ADVERTISEMENT

ಮಡಿಕೇರಿ: ಗದ್ದುಗೆಗೆ ಇನ್ನೂ ಇಲ್ಲ ಕಾಯಕಲ್ಪ

ಸುಣ್ಣ ಬಣ್ಣ ಹಾಕುವುದಕ್ಕೂ ಸರ್ಕಾರ ಗಮನ ಹರಿಸಿಲ್ಲ

ಕೆ.ಎಸ್.ಗಿರೀಶ್
Published 24 ನವೆಂಬರ್ 2025, 2:56 IST
Last Updated 24 ನವೆಂಬರ್ 2025, 2:56 IST
ಮಡಿಕೇರಿಯಲ್ಲಿ ಕಾಯಕಲ್ಪಕ್ಕೆ ಕಾದಿರುವ ರಾಜರ ಗದ್ದುಗೆ
ಮಡಿಕೇರಿಯಲ್ಲಿ ಕಾಯಕಲ್ಪಕ್ಕೆ ಕಾದಿರುವ ರಾಜರ ಗದ್ದುಗೆ   

ಮಡಿಕೇರಿ: ನಗರ ಮಾತ್ರವಲ್ಲ, ಕೊಡಗು ಜಿಲ್ಲೆಯ ಐತಿಹಾಸಿಕ ತಾಣಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ರಾಜರ ಗದ್ದುಗೆಗಳು.

ಕೊಡಗನ್ನು ಆಳಿದ ನಾಡಿನ ಮಹತ್ವ ಅರಸುಗಳೆನಿಸಿದ ಕೊಡಗಿನ ರಾಜರ ಸಮಾಧಿಗಳಿರುವ ಗದ್ದುಗೆಗಳು ಇಂದು ಅವಜ್ಞೆಗೆ ತುತ್ತಾಗಿದೆ. ರಾಜ್ಯದಲ್ಲಿ ಸರ್ಕಾರಗಳು ಬದಲಾದರೂ, ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಬದಲಾವಣೆ ಆದರೂ ರಾಜರ ಗದ್ದುಗೆಗಳು ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದ್ದು, ಅಭಿವೃದ್ಧಿಗಾಗಿ ಕಾಯುತ್ತಿವೆ.

ಇಲ್ಲಿ ಚೌಕಾಕಾರದಲ್ಲಿರುವ ರಾಜರ ಮತ್ತು ಅವರ ಕುಟುಂಬದವರ ಸಮಾಧಿಗಳು ಇಂಡೊ–ಇಸ್ಲಾಮಿಕ್ ಶೈಲಿಯಲ್ಲಿರುವುದು ವಿಶೇಷ.

ADVERTISEMENT

‘ಈ ಪ್ರದೇಶದಲ್ಲಿ 1808ರಲ್ಲಿ ಕೊಡಗಿನ ರಾಜ ಲಿಂಗರಾಜೇಂದ್ರ, ರಾಣಿ ದೇವಮ್ಮಾಜಿ, 1821ರಲ್ಲಿ ವೀರರಾಜೇಂದ್ರ ಹಾಗೂ ಆತನ ರಾಣಿ ಮಹದೇವಮ್ಮಾಜಿ ಅವರ ಸಮಾಧಿಗಳು ಇಲ್ಲಿ ನಿರ್ಮಾಣವಾಗಿವೆ. ಇವರಿಬ್ಬರ ಗುರುವಾಗಿದ್ದ ರುದ್ರಪ್ಪ ಅವರ ಸಮಾಧಿಯನ್ನು 1834ರಲ್ಲಿ ರಾಜರ ಸಮಾಧಿಯ ಎಡಭಾಗದಲ್ಲಿ ಅಂದಿನ ದಿವಾನರಾಗಿದ್ದ ಚೆಪ್ಪುಹಿರ ಪೊನ್ನಪ್ಪ ಅವರು ನಿರ್ಮಿಸಿದರು’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿರುವ ದಾಖಲೆಗಳು ಹೇಳುತ್ತವೆ.

ಒಟ್ಟು 250 ಚದರಡಿಗಳ ಈ ಕಟ್ಟಡದಲ್ಲಿ ವಿಸ್ತಾರದ ಮೊಗಸಾಲೆ ಇದೆ. ಮಧ್ಯದಲ್ಲಿ ಸಮಾಧಿಗಳಿರುವ ಸ್ಥಳವಿದೆ. ಇದರ ಬಾಗಿಲುವಾಡಗಳು ಪುಷ್ಪಾಲಂಕಾರದಿಂದ ಕೂಡಿದ್ದು, ಸಿಂಹದ ಶಿಲ್ಪ ಆಕರ್ಷಣೀಯವಾಗಿದೆ. ಜತೆಗೆ, ಮುಖ್ಯದ್ವಾರದ ಪಾರ್ಶ್ವಗೋಡೆಯ ಮೇಲೆ 4 ಬಾಹುಗಳ ಶಿವನ ಉಬ್ಬು ಕೆತ್ತನೆಯೂ ಮನೋಹರವಾಗಿದೆ.

ಇಲ್ಲಿನ ಗುಮ್ಮಟ, ಚೌಕ ಪೀಠವುಳ್ಳ ಮಿನಾರುಗಳು, ಅವುಗಳ ತುದಿಯಲ್ಲಿ ಚಿನ್ನದ ಗಿಲೀಟಿನ ಕಲಶಗಳು, ನಂದಿ ವಿಗ್ರಹ ಒಂದೇ ಎರಡೇ ಈ ಗದ್ದುಗೆಗಳ ವಾಸ್ತುಶಿಲ್ಪವನ್ನು ವಿವರಿಸಲು ಸಾವಿರ ಪದಗಳಾದರೂ ಸಾಲುವುದಿಲ್ಲ. ಅಷ್ಟರಮಟ್ಟಿಗಿನ ಇತಿಹಾಸ, ವಾಸ್ತುಶಿಲ್ಪದ ಶೈಲಿಯನ್ನು ಇದು ತನ್ನೊಳಗಿರಿಸಿಕೊಂಡಿದೆ.

ಇದರ ಸಮೀಪದಲ್ಲೇ ಇರುವ ಶಿಲಾಶಾಸನವು ಟಿಪ್ಪುಸುಲ್ತಾನ್ ವಿರುದ್ಧ ಹೋರಾಡಿ ಮಡಿದ ಬೋಪು ದಂಡನಾಯಕ ಎಂಬ ವೀರರ ಕುರಿತ ವಿವರಣೆ ನೀಡುತ್ತದೆ. ಇಷ್ಟೆಲ್ಲ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವದ ಈ ಗದ್ದುಗೆ ಕುರಿತ ನಿರ್ಲಕ್ಷ್ಯ ಧೋರಣೆಯಿಂದ ಇವುಗಳು ಅವನತಿಯ ಹಾದಿ ಹಿಡಿದಿವೆ.

ಅದೇ ಮೈಸೂರಿನಲ್ಲಿರುವ ರಾಜರ ಸಮಾಧಿಗಳು ಮೈಸೂರು– ನಂಜನಗೂಡು ರಸ್ತೆಯಲ್ಲಿರುವ ಮನುವನದಲ್ಲಿದ್ದು, ಗಮನ ಸೆಳೆಯುವಂತಿದೆ. ಹಿಂದೆ ಆಳಿದ ರಾಜ, ಮಹಾರಾಜರ ಸಮಾಧಿಗಳನ್ನು ಜತನದಿಂದ ರಕ್ಷಿಸಲಾಗಿದೆ. ಆದರೆ, ಕೊಡಗಿನ ರಾಜರ ಸಮಾಧಿಗಳ ಯೋಗಕ್ಷೇಮ ವಿಚಾರಿಸುವವರು ಯಾರೂ ಇಲ್ಲದ್ದಾಗಿದ್ದು, ಕಾಯಕಲ್ಪಕ್ಕಾಗಿ ಗದ್ದುಗೆ ಕಾಯುತ್ತಿದೆ.

ಕನಿಷ್ಠ ಪಕ್ಷ ಈ ಉಳಿದುಕೊಂಡಿರುವ ಕಟ್ಟಡಗಳನ್ನು ರಿಪೇರಿ ಮಾಡಿ, ಸುಣ್ಣ ಬಣ್ಣ ಹಾಕಿ, ಅದರ ಐತಿಹಾಸಿಕತೆ ನಾಶವಾಗದ ಹಾಗೆ ರಕ್ಷಿಸಬೇಕಿದೆ. ಇದರ ಸುತ್ತಲೂ ಇರುವ ಜಾಗದಲ್ಲಿ ಸುಂದರ ಉದ್ಯಾನ ನಿರ್ಮಿಸಿ, ಉತ್ತಮ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ.

ಶಿಥಿಲಾವಸ್ಥೆಯಲ್ಲಿರುವ ರಾಜರ ಗದ್ದುಗೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.