ADVERTISEMENT

ಕೊಡಗು | ಸಿದ್ದಾಪುರದಲ್ಲೂ ಇಲ್ಲ ಬಸ್ ನಿಲ್ದಾಣ

ಶೌಚಾಲಯದ ದುರ್ವಾಸನೆಯಿಂದ ಉಪಯೋಗಕ್ಕೆ ಬಾರದ ವಿಶ್ರಾಂತಿ ಕೊಠಡಿ

ರೆಜಿತ್‌ಕುಮಾರ್ ಗುಹ್ಯ
Published 12 ಜೂನ್ 2025, 6:05 IST
Last Updated 12 ಜೂನ್ 2025, 6:05 IST
ಸಿದ್ದಾಪುರ ಬಸ್‌ನಿಲ್ದಾಣದಲ್ಲಿರುವ ಶೆಡ್
ಸಿದ್ದಾಪುರ ಬಸ್‌ನಿಲ್ದಾಣದಲ್ಲಿರುವ ಶೆಡ್   

ಸಿದ್ದಾಪುರ: ಸಿದ್ದಾಪುರ ಪಟ್ಟಣದಲ್ಲಿ ಬಸ್‌ ನಿಲ್ಲಿಸಲು ಜಾಗವಿದೆಯಾದರೂ ಬಸ್‌ನಿಲ್ದಾಣ ಇಲ್ಲ. ಇಲ್ಲೂ ಜನರು ಮಳೆಯಲ್ಲಿ ನೆನೆಯುತ್ತಲೇ ಬಸ್‌ಗಾಗಿ ಕಾಯಬೇಕಾಗಿದೆ. ಶೌಚಾಲಯದ ದುರ್ವಾಸನೆಯಿಂದ ಇರುವ ಒಂದು ಪ್ರಯಾಣಿಕರ ವಿಶ್ರಾಂತಿ ಕೊಠಡಿ ಇದ್ದೂ ಇಲ್ಲದಂತಾಗಿದೆ. ಇನ್ನು ಪಕ್ಕದ ನೆಲ್ಯಹುದಿಕೇರಿ ಪಟ್ಟಣದಲ್ಲಿ ತಂಗುದಾಣವಿದ್ದರೂ, ಶೌಚಾಲಯ ಇಲ್ಲದೇ ಜನರು ‍ಪರದಾಡುತ್ತಿದ್ದಾರೆ.

ಸಿದ್ದಾಪುರದಲ್ಲಿರುವ ತೆರೆದ ಬಸ್‌ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಒಟ್ಟಿಗೆ ನಿಲ್ಲುತ್ತವೆ. ಪ್ರಯಾಣಿಕರಿಗೆ ಒಂದು ಸೂರು ಇಲ್ಲಿಲ್ಲ. ಒಂದು ಮಿನಿ ಬಸ್‌ನಿಲ್ದಾಣವನ್ನಾಗಿ ನಿರ್ಮಿಸಿಕೊಡಿ ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಇಲ್ಲಿರುವ ಶೌಚಾಲಯವು ಸ್ವಚ್ಛತೆ ಕಂಡು ಹಲವು ತಿಂಗಳುಗಳೇ ಕಳೆದಿವೆ. ಮೂಗು ಮುಚ್ಚಿಕೊಂಡೇ ಶೌಚಾಲಯ ಪ್ರವೇಶಿಸುವ ಸ್ಥಿತಿ ಇದೆ. ಇದರಿಂದ ಹೊರಹೊಮ್ಮುವ ದುರ್ವಾಸನೆಯಿಂದ ಪಕ್ಕದಲ್ಲೇ ಇರುವ ವಿಶ್ರಾಂತಿ ಕೊಠಡಿಯಲ್ಲಿ ಪ್ರಯಾಣಿಕರು ಕೂರಲಾಗದ ಸ್ಥಿತಿ ಇದೆ. ಶೌಚಾಲಯವನ್ನು ಸ್ವಚ್ಛಗೊಳಿಸಿದರೆ ವಿಶ್ರಾಂತಿ ಕೊಠಡಿಯಲ್ಲಿ ಕೂರಬಹುದು ಎಂದು ಹೋರಾಟಗಾರ ಪಿ.ಆರ್.ಹೇಳುತ್ತಾರೆ.

ADVERTISEMENT

ವಿಶ್ರಾಂತಿ ಕೊಠಡಿ ಸುಣ್ಣ ಬಣ್ಣ ಕಾಣದೇ ಹಲವು ವರ್ಷಗಳೇ ಕಳೆದಿದ್ದು, ಶೌಚಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಬಸ್‌ನಿಲ್ದಾಣದಲ್ಲಿ ಮತ್ತೊಂದು ಬದಿಯಲ್ಲಿ ಪ್ರಯಾಣಿಕರಿಗೆ ಕೂರಲು ಶೆಡ್ ನಿರ್ಮಿಸಲಾಗಿದ್ದು, ಹೆಚ್ಚು ಪ್ರಯಾಣಿಕರು ಶೆಡ್ ಅನ್ನೇ ಅವಲಂಬಿಸಿದ್ದಾರೆ. ಆದರೆ, ಶೆಡ್‌ನಲ್ಲಿ ಕೆಲವೇ ಮಂದಿಗಷ್ಟೇ ಕೂರಲು ಸಾಧ್ಯವಾಗುತ್ತಿದ್ದು, ಗಾಳಿ ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ.

ಸಿದ್ದಾಪುರ ಬಸ್‌ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಸ್ವಲ್ಪವೇ ಜಾಗವಿದ್ದು, ವಾಹನ ನಿಲ್ಲಿಸಲು ಪರದಾಡಬೇಕಾಗಿದೆ. ಪ್ರಯಾಣಿಕರನ್ನು ಕರೆತರುವ ವಾಹನಗಳು ಬಸ್‌ನಿಲ್ದಾಣದಿಂದ ದೂರ ನಿಲ್ಲಿಸಬೇಕಾಗಿದೆ. ಇರುವ ಪಾರ್ಕಿಂಗ್ ಜಾಗದಲ್ಲಿ ಸ್ಥಳೀಯ ವ್ಯಾಪಾರಸ್ಥರು ಬೆಳಿಗ್ಗೆಯಿಂದ ರಾತ್ರಿಯವರೆಗೂ ವಾಹನ ನಿಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ನೆಲ್ಯಹುದಿಕೇರಿ ಪಟ್ಟಣದಲ್ಲಿ ಬಸ್‌ ತಂಗುದಾಣ ಇದೆ. ಆದರೆ, ಶೌಚಾಲಯ ಇಲ್ಲ. ಇಲ್ಲಿ ಮಾತ್ರವಲ್ಲ, ಇಡೀ ಪಟ್ಟಣದಲ್ಲೇ ಶೌಚಾಲಯ ಇಲ್ಲ. ಇದರಿಂದ ಇಲ್ಲಿಗೆ ನಿತ್ಯ ಆಗಮಿಸುವ ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ಪರದಾಡುತ್ತಿದ್ದಾರೆ.

ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಮಾಡಬೇಕೆಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹಲವು ಗ್ರಾಮಸಭೆಗಳಲ್ಲಿ ಶೌಚಾಲಯ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಈವರೆಗೂ ಪಟ್ಟಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸಾಧ್ಯವಾಗಿಲ್ಲ. ಇದಲ್ಲದೇ ನೆಲ್ಯಹುದಿಕೇರಿ ಪಟ್ಟಣದಲ್ಲಿ ಜನದಟ್ಟಣೆ ಇದ್ದು, ಶಾಲೆಗೆ ಹೋಗುವ ಹಾಗೂ ಶಾಲೆ ಬಿಡುವ ಸಮಯದಲ್ಲಿ ಪೊಲೀಸ್ ಇಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಸಂಜೆ ವೇಳೆ ಹೆಚ್ಚು ವಾಹನ ದಟ್ಟಣೆ ಇರಲಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.‌

ಸಿದ್ದಾಪುರ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಸಾರ್ವಜನಿಕ ಶೌಚಾಲಯ
ನೆಲ್ಯಹುದಿಕೇರಿ ಬಸ್‌ತಂಗುದಾಣ
ಸಿದ್ದಾಪುರದಲ್ಲಿ ಬಸ್‌ ನಿಲ್ಲುವ ಜಾಗ
ಸಿದ್ದಾಪುರದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಒಟ್ಟಿಗೆ ನಿಲ್ಲುತ್ತವೆ
ಗಾಳಿ, ಮಳೆಯಿಂದ ಇಲ್ಲ ಪ್ರಯಾಣಿಕರಿಗೆ ರಕ್ಷಣೆ ಸಿದ್ದಾಪುರದ ಶೌಚಾಲಯದ ಸ್ವಚ್ಛತೆಗಾಗಿ ಪ್ರಯಾಣಿಕರ ಒತ್ತಾಯ ಬಸ್‌ನಿಲ್ದಾಣ ನಿರ್ಮಿಸುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ

ಪ್ರತಿಕ್ರಿಯೆಗಳು

ಎರಡು ಮಹಡಿ ತಂಗುದಾಣ ನಿರ್ಮಾಣಕ್ಕೆ ಚಿಂತನೆ

ಸಾರ್ವಜನಿಕ ಶೌಚಾಲಯ ನಿರ್ಮಿಸಲು ಪಟ್ಟಣದಲ್ಲಿ ಜಾಗವಿಲ್ಲ. ಜಾಗ ಹುಡುಕಿ ಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ. ಬಸ್‌ತಂಗುದಾಣದಿಂದ ದೂರದಲ್ಲಿ ಶೌಚಾಲಯ ನಿರ್ಮಿಸಿ ಪ್ರಯೋಜನವಿಲ್ಲ. ಪ್ರಸ್ತುತ ಇರುವ ತಂಗುದಾಣವನ್ನು ಕೆಡವಿ ಎರಡು ಮಹಡಿ ನಿರ್ಮಿಸಿ ಮೇಲಿನ ಮಹಡಿಯಲ್ಲಿ ಶೌಚಾಲಯ ನಿರ್ಮಿಸುವ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ.
ನಂಜುಂಡಸ್ವಾಮಿ ನಲ್ಯಹುದಿಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಸೂಚನೆ ನೀಡುತ್ತೇವೆ

ಸಿದ್ದಾಪುರ ಬಸ್‌ನಿಲ್ದಾಣದ ವಿಶ್ರಾಂತಿ ಕೊಠಡಿಯ ಶುಚಿತ್ವದ ಕುರಿತು ದೂರು ಬಂದಿದ್ದು ಶೀಘ್ರದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕೊಠಡಿಗೆ ಸುಣ್ಣ ಬಣ್ಣ ಬಳಿದು ಶುಚಿತ್ವ ಕಾಪಾಡುವ ಬಗ್ಗೆ ಸೂಚನೆ ನೀಡುತ್ತೇವೆ.
ಮಳನಿಸ್ವಾಮಿ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ಹೋರಾಟ ನಡೆಸಿದರೂ ಪ್ರಯೋಜನವಿಲ್ಲ

ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿ ದಿನ ನೂರಾರು ಮಂದಿ ಬಸ್‌ತಂಗುದಾಣಕ್ಕೆ ಬರುತ್ತಿದ್ದಾರೆ. ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಮಹಿಳೆಯರು ಮಕ್ಕಳು ಸೇರಿದಂತೆ ಸಾರ್ವಜನಿಕರು ಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೋರಾಟ ನಡೆಸಿದರೂ ಈವರೆಗೂ ಕ್ರಮ ಕೈಗೊಂಡಿಲ್ಲ.
ಪಿ.ಆರ್.ಭರತ್ ಕಾರ್ಯದರ್ಶಿ ಸಿ.ಪಿ.ಐ.ಎಂ ನೆಲ್ಯಹುದಿಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.