ADVERTISEMENT

ಕೊಡಗು | ಬೆನ್ನುಹುರಿ ಅಪಘಾತ: ಹೆಚ್ಚಬೇಕಿದೆ ಪುನರ್ವಸತಿ

ಗಮನ ವಹಿಸಬೇಕಿದೆ ಸರ್ಕಾರ ಸಂಘ, ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು

ಕೆ.ಎಸ್.ಗಿರೀಶ್
Published 6 ಅಕ್ಟೋಬರ್ 2025, 5:42 IST
Last Updated 6 ಅಕ್ಟೋಬರ್ 2025, 5:42 IST
ಸೇವಾಭಾರತಿ– ಸೇವಾಧಾಮ ಸಂಸ್ಥೆಯು ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ, ಅಶ್ವಿನಿ ಆಸ್ಪತ್ರೆ ಸಹಯೋಗದಲ್ಲಿ ಮಡಿಕೇರಿಯಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿ ನಡೆಸಿದ್ದ 23ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿ ಕುರ್ಚಿ ಜಾಥಾದಲ್ಲಿ ಹಲವು ಮಂದಿ ಭಾಗಹಿಸಿದರು
ಸೇವಾಭಾರತಿ– ಸೇವಾಧಾಮ ಸಂಸ್ಥೆಯು ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ, ಅಶ್ವಿನಿ ಆಸ್ಪತ್ರೆ ಸಹಯೋಗದಲ್ಲಿ ಮಡಿಕೇರಿಯಲ್ಲಿ ಕಳೆದ ವರ್ಷ ಫೆಬ್ರುವರಿಯಲ್ಲಿ ನಡೆಸಿದ್ದ 23ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿ ಕುರ್ಚಿ ಜಾಥಾದಲ್ಲಿ ಹಲವು ಮಂದಿ ಭಾಗಹಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಸಂಖ್ಯೆ ಸಾಕಷ್ಟಿದೆ. ಇತರೆ ಜಿಲ್ಲೆಗಳಲ್ಲಿ ಅಪಘಾತದಿಂದ ಹೆಚ್ಚು ಮಂದಿ ಬೆನ್ನುಹುರಿ ಸಮಸ್ಯೆಗೆ ಸಿಲುಕಿದರೆ ಕೊಡಗಿನಲ್ಲಿ ಅಪಘಾತದ ಜೊತೆಗೆ ಎತ್ತರದಿಂದ ಬಿದ್ದವರೂ ಹೆಚ್ಚಿನ ಸಂಖ್ಯೆಯಲ್ಲಿ ಬೆನ್ನುಹುರಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಇಲ್ಲಿನ ಕಾಫಿತೋಟಗಳಲ್ಲಿ ಮರ ಕಪಾತು ಮಾಡುವ ಸಲುವಾಗಿ, ಇಲ್ಲವೇ ಕಾಳುಮೆಣಸು ಕೊಯ್ಯಲು ಎತ್ತರದ ಮರಗಳನ್ನು ಏರಬೇಕಿದೆ. ಸಾವಿರಾರು ಕಾರ್ಮಿಕರು ಈ ಕೆಲಸವನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಎತ್ತರದ ಮರವನ್ನೇರಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬೀಳುವವರ ಸಂಖ್ಯೆ ಇಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚು. ಕೆಲವರು ಸ್ಥಳದಲ್ಲೇ ಮೃತಪಟ್ಟರೆ ಹಲವು ಮಂದಿ ಬದುಕುಳಿಯುತ್ತಾರೆ. ಆದರೆ, ಇಂತಹವರ ಕಷ್ಟ ಹೇಳತೀರದಾಗಿದೆ.

ಆರಂಭದಲ್ಲಿ ಮಾಲೀಕರಿಂದ ಒಂದಿಷ್ಟು ಪರಿಹಾರದ ಹಣ ಸಿಕ್ಕರೂ ನಂತರ ಯಾರೊಬ್ಬರೂ ಇವರತ್ತ ಗಮನ ಹರಿಸುತ್ತಿಲ್ಲ. ಮತ್ತೆ ಶ್ರಮದಾಯಕ ಕೆಲಸಗಳನ್ನು ಮಾಡಲಾಗದೇ ಪರಾವಲಂಬಿಯಾಗಿಯೇ ಅನೇಕರು ಜೀವನ ಕಳೆಯಬೇಕಿದೆ. ಇವರು ಬದುಕಿರುವವರೆಗೆ ಇವರಿಂದ ವಿವಿಧ ರೂಪದಲ್ಲಿ ತೆರಿಗೆ ಪಡೆಯುತ್ತಿದ್ದ ಸರ್ಕಾರವೂ ಇವರ ನೆರವಿಗೆ ಧಾವಿಸುತ್ತಿಲ್ಲ. ಇವರಲ್ಲಿ ಬಹುತೇಕ ಮಂದಿ ಇದು ತಮ್ಮ ಗ್ರಹಚಾರ, ಪೂರ್ವಜನ್ಮದ ಕರ್ಮ ಎಂದೇ ತಿಳಿದು ನೋವು ತಿನ್ನುತ್ತಾ ಮನೆಯಲ್ಲೇ ಇದ್ದಾರೆ.

ADVERTISEMENT

ಬಹಳಷ್ಟು ಸಂದರ್ಭಗಳಲ್ಲಿ ಗಾಯಗೊಂಡವರು ದೂರು ನೀಡುವುದಕ್ಕೆ ಹೋಗುವುದಿಲ್ಲ. ಚಿಕಿತ್ಸೆ ಕೊಡಿಸುವುದಾಗಿ ಹೇಳುವ ಮಾಲೀಕರ ಭರವಸೆ ಮಾತುಗಳನ್ನು ಅವರು ನಂಬುತ್ತಾರೆ. ಚಿಕಿತ್ಸೆ ಕೊಡಿಸಲು ಕೊಡಗಿನಲ್ಲಿ ಸಾಧ್ಯವಿಲ್ಲ. ಇಲ್ಲಿ ಬೆನ್ನುಹುರಿ ತಜ್ಞ ವೈದ್ಯರಾಗಲಿ, ನರರೋಗ ತಜ್ಞ ವೈದ್ಯರಾಗಲಿ ಇಲ್ಲ. ಹೀಗಾಗಿ, ಮಂಗಳೂರು ಇಲ್ಲವೇ ಮೈಸೂರಿನಲ್ಲಿಯೇ ಚಿಕಿತ್ಸೆ ಕೊಡಿಸಬೇಕಿದೆ. ಅಲ್ಲಿಗೆ ಕರೆದುಕಂಡು ಹೋಗಿ ದುಬಾರಿ ಚಿಕಿತ್ಸೆ ನೀಡಿದರೂ ಹಲವು ಸಂದರ್ಭಗಳಲ್ಲಿ ಚಿಕಿತ್ಸೆ ಯಶಸ್ವಿಯಾಗುವುದಿಲ್ಲ. ಫಾಲೊಅಪ್ ಚಿಕಿತ್ಸೆ ಕಡೆಗೆ ಮಾಲೀಕರು ನಿರ್ಲಕ್ಷ್ಯ ವಹಿಸಿದರೆ ಕುಟುಂಬದವರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

ಬಸ್ ಹತ್ತಲಾಗದ ಸ್ಥಿತಿಯಲ್ಲಿರುವ ಅವರನ್ನು ಖಾಸಗಿ ವಾಹನ ಬಾಡಿಗೆ ಪಡೆದೆ ಕರೆದುಕೊಂಡು ಹೋಗಬೇಕಿದೆ. ಇದಕ್ಕೆಲ್ಲ ದುಬಾರಿ ವೆಚ್ಚವೇ ಆಗುತ್ತದೆ. ಸಾಮಾನ್ಯವಾಗಿ ಮರದಿಂದ ಬಿದ್ದವರು ಬಹುತೇಕ ಎಲ್ಲರೂ ಬಡ ಕಾರ್ಮಿಕರೆ ಆಗಿರುವುದರಿಂದ ಇಷ್ಟು ಹಣವನ್ನು ಭರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.

ಈಗ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯಲ್ಲಿ ಬೆನ್ನುಹುರಿ ಶಸ್ತ್ರಚಿಕಿತ್ಸೆ ಲಭ್ಯವಿಲ್ಲ. ಫಿಸಿಯೊಥೆರಪಿ ಲಭ್ಯವಿದೆ. ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಫಿಸಿಯೊಥೆರಪಿ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಎತ್ತರದಿಂದ ಬೀಳುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಬೆನ್ನುಹುರಿ ತಜ್ಞ ವೈದ್ಯರಾಗಲಿ, ನರರೋಗ ತಜ್ಞ ವೈದ್ಯರನ್ನಾಗಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ನೇಮಕಾತಿ ಮಾಡಿಕೊಳ್ಳಬೇಕಿದೆ.

ಬೆನ್ನು ಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳು ಹಲವು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಶಜ್ಞಾನ, ಮಲ, ಮೂತ್ರ ನಿಯಂತ್ರಣ ಕಳೆದುಕೊಳ್ಳಬಹುದು, ಚಲನೆ, ಕೂರಲು ಮತ್ತು ನಿಲ್ಲಲು ಸಮತೋಲನ ಸಮಸ್ಯೆ ಉಂಟಾಗಬಹುದು, ಒತ್ತಡ ಅಥವಾ ಹಾಸಿಗೆ ಗಾಯದ ಸಮಸ್ಯೆ ಉಂಟಾಗುತ್ತದೆ, ಮೂತ್ರನಾಳದ ಸೋಂಕು, ನರಗಳ ಸೆಳೆತ ಮತ್ತು ನಡುಕ, ಚರ್ಮದ ತೊಂದರೆಗಳು, ಕೌಟುಂಬಿಕ ಕಲಹಗಳು, ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳೂ ಉಂಟಾಗುತ್ತವೆ.

ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ

ನೆರವಿಗೆ ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಸೇವಾಭಾರತಿ ಅಥವಾ ಸೇವಾಧಾಮ ಮತ್ತು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗಾಗಿ 2022ರಿಂದ ಜಾಗೃತಿ ಮತ್ತು ಪುನಃಶ್ಚೇತನ ಸೇವೆ ನೀಡುತ್ತಿವೆ. ‘ರೋಗಿಯ ಸ್ಥಿತಿಯನ್ನು ಪರಿಶೀಲಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸೇವಾಧಾಮಕ್ಕೆ ಕರೆದುಕೊಂಡು ಬರಲಾಗುತ್ತದೆ. ಆರ್ಥಿಕ ಶಕ್ತಿ ಕಡಿಮೆ ಇದ್ದರೆ ಸ್ಥಳೀಯವಾಗಿಯೇ ದಾನಿಗಳನ್ನು ಹುಡುಕಿ ಅವರ ನೆರವಿನಿಂದ ಸೇವಾಧಾಮಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತದೆ. ಸೇವಾಧಾಮದಲ್ಲಿ ಚಿಕಿತ್ಸೆಯಲ್ಲದೇ ಪರವಾಲಂಬಿಯಾಗಿ ಬದುಕದೇ ಸ್ವಾವಲಂಬಿಯಾಗಿ ಹೇಗೆ ಬದುಕಬೇಕು ಎಂಬ ಕುರಿತೂ ತರಬೇತಿ ನೀಡಲಾಗುತ್ತದೆ. ಇದರಿಂದ ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಸ್ವಾವಲಂಬಿ ಜೀವನ ನಡೆಸಬಹುದು. ಕೊಡಗೂ ಸೇರಿದಂತೆ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಚಿಕ್ಕಮಗಳೂರು ಹಾಸನ ಜಿಲ್ಲೆಗಳ 768 ಮಂದಿಯನ್ನು ಗುರುತಿಸಲಾಗಿದೆ. ಅವರಲ್ಲಿ 249 ಮಂದಿಯನ್ನು ಪುನಶ್ಚೇತನಗೊಳಿಸಿ ಮನೆಗೆ ಕಳುಹಿಸಲಾಗಿದೆ. ಇನ್ನುಳಿದವರು ತೀವ್ರತರವಾದ ಪೆಟ್ಟು ತಿಂದು ಹಾಸಿಗೆಯಲ್ಲೇ ಮಲಗುವಂತಾಗಿದೆ. ಇವರಿಗೆ ಬೇಕಾದ ಅಗತ್ಯ ನೆರವನ್ನು ಸೇವಾಭಾರತಿ ನೀಡುತ್ತಿದೆ.

ಫಿಸಿಯೋಥೆರಪಿ ಲಭ್ಯ

‘ಬೆನ್ನುಹುರಿ ಚಿಕಿತ್ಸೆಗೆ ಬೆನ್ನುಹುರಿ ಶಸ್ತ್ರಚಿಕಿತ್ಸಕರು ಹಾಗೂ ನರರೋಗ ಚಿಕಿತ್ಸಕರು ಬೇಕು. ಆಸ್ಪತ್ರೆಯಲ್ಲಿ ಈ ತಜ್ಞ ವೈದ್ಯರಿಲ್ಲ. ಆದರೆ ಫಿಸಿಯೊಥೆರಪಿ ಲಭ್ಯವಿದೆ. ಸಾಕಷ್ಟು ಮಂದಿ ಚಿಕಿತ್ಸೆ ಪಡೆದ ಬಳಿಕ ಇಲ್ಲಿಗೆ ಬಂದು ಪಿಸಿಯೊಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಅವರಿಗೆ ಪುನರ್ವಸತಿ ಕೊಡಿಸಬೇಕಿದೆ ಡಾ.ಆನಂದ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಶಾಶ್ವತ ಪುನರ್ವಸತಿ ಬೇಕಿದೆ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿ ಅಂಗವಿಕಲರಾದವರಿಗೆ ಸದ್ಯ ಕೊಡಗಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಗಾಲಿಕುರ್ಚಿ ಕೃತಕ ಕಾಲು ಹೀಗೆ ವಿವಿಧ ಸಲಕರಣೆಗಳನ್ನು ವಿತರಿಸುವ ಮೂಲಕ ತಾತ್ಕಾಲಿಕ ಪುನರ್ವಸತಿ ನೀಡಲಾಗುತ್ತಿದೆ. ಆದರೆ ಇವರಿಗೆ ಶಾಶ್ವತವಾದ ಪುನರ್ವಸತಿ ಕಲ್ಪಿಸುವ ಅವಶ್ಯಕತೆ ಇದೆ. ಮೊದಲು ಇಂತಹ ತೊಂದರೆಯಿಂದ ಬಳಲುತ್ತಿರುವವರನ್ನು ಗುರುತಿಸುವ ಕೆಲಸ ಆಗಬೇಕು ರವೀಂದ್ರ ರೈ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ಸಭಾಪತಿ 29 ಮಂದಿಯನ್ನು ಗುರುತಿಸಲಾಗಿದೆ ಕೊಡಗು ಜಿಲ್ಲೆಯಲ್ಲಿ 29 ಮಂದಿಯನ್ನು ಗುರುತಿಸಲಾಗಿದೆ. ಇವರಲ್ಲಿ 12 ಮಂದಿಯನ್ನು ಪುನಶ್ಚೇತನಗೊಳಿಸಲಾಗಿದೆ. ಬೆನ್ನುಹುರಿ ಅಪಘಾತಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಿರುವವರು ಸೇವಾಭಾರತಿಯ ಮೊ: 9606044893 ಸಂಪರ್ಕಿಸಬಹುದು. ಕುಸುಮಾಧರ್ ಸೇವಾಭಾರತಿಯ ದಕ್ಷಿಣ ಕನ್ನಡ ಕ್ಷೇತ್ರ ಸಂಯೋಜಕ ಪರಾವಲಂಬಿಯಾಗಿದ್ದವ ಸ್ವಾವಲಂಬಿಯಾದೆ ನಾನು ಲಾರಿ ಚಾಲಕನಾಗಿದ್ದು ಅಪಘಾತಕ್ಕೆ ಒಳಗಾಗಿ 3 ವರ್ಷ ಆಯಿತು. 6–7 ತಿಂಗಳು ಮನೆಯಲ್ಲೇ ಹಾಸಿಗೆಯಲ್ಲೇ ಇದ್ದೆ. ವೈದ್ಯರು ನೀಡಿದ ಮಾಹಿತಿ ಮೇರೆಗೆ ಸೇವಾಧಾಮಕ್ಕೆ ಬಂದು 3 ತಿಂಗಳು ಇದ್ದು ಅಲ್ಲಿ ಪುನಶ್ಚೇತನ ಪಡೆದು ಮನೆಗೆ ಬಂದೆ. ಇದಕ್ಕೂ ಮುಂಚೆ ಪರಾವಲಂಬಿಯಾಗಿದ್ದೆ. ಸೇವಾಭಾರತಿಗೆ ಹೋಗಿ ಬಂದ ನಂತರ ಈಗ ಸ್ವಾವಲಂಬಿಯಾಗಿದ್ದೇನೆ. ಎಳನೀರು ವ್ಯಾಪಾರ ಮಾಡುತ್ತಿದ್ದೇನೆ ದಯಾನಂದ್ ಕೊಡ್ಲಿಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.