬಗೆಯ ಗುಂಡಿಗಳು ಬೀಳುವುದಿಲ್ಲ. ಈಗ ಕೊಡಗಿನಲ್ಲಿ ರಸ್ತೆ ಕಾಮಗಾರಿ ಎಂಬುದು ಲಾಭದಾಯಕ ಕೆಲಸ ಎಂಬಂತಾಗಿದೆ. ಗುಣಮಟ್ಟವನ್ನು ಖಾತರಿ ಮಾಡುವಂತಹ ವ್ಯವಸ್ಥೆಯೇ ಇಲ್ಲ. ಇನ್ನಾದರೂ ಇಡೀ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿಯತ್ತ ಚಿತ್ತಹರಿಸಿದರೆ ರಸ್ತೆಗಳ ಸ್ಥಿತಿ ಈ ರೀತಿಯಾಗುವುದಿಲ್ಲ.ಗೀತಾ ಗಿರೀಶ್ ಆರ್ಥಿಕ ಸಲಹೆಗಾರರು
ಮಡಿಕೇರಿ ನಗರಸಭೆ ವ್ಯಾಪ್ತಿಗೆ ಬರುವ ಸಂತ ಜೋಸೆಫರ ಶಾಲೆಯ ಸುತ್ತಮುತ್ತಲಿನ ರಸ್ತೆಗಳು ಕಿರಿದಾಗಿದ್ದು ಹೊಂಡಗುಂಡಿಗಳಿಂದ ಕೂಡಿದೆ. ವಾಹನಗಳ ಓಡಾಟ ಜಾಸ್ತಿ ಇದ್ದು ವಾಹನ ಚಾಲಕರು ಮಾತ್ರವಲ್ಲದೇ ಪಾದಚಾರಿಗಳಿಗೂ ಈ ರಸ್ತೆ ಪ್ರಯಾಣ ಕಷ್ಟವಾಗುತ್ತಿದೆ. ಮೇ ತಿಂಗಳಿನ ಮಳೆಯಲ್ಲೇ ನಡೆದ ರಸ್ತೆ ಕಾಮಗಾರಿ ಮಳೆಯೊಂದಿಗೇ ತೊಳೆದು ಹೋಗಿದೆ. ಕೊಡಗಿನಂತಹ ಮಳೆಪೀಡಿತ ಪ್ರದೇಶಗಳ ರಸ್ತೆ ಕೆಲಸಗಳಿಗೆ ಸೂಕ್ತವಾದ ನೂತನ ತಂತ್ರಜ್ಞಾನ ಬಳಸುವ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ಪ್ರತೀ ವರ್ಷ ರಸ್ತೆ ಕಾಮಗಾರಿ ಎಂಬ ಪ್ರಹಸನ ನಡೆಯುತ್ತಲೇ ಇರುತ್ತದೆ. ಕೆದಂಬಾಡಿ ಕಾಂಚನ ಗೌಡ ಉಪನ್ಯಾಸಕಿ.
ಕೊಡಗು ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳಿಗೆ ಈಗಾಗಲೇ ‘ವೆಟ್ ಮಿಕ್ಸ್’ ಹಾಕಲಾಗಿದೆ. ಆದರೆ ಅದು ಸುರಿಯುತ್ತಿರುವ ಮಳೆಗೆ ನಿಲ್ಲುತ್ತಿಲ್ಲ. ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮತ್ತೆ ಗುಂಡಿ ಬೀಳುತ್ತಿದೆ ಇಬ್ರಾಹಿಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್. ಕಾಂಕ್ರೀಟ್ ರಸ್ತೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಮಡಿಕೇರಿ ನಗರದಲ್ಲಿ ಒಟ್ಟು 30 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ‘ವೆಟ್ ಮಿಕ್ಸ್’ ಹಾಕಿ ಗುಂಡಿ ಮುಚ್ಚುತ್ತಿದ್ದೇವೆ. ಈಗಾಗಲೆ 6 ಲೋಡ್‌ನಷ್ಟು ವೆಟ್ ಮಿಕ್ಸ್ ಹಾಕಿದ್ದೇವೆ. ಆದರೆ ಬಡಾವಣೆಗಳ ರಸ್ತೆಯ ಗುಂಡಿಗಳಿಗೆ ಇನ್ನೂ ಹಾಕಲು ಶುರು ಮಾಡಿಲ್ಲ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.