ಗೋಣಿಕೊಪ್ಪಲು: ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡ ಮಕ್ಕಳ ಪೋಷಕರು ಮತ್ತು ಮಕ್ಕಳಿಗೆ ಸಂಬಂಧಿಸಿದ ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಿ ವಿದ್ಯಾರ್ಥಿಗಳ ಮತ್ತು ಪೋಷಕರ ಶೈಕ್ಷಣಿಕ ಪ್ರಗತಿ ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವುದು ಮೊದಲಾದ ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಚ್.ಕೆ.ಕುಮಾರ್ ಅವರಿಗೆ 2025ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಸೋಮವಾರಪೇಟೆ ತಾಲ್ಲೂಕಿನ ಹರಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1991ರಲ್ಲಿ ವೃತ್ತಿ ಜೀವನ ಆರಂಭಿಸಿದ ಕುಮಾರ್ ಅವರು ಕಾಡು ಬೆಳೆದು ಮುಚ್ಚಿ ಹೋಗಿದ್ದ ಶಾಲೆಯ ಮೈದಾನವನ್ನು ದಾನಿಗಳ ಸಹಕಾರ ಮತ್ತು ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದರು. ಊರಿನ ದಾನಿಗಳ ನೆರವಿನೊಂದಿಗೆ ಶಾಲೆಯ ಗೇಟ್ ನಿರ್ಮಿಸಿ ಶಾಲಾ ಕಟ್ಟಡಕ್ಕೆ ಭದ್ರತೆ ಒದಗಿಸಿಕೊಟ್ಟರು.
ಅಲ್ಲಿಂದ ಕಿರಂಗದೂರು, ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸಿದರು. ಕೂಡಿಗೆ ಸರ್ಕಾರಿ ಶಾಲೆಗೆ ಬಂದ ಮೇಲೆ ಶಾಲೆಬಿಟ್ಟು ಬೀದಿಯಲ್ಲಿ ಅಲೆಯುತ್ತಿದ್ದ ಮಕ್ಕಳನ್ನು ಮನ ಒಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಸಫಲರಾದರು. ಕುಶಾಲನಗರ ಬಳಿಯ ಗೋಂದಿಬಸವನಹಳ್ಳಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದಿತು. ಪೋಷಕರ ಮನೆ ಬಾಗಿಲಿಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುಂತೆ ಮನವರಿಕೆ ಮಾಡಿಕೊಟ್ಟರು.
ಈ ರೀತಿ ಶಾಲೆ ಬಿಟ್ಟಮಕ್ಕಳು ಮರಳಿ ಶಾಲೆಗೆ ಬಂದುದರ ಫಲವಾಗಿ ಹಲವರು ಇಂದು ಎಂಜಿನಿಯರ್ ಆಗಿದ್ದಾರೆ, ಮತ್ತೆ ಕೆಲವರು ಉಪನ್ಯಾಸಕರು ಮತ್ತು ಇತರ ಉನ್ನದ ಹುದ್ದೆಗಳಲ್ಲಿ ಬದುಕು ಕಂಡುಕೊಂಡಿದ್ದಾರೆ ಎಂದು ಕುಮಾರ್ ಹೇಳುತ್ತಾರೆ.
ವಾಲ್ನೂರು ಶಾಲೆ ಮೈದಾನ ಅಭಿವೃದ್ದಿ:
ವಾಲ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಮೇಲೆ ಅಲ್ಲಿನ ಶಾಲಾ ಮೈದಾನವನ್ನು ಅಭಿವೃದ್ಧಿಪಡಿಸಿದರು. ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಿದರು. ಖಾಸಗಿ ಕಂಪೆನಿಯೊಂದರ ಸಹಕಾರ ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಪೀಠೋಪಕರಣ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಕುಡಿಯುವ ನೀರಿನ ವ್ಯವಸ್ಥೆ , ಶೌಚಾಲಯ ಮೊದಲಾದ ಮೂಲಸೌಕರ್ಯಗಳನ್ನೆಲ್ಲ ಒದಗಿಸಿದರು. ಇವರ ಪ್ರಯತ್ನದಿಂದ ಶಾಲೆಯಲ್ಲಿ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
ಶಾಲೆ ಶತಮಾನೋತ್ಸವ
ಬಳಿಕ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ 2022ರಲ್ಲಿ ವರ್ಗಾವಣೆಗೊಂಡಾಗ ಶಾಲೆ ತೀರ ದುಸ್ಥಿತಿಗೆ ತಲುಪಿತ್ತು. ಕೇವಲ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇಲಾಖೆ ಮತ್ತು ಸಾರ್ವಜನಿಕರ ಸಹಬಾಗಿತ್ವದಲ್ಲಿ ಈ ಕಟ್ಟಡಕ್ಕೆ ಹೊಸ ಕಾಯಕಲ್ಪ ಕಲ್ಪಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘ ಕಟ್ಟಿ ಅವರ ಸಹಕಾರದೊಂದಿಗೆ ಶಾಲೆಯ ಶತಮಾನೋತ್ಸವವನ್ನು ಆಚರಿಸಿದರು. ಈ ವೇಳೆಯಲ್ಲಿ ಶಾಲೆಯ ಕಟ್ಟಡ ಸುಣ್ಣಬಣ್ಣಗಳಿಂದ ಕಂಗೊಳಿಸುವಂತಾಯಿತು. ಈ ಎಲ್ಲದರ ಫಲವಾಗಿ ಶಾಲೆಯಲ್ಲಿ ಈಗ 342 ವಿದ್ಯಾರ್ಥಿಗಳಿದ್ದಾರೆ.
34 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಕುಮಾರ್ ಅವರು ಮೂಲತಃ ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರಿನವರಾಗಿದ್ದು ಕುಶಾಲನಗರದಲ್ಲಿ ನೆಲೆಸಿದ್ದಾರೆ.
34 ವರ್ಷ ಸುದೀರ್ಘ ಸೇವೆ ಸಲ್ಲಿಸಿರುವ ಕುಮಾರ್ ಕೆಲಸ ಮಾಡಿದ್ದ ಎಲ್ಲ ಶಾಲೆಗಳಲ್ಲೂ ಅಭಿವೃದ್ಧಿ ಇದೀಗ ಲಭಿಸಿತು ರಾಜ್ಯ ಪ್ರಶಸ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.