
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆ ಎನಿಸಿದ ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆಗಳು ಈ ವರ್ಷವಾದರೂ ಪರಿಹಾರ ಕಾಣಲಿ ಎಂಬುದು ಜಿಲ್ಲೆಯ ಎಲ್ಲ ಪ್ರವಾಸೋದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳ ಒಕ್ಕೊರಲ ಒತ್ತಾಯವಾಗಿದೆ.
ಇದೇ ಕಾರಣಕ್ಕೆ ಬಹಳಷ್ಟು ವರ್ಷಾಂತ್ಯದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಹೆಚ್ಚಿನ ಮಂದಿ ಪ್ರವಾಸಿಗರು ಬರಲಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.
ಡಿ. 24, 25, 26ರಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದರು. ಇದರಿಂದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವೆಡೆ 3 ಕಿ.ಮೀಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಸುದ್ದಿ ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಪರಿಣಾಮ ವರ್ಷಾಂತ್ಯಕ್ಕೆ ಹೆಚ್ಚಿನ ಮಂದಿ ಬರಲಿಲ್ಲ ಎಂದು ಅವರು ಹೇಳುತ್ತಾರೆ.
ಪ್ರವಾಸಿಗರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆಗಳು ನಿವಾರಣೆ ಆಗದೇ ಹೋದರೆ ಮುಂದೆ ಇನ್ನಷ್ಟು ಅಪಾಯ ಕಾದಿದೆ. ಹಾಗಾಗಿ, ಈ ಎರಡೂ ವಿಷಯಗಳನ್ನು ತುರ್ತು ಎಂದೇ ಪರಿಣಗಣಿಸಿ ಸರ್ಕಾರ ನಿವಾರಣೆಗೆ ಮುಂದಾಗಬೇಕಿದೆ.
ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ಈಗಾಗಲೇ ಮಂಜೂರಾತಿ ದೊರೆತಿರುವ ಕಾವೇರಿ ಕಲಾಕ್ಷೇತ್ರ ಮರು ನಿರ್ಮಾಣ ಕಾಮಗಾರಿ ಹಾಗೂ ಗಾಂಧಿ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿಗಳು ಆರಂಭವೇ ಆಗಿಲ್ಲ. ಕನಿಷ್ಠ ಪಕ್ಷ ಈ ಎರಡೂ ಯೋಜನೆಗಳು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ಬಂದರೆ ವಾಹನ ನಿಲುಗಡೆ ಸಮಸ್ಯೆ ಒಂದಿಷ್ಟಾದರೂ ನಿವಾರಣೆಯಾಗುವ ಸಾಧ್ಯತೆಗಳಿವೆ.
ಸಂಚಾರ ದಟ್ಟಣೆ ನಿವಾರಣೆಗೂ ಹೆಚ್ಚಿನ ಗಮನ ಈ ವರ್ಷ ಕೊಡಲೇಬೇಕು ಎಂದು ಪ್ರವಾಸೋದ್ಯಮಿಗಳು ಹೇಳುತ್ತಾರೆ. ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಸಂಚಾರ ನಿರ್ವಹಣೆ ಕುರಿತು ಪೊಲೀಸರಿಗೆ ಹೆಚ್ಚಿನ ವೈಜ್ಞಾನಿಕ ತರಬೇತಿಯ ಅಗತ್ಯ ಇದೆ. ಬದಲಿ ರಸ್ತೆಗಳ ಅಭಿವೃದ್ಧಿ ನಡೆದು, ಸಾಧ್ಯವಿರುವ ಕಡೆ ರಸ್ತೆ ವಿಸ್ತರಿಸಿ, ರಸ್ತೆ ಅಂಚು, ಮಧ್ಯಗಳಲ್ಲಿ ಪಟ್ಟಿ ಹಾಕಿ, ಸೂಚನಾ ಫಲಕಗಳನ್ನು ಹೆಚ್ಚು ಹೆಚ್ಚು ಅಳವಡಿಸಿದರೆ ಸಂಚಾರ ದಟ್ಟಣೆ ಒಂದಿಷ್ಟು ನಿಯಂತ್ರಣಕ್ಕೆ ಬರಬಹುದಾಗಿದೆ. ಈ ಎಲ್ಲ ಕ್ರಮಗಳನ್ನೂ ಈ ವರ್ಷ ತೆಗೆದುಕೊಳ್ಳಬೇಕಿದೆ.
ಕುಶಾಲನಗರ–ಮೈಸೂರು ನಡುವೆ ರೈಲು ಸಂಪರ್ಕ ಯೋಜನೆ ಕಾರ್ಯರೂಪಕ್ಕೆ ಬಂದರೆ ಹಾಗೂ ಏರ್‌ಸ್ಕ್ರಿಪ್ಟ್ ಯೋಜನೆಗಳು ವಾಹನಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು.
ಪ್ರವಾಸಿತಾಣಗಳ ಅಭಿವೃದ್ಧಿ:
ಮಡಿಕೇರಿ ಎಂದರೆ ಒಂದೆರಡು ಸ್ಥಳಗಳಷ್ಟೇ ಹೆಚ್ಚು ಪ್ರಸಿದ್ಧಿ ಪಡೆದಿವೆ. ತೆರೆಮರೆಯಲ್ಲಿ ಉಳಿದಿರುವ ಇನ್ನಿತರ ಪ್ರವಾಸಿತಾಣಗಳಿಗೆ ಮೂಲಸೌಕರ್ಯ ಕಲ್ಪಿಸಿ, ಅಲ್ಲಿಗೂ ಪ್ರವಾಸಿಗರು ಭೇಟಿ ನೀಡುವಂತಹ ವ್ಯವಸ್ಥೆ ಮಾಡಬೇಕಿದೆ. ಮುಖ್ಯವಾಗಿ, ಎಲ್ಲ 5 ತಾಲ್ಲೂಕುಗಳಲ್ಲಿರುವ ಪ್ರವಾಸಿತಾಣಗಳ ಅಭಿವೃದ್ಧಿ ಮಾಡಬೇಕಿದೆ. ಮಡಿಕೇರಿಯಲ್ಲೇ ಇರುವ ರಾಜರ ಕೋಟೆ, ರಾಜರ ಗದ್ದುಗೆಗಳು ಹಾಳು ಸುರಿಯುತ್ತಿವೆ. ತಾಲ್ಲೂಕಿನ ನಾಲ್ಕುನಾಡು ಅರಮನೆ ಮರವೆ ಸಂದಿದೆ. ಚೇಲಾವರಾದಂತಹ ಜಲಪಾತಗಳಿಗೂ ಪ್ರಚಾರ ಇಲ್ಲದಂತಾಗಿದೆ.
ಹಾದಿ ಬದಿಯ ಸೌಲಭ್ಯಕ್ಕೆ ಒತ್ತಾಯ:
ಪ್ರವಾಸಿಗರು ಇಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಕೊಡಗಿನ ಪರಿಸರ ಹಾಳು ಮಾಡುತ್ತಾರೆ ಎಂಬುದು ಈಗ ಪ್ರವಾಸಿಗಳ ವಿರುದ್ಧ ಇರುವ ಅಸಮಾಧಾನ. ಇದು ಸಾಮಾನ್ಯವಾಗಿ ಕೊಡಗಿನ ಎಲ್ಲೆಡೆ ಇದೆ. ಇದಕ್ಕೆ ಪೂರಕವಾಗಿ ನೋಡಿದರೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವಿಕೆ ಕಂಡು ಬರುತ್ತಿದೆ.
ಹಾಗೆ ನೋಡಿದರೆ, ಪ್ರವಾಸಿಗಳಿಗೆ ತ್ಯಾಜ್ಯ ಹಾಕಲು ಸೂಕ್ತವಾದ ಜಾಗ ರಸ್ತೆ ಬದಿಯಲ್ಲಿ ಇಲ್ಲ. ಕಾರಿನಲ್ಲಿ ಹೋಗುವಾಗ ತಿನ್ನುವ ಆಹಾರ ಪೊಟ್ಟಣಗಳನ್ನು ಅವರು ಹೊರಗೆ ಎಸೆಯುತ್ತಾರೆ. ಅದಕ್ಕಾಗಿ ಹಾದಿ ಬದಿಯ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಕಸದ ತೊಟ್ಟಿ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹಾಗೂ ಆಹಾರ ಸೇವಿಸುವ ತಾಣಗಳನ್ನು ನಿರ್ಮಿಸಿಕೊಡಬೇಕಿದೆ.
ರಸ್ತೆ ಬದಿ ಸೌಕರ್ಯ ಬೇಕು
‘ವೇ ಸೈಡ್ ಫೆಸಿಲಿಟಿಸ್’ (ರಸ್ತೆಬದಿ ಸೌಕರ್ಯಗಳ) ಅನ್ನು ಕೊಡಗಿನಲ್ಲಿ ಪ್ರವಾಸಿಗರಿಗೆ ಕಲ್ಪಿಸಬೇಕಿದೆ. ಹೆದ್ದಾರಿ ಹಾಗೂ ರಸ್ತೆ ಬದಿ ಅಲ್ಲಲ್ಲಿ ಕಸ ಹಾಕಲು ವ್ಯವಸ್ಥೆ ಕುಡಿಯುವ ನೀರನ ವ್ಯವಸ್ಥೆ ಶೌಚಾಲಯ ಊಟ ಸೇವಿಸಲು ಸ್ಥಳಾವಕಾಶಗಳನ್ನು ಕಲ್ಪಿಸಬೇಕಿದೆ. ಇದರೊಂದಿಗೆ ಹೊಸ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಮಾಡಿ ಬರುವ ಪ್ರವಾಸಿಗರು 5 ತಾಲ್ಲೂಕುಗಳಿಗೂ ಹಂಚಿಕೆಯಾಗುವಂತೆ ಮಾಡಬೇಕಿದೆನಾಗೇಂದ್ರ ಪ್ರಸಾದ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ.
ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ
ವಾಹನ ನಿಲುಗಡೆಗೆ ತುರ್ತಾಗಿ ಆಗಲೇಬೇಕಿದೆ. ಶೌಚಾಲಯ ಕುಡಿಯುವ ನೀರು ಬೇಕು ವಾಹನ ನಿಲುಗಡೆಗೆ ಜಾಗ ಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆದರೆ ಯಾವುದೂ ಆಗಿಲ್ಲ. ಕನಿಷ್ಠ ವರ್ಷಕ್ಕೆ ಒಂದರಿಂದ ಎರಡು ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ. ಈ ವರ್ಷ ವಾಹನ ನಿಲುಗಡೆ ಸಮಸ್ಯೆ ನಿವಾರಣೆಯನ್ನು ಪ್ರಧಾನವಾಗಿ ಹಾಗೂ ಅದ್ಯತೆಯ ವಿಷಯವಾಗಿ ಪರಿಗಣಿಸಿಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ
ಈ ತಿಂಗಳಿನಲ್ಲೇ ಕಾರ್ಯಾರಂಭ
ಸುಮಾರು 300 ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಇರುವಂತಹ ಕಾವೇರಿ ಕಲಾಕ್ಷೇತ್ರದ ಕಾಮಗಾರಿ ಈ ತಿಂಗಳಿನಲ್ಲೇ ಆರಂಭವಾಗಲಿದೆ. ಇದು ₹ 9.5 ಕೋಟಿ ಮೊತ್ತದ ಕಾಮಗಾರಿಯಾಗಿದ್ದು ಇದರಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದರಿಂದ ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದೆ. ಇದರಿಂದ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ.ಎಚ್.ಆರ್.ರಮೇಶ್ ನಗರಸಭೆಯ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.