ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಮಡಿಕೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ 77.86 ರಷ್ಟು ಪ್ರಗತಿ ಆಗಿದೆ.
ವಿದ್ಯುತ್ ಮೀಟರ್ ಹೊಂದಿರುವ ಒಟ್ಟು 1,34,396 ಮನೆಗಳನ್ನು ಸಮೀಕ್ಷೆಗಾಗಿ ಗುರುತಿಸಲಾಗಿತ್ತು. ಆ ಪೈಕಿ 1,04,644 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 29,752 ಮನೆಗಳ ಸಮೀಕ್ಷೆ ಬಾಕಿ ಉಳಿದಿದೆ.
ತಾಲ್ಲೂಕುವಾರು ಗಮನಿಸಿದಾಗ ಕುಶಾಲನಗರ ತಾಲ್ಲೂಕಿನಲ್ಲಿ 304 ಬ್ಲಾಕ್‍ಗಳಲ್ಲಿ 34,637 ಕುಟುಂಬಗಳಲ್ಲಿ 26,819 ಕುಟುಂಬಗಳ ಸಮೀಕ್ಷೆ ಆಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 264 ಬ್ಲಾಕ್‍ಗಳಲ್ಲಿ 35,127 ಕುಟುಂಬಗಳಲ್ಲಿ 25,610 ಕುಟುಂಬಗಳ ಸಮೀಕ್ಷೆ ಆಗಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 87 ಬ್ಲಾಕ್‍ಗಳಲ್ಲಿ 10,337 ಕುಟುಂಬಗಳಲ್ಲಿ 8,743 ಕುಟುಂಬಗಳ ಸಮೀಕ್ಷೆ ಆಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 266 ಬ್ಲಾಕ್‍ಗಳಲ್ಲಿ 29,402 ಕುಟುಂಬಗಳ ಗುರಿಯಲ್ಲಿ 24,428 ಕುಟುಂಬಗಳ ಸಮೀಕ್ಷೆ ಆಗಿದೆ.
ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ 210 ಬ್ಲಾಕ್‍ಗಳಲ್ಲಿ 24,893 ಕುಟುಂಬಗಳ ಗುರಿಯಲ್ಲಿ 19,044 ಕುಟುಂಬಗಳ ಸರ್ವೇ ಆಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್ ತಿಳಿಸಿದ್ದಾರೆ.
ಸಮೀಕ್ಷೆಗಾಗಿ 1,34,396 ಮನೆಗಳನ್ನು ಗುರುತಿಸಲಾಗಿತ್ತು. ಆ ಪೈಕಿ 1,04,644 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಾರ್ವಜನಿಕರೇ ಸ್ವಯಂ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಬಹುದು– ಎ.ಎಸ್.ದೀಪಕ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ಜನರು ಸ್ವಯಂ ಭಾಗವಹಿಸಲು ಅವಕಾಶ
ಸಾರ್ವಜನಿಕರು ಕೂಡ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯ ಸಿದ್ಧಪಡಿಸಲಾಗಿದೆ.
ಸಾರ್ವಜನಿಕರು https://kscbcselfdeclaration.karnataka.gov.in/ನಲ್ಲಿ ಸ್ವಯಂ ಮಾಹಿತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಲಿಂಕ್‍ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ‘ನಾಗರಿಕ ಎಂಬುದನ್ನು ಆಯ್ಕೆ ಮಾಡಿದ್ದಲ್ಲಿ ಲಾಗಿನ್‍ನಲ್ಲಿ ಮುಂದುವರಿಯಲು ಕೋರಲಾಗುತ್ತದೆ. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಲ್ಲಿ, ಒಟಿಪಿ ಬರಲಿದ್ದು, ಅದನ್ನು ದಾಖಲು ಮಾಡಬೇಕಿದೆ.
ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕಿದೆ. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಕ್ಕರ್‌ನಲ್ಲಿರುವ ಸಂಖ್ಯೆಯನ್ನು ದಾಖಲಿಸಿ ಸ್ಕ್ರೀನ್‍ನಲ್ಲಿ ಕೋರುವ ಮಾಹಿತಿ ದಾಖಲು ಮಾಡಬೇಕಿದೆ.
ಈ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ಅಂಗವಿಕಲರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್‍ಗೆ ಸಂದೇಶ ಬರಲಿದೆ.
ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.