ADVERTISEMENT

ಮೈಸೂರು ದಸರಾ ಮಹೋತ್ಸವ | ಸ್ತಬ್ಧಚಿತ್ರದಲ್ಲಿ ಕಾಫಿನಾಡಿಗೆ ಮೊದಲ ಸ್ಥಾನ

ಜಂಬೂಸವಾರಿಯಲ್ಲೂ ಹಿರಿಮೆ ಮೆರೆದ ಕೊಡಗು ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:26 IST
Last Updated 7 ಅಕ್ಟೋಬರ್ 2022, 6:26 IST
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸಾಗಿ ಪ್ರಥಮ ಸ್ಥಾನ ಪಡೆದ ಕೊಡಗಿನ ಸ್ತಬ್ದಚಿತ್ರ
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸಾಗಿ ಪ್ರಥಮ ಸ್ಥಾನ ಪಡೆದ ಕೊಡಗಿನ ಸ್ತಬ್ದಚಿತ್ರ   

ಮಡಿಕೇರಿ: ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಂಡ ರಾಜ್ಯದ 31 ಜಿಲ್ಲೆಗಳ ಸ್ತಬ್ದಚಿತ್ರಗಳ ಪೈಕಿ ಕೊಡಗು ಜಿಲ್ಲೆಯ ಸ್ತಬ್ದಚಿತ್ರ ಪ್ರಥಮ ಸ್ಥಾನ ಗಳಿಸುವ ಮೂಲಕ ಹೆಗ್ಗಳಿಕೆ ಪಡೆದಿದೆ.

ಉಳಿದೆಲ್ಲ ಜಿಲ್ಲೆಗಳಿಗಿಂತ ಅತ್ಯಂತ ಹೆಚ್ಚು ಸಮರ್ಥವಾಗಿ ಕೊಡಗು ಜಿಲ್ಲೆಯ ಮಹತ್ವವವನ್ನು ಸಾರಿ ಹೇಳಿದ ಕೀರ್ತಿ ಈ ಸ್ತಬ್ದಚಿತ್ರಕ್ಕಿದ್ದು, ಜನರಿಂದ ಮಾತ್ರವಲ್ಲ ಅಧಿಕಾರಿಗಳಿಂದಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕೊಡಗಿನ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿನ ವನಸಿರಿಯ ಜತೆಗೆ ಕೊಡಗು ಜಿಲ್ಲೆಯ ಉಳಿದೆಲ್ಲ ಜಿಲ್ಲೆಗಳಿಗಿಂತ ಮುಂದಿರುವ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸುವಲ್ಲಿ ಸ್ತಬ್ದಚಿತ್ರ ಯಶಸ್ವಿಯಾಗಿದೆ.

ADVERTISEMENT

‘ದಕ್ಷಿಣದ ಕಾಶ್ಮೀರ’ ಎಂದು ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದು ಖ್ಯಾತಿವೆತ್ತಿರುವ ಕೊಡಗಿನ ಪಶ್ಚಿಮಘಟ್ಟದ ಬ್ರಹ್ಮಗಿರಿ ತಪ್ಪಲಿನಲ್ಲಿ ಕಾವೇರಿ ನದಿ ಉಗಮಗೊಳ್ಳುತ್ತದೆ. ಇಲ್ಲಿ ತಲಕಾವೇರಿ, ಭಾಗಮಂಡಲದ ಭಗಂಡೇಶ್ವರ ದೇಗುಲ, ಪಾಡಿ ಇಗ್ಗುತ್ತಪ್ಪ ದೇಗುಲಗಳು, ಪುಷ್ಪಗಿರಿ, ತಡಿಯಂಡಮೋಳ್ ಮೊದಲಾದ ಬೆಟ್ಟಸಾಲುಗಳಿದ್ದು, ಅನೇಕ ಜಲಪಾತಗಳು ಕಣ್ಮನ ಸೆಳೆಯುತ್ತಿವೆ ಎಂಬ ಅಂಶವನ್ನು ಪ್ರಧಾನವಾಗಿ ಸ್ತಬ್ದಚಿತ್ರದಲ್ಲಿ ಬಿಂಬಿಸಲಾಗಿತ್ತು. ಘಮಘಮಿಸುವ ಕಾಫಿ, ರುಚಿಕರ ಜೇನು, ಕಿತ್ತಲೆಯ ಸ್ವಾದಿಷ್ಟವನ್ನು ಇದರಲ್ಲಿ ಅಭಿವ್ಯಕ್ತಿಸಲಾಗಿದೆ.

ಇಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ವೀರ ಸೇನಾನಿಗಳು ದೇಶಕ್ಕಾಗಿ ದುಡಿದಿರುವ ಚಿತ್ರಣವನ್ನು ಕಟ್ಟಿಕೊಡಲಾಗಿತ್ತು. ಜತೆಗೆ, ರಾಜ್ಯದಲ್ಲೇ ಮೊದಲ ಬಾರಿಗೆ ರೂಪುಗೊಂಡ ಕೊಡಗಿನ ಗ್ರಂಥಾಲಯ ವ್ಯವಸ್ಥೆಯ ಡಿಜಿಟಲೀಕರಣವೂ ಇದರಲ್ಲಿ ಪ್ರತಿಬಿಂಬಿತವಾಗಿದ್ದು ವಿಶೇಷ ಎನಿಸಿತ್ತು.

ಹೀಗಾಗಿ, ಕೊಡಗಿನ ಸ್ತಬ್ಧಚಿತ್ರವು ಮೊದಲ ಸ್ಥಾನ ಪಡೆಯಿತು. ಇದರಿಂದ ತುಂಬ ಸಂತಸವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿಂಗ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.