ಮಡಿಕೇರಿ: 2026ರ ಹೊಸ ವರ್ಷಾಚರಣೆಗೆ ಕೊಡಗು ಜಿಲ್ಲೆ ಸನ್ನದ್ಧವಾಗಿದೆ. ಡಿ.31ರ ರಾತ್ರಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಾವಿರಾರು ಮಂದಿ ಈಗಾಗಲೇ ಜಿಲ್ಲೆಯ ವಿವಿಧ ರೆಸಾರ್ಟ್‌ಗಳು, ಹೋಂಸ್ಟೇಗಳಲ್ಲಿ ತಂಗಿದ್ದಾರೆ. 31ರ ರಾತ್ರಿ 12 ಗಂಟೆ ಬರುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಹಲವು ಎಚ್ಚರಿಕೆಗಳನ್ನು ರವಾನಿಸಿದ್ದಾರೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮಾಲೀಕರು ಶಬ್ದಮಾಲಿನ್ಯ ಉಂಟು ಮಾಡಲು ಹಾಗೂ ಧ್ವನಿವರ್ಧಕದ ಶಬ್ದವು ನಿಗದಿತ ಡೆಸಿಬಲ್ಸ್ ಮಿತಿ ಮೀರುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಸೂಚಿಸಿದ್ದಾರೆ.
ಅರಣ್ಯ, ನದಿ ತೀರ, ಸಾರ್ವಜನಿಕ ಪ್ರದೇಶಗಳಲ್ಲಿ ಡಿ.ಜೆ ಬಳಸುವುದನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಯು ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿಯಲ್ಲಿರಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ, ಸರಬರಾಜು, ಬಳಕೆ ಮಾಡುವುದು ಕಂಡುಬಂದಲ್ಲಿ ಅವುಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದೇ ಸಹಕರಿಸಿರುವುದು ಕಂಡುಬಂದಲ್ಲಿ ಅಂತಹ ಮಾಲೀಕರು
ಹಾಗೂ ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಪರವಾನಗೆ ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಾತ್ರವಲ್ಲ, ಚೆಕ್‌ಪೋಸ್ಟ್‌ಗಳಲ್ಲಿಯೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮದ್ಯ ಸೇವಿಸಿ ವಾಹನ ಚಾಲನೆ; ಬಂಧನ: ಇಬ್ನಿವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಕ್ಷಯ್‌ಕುಮಾರ್ ಎಂಬಾತ ಮದ್ಯಸೇವಿಸಿ ಅತೀವೇಗ, ಅಜಾಗೂಕತೆಯಿಂದ ಜೀಪನ್ನು ಚಲಾಯಿಸಿ ಅಪಘಾತಪಡಿಸಿದ್ದರಿಂದ 3 ವಾಹನಗಳು ಜಖಂಗೊಂಡಿದ್ದು, ಅಕ್ಷಯ್‌ಕುಮಾರ್‌ನನ್ನು ಬಂಧಿಸಲಾಗಿದೆ.
ಹೊಸ ವರ್ಷ ಆಚರಣೆಯ ವೇಳೆ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ಅಪಘಾತಪಡಿಸಿದ್ದಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ ಪ್ರಕರಣ ದಾಖಲಿಸಬಹುದು. ಅಂತಹ ವ್ಯಕ್ತಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆಯನ್ನು ಅಥವಾ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರೇವ್‌ಪಾರ್ಟಿಗೆ ಯತ್ನ; ಪ್ರಕರಣ ದಾಖಲು ಕುಶಾಲನಗರದ ತಂಡವೊಂದು ಸೋಮವಾರಪೇಟೆ ಭಾಗದಲ್ಲಿ ರೇವ್ ಪಾರ್ಟಿ ಆಯೋಜಿಸಲು ಸಿದ್ಧತೆ ನಡೆಸಿತ್ತು. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಾಗ ಅವರು ಮಾದಕವಸ್ತು ಸೇವನೆ ಮಾಡಿರುವುದು ಕಂಡು ಬಂದಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಶಂಕಿತ 50 ಮಂದಿಯನ್ನು ಪರೀಕ್ಷಿಸಿದ್ದು ಅವರಲ್ಲಿ ಕೆಲವರು ಮಾದಕ ವಸ್ತು ಸೇವಿಸಿರುವುದು ಖಚಿತಪಟ್ಟಿದ್ದು ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ: 08272–228300 94808 04900ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.