ವಿರಾಜಪೇಟೆಯ ಪಟ್ಟಣದ ಶಕ್ತಿದೇವತೆ ಶ್ರೀ ಅಂಗಾಳಪರಮೇಶ್ವರಿ ದೇವಿ
ವಿರಾಜಪೇಟೆ: ತಮಿಳುನಾಡಿನಿಂದ ತೆಲುಗು ಶೆಟ್ಟರ ಮೂಲಕ ಕೊಡಗಿಗೆ ಬಂದ ಶಕ್ತಿಪೀಠದ ಭಕ್ತರು ಈಗ ವಾರ್ಷಿಕ ಉತ್ಸವದ ಸಂಭ್ರಮದಲ್ಲಿದ್ದಾರೆ.
ಸುಮಾರು 2 ಶತಮಾನಕ್ಕೂ ಹಿಂದೆ ಪಟ್ಟಣದಲ್ಲಿ ಸ್ಥಾಪನೆಯಾದ ಮಾತ್ರವಲ್ಲ ಪಟ್ಟಣದ ಶಕ್ತಿದೇವತೆ ಎಂದೇ ಹೆಸರಾಗಿರುವ ಶ್ರೀ ಅಂಗಾಳಪರಮೇಶ್ವರಿ ದೇವಿಯ ದೇವಾಲಯದ ವಾರ್ಷಿಕ ಉತ್ಸವಕ್ಕೆ ಪಟ್ಟಣ ಸಜ್ಜುಗೊಳ್ಳುತ್ತಿದೆ. ಫೆ. 24ರಿಂದ ಆರಂಭವಾಗುವ ಉತ್ಸವವು 27ರವರೆಗೆ ನಡೆಯಲಿದ್ದು, ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಯಜ್ಞಕುಂಡಕ್ಕೆ ಹಾರಿ ದೇಹತ್ಯಾಗ ಮಾಡಿದ ದಾಕ್ಷಾಯಣಿಯ ದೇಹದ ಭಾಗಗಳು ಬಿದ್ದ ಸ್ಥಳಗಳಲ್ಲಿ ಶಕ್ತಿಪೀಠಗಳು ರೂಪುಗೊಂಡವು. ಹಾಗೆಯೇ, ಅಂಗೈವೊಂದು ತಮಿಳುನಾಡಿನ ಮೇಲ್ ಮಲೈಯನೂರ್ ಎಂಬಲ್ಲಿ ಬಿದ್ದು ಶಕ್ತಿಪೀಠ ರೂಪುಗೊಂಡಿತು. ಮುಂದೆ ಶಿವನನ್ನು ಶಾಪದಿಂದ ವಿಮುಕ್ತಿಗೊಳಿಸಲು ಇದೇ ಸ್ಥಳದಲ್ಲಿ ಶಿವರಾತ್ರಿಯ ನಂತರದ ಅಮವಾಸ್ಯೆಯಂದು ಪಾರ್ವತಿಯಿಂದ ಬೇರ್ಪಟ್ಟ ಉಗ್ರಶಕ್ತಿಯು ಕಪಾಲವನ್ನು ತನ್ನ ಬಲಗಾಲಿನಿಂದ ತುಳಿದು ನಾಶ ಮಾಡುತ್ತದೆ. ಈ ಉಗ್ರರೂಪವನ್ನು, ಅಘೋರ ರೂಪ, ಅಂಗಾಳಪರಮೇಶ್ವರಿ ಎಂದು ಹಾಗೂ ಮೇಲ್ ಮಲೈನೂರು ದೇವಿಯ ಮೂಲಸ್ಥಾನವೆಂದು ಪುರಾಣದ ಕಥೆ ಹೇಳುತ್ತದೆ.
ವಿರಾಜಪೇಟೆ ಪಟ್ಟಣದ ನಿರ್ಮಾತೃ ಕೊಡಗಿನ ದೊಡ್ಡ ವೀರರಾಜೇಂದ್ರ ಅವರು ತಮಿಳುನಾಡಿನ ಕಡೆಯಿಂದ ಜಿಲ್ಲೆಗೆ ಆಗಮಿಸಿದ ತೆಲುಗು ಶೆಟ್ಟರಿಗೆ ಪಟ್ಟಣದಲ್ಲಿ ನೆಲೆನಿಂತು ತಮ್ಮ ವೃತ್ತಿಯನ್ನು ಕೈಗೊಳ್ಳಲು ಅವಕಾಶವನ್ನು ಕಲ್ಪಿಸಿದರು. ಆಗ ತೆಲುಗು ಶೆಟ್ಟರು ಪಟ್ಟಣದಲ್ಲಿ ನೆಲೆನಿಂತ ಬೀದಿಯನ್ನು ತೆಲುಗು ಶೆಟ್ಟರ ಬೀದಿ, ಬಳಿಕ ತೆಲುಗರ ಬೀದಿಯೆಂದು ಕರೆಯಲಾಗುತ್ತಿದೆ. ತೆಲುಗು ಶೆಟ್ಟರಿಗೆ ಮೇಲ್ ಮಲೈನೂರಿನ ಶ್ರೀ ಅಂಗಾಳ ಪರಮೇಶ್ವರಿ ದೇವಿಯು ಆರಾಧ್ಯ ದೈವವಾಗಿದ್ದರಿಂದ ತೆಲುಗರ ಬೀದಿಯಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯವನ್ನು 2 ಶತಮಾನಗಳ ಹಿಂದೆಯೇ ನಿರ್ಮಾಣ ಮಾಡಲಾಯಿತು.
2012ರಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿತ್ತು. ತೆಲುಗರ ಬೀದಿಯಲ್ಲಿ ಶ್ರೀ ಅಂಗಾಳ ಪರಮೇಶ್ವರಿ ಹಾಗೂ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯವನ್ನು ಪಟ್ಟಣದ 24 ಮನೆ ತೆಲುಗು ಶೆಟ್ಟರ ಸಂಘವು ನಿರ್ವಹಿಸುತ್ತಿದೆ.
ದೇವಾಲಯದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ 6ರಿಂದ 8ರವರೆಗೆ ಪೂಜಾ ಕಾರ್ಯಗಳು ನಡೆಯುತ್ತಿವೆ. ಅಲ್ಲದೆ, ಮಂಗಳವಾರ, ಅಮವಾಸ್ಯೆ ಮತ್ತು ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯುತ್ತದೆ. ವಿಶೇಷವೆಂದರೆ, ದೇವಿಯು ಉಗ್ರರೂಪಿಯಾಗಿರುವುದರಿಂದ ಗರ್ಭಗುಡಿಯ ಮುಂಭಾಗ ನಂದಿಯ ವಿಗ್ರಹವಿದೆ ಎಂದು ದೇವಾಲಯದ ಅರ್ಚಕ ಷಣ್ಮುಗ ಶೆಟ್ಟಿ ತಿಳಿಸುತ್ತಾರೆ.
ಉತ್ಸವವು ಫೆ.24ರಿಂದ 27ರವರೆಗೆ ನಡೆಯಲಿದೆ. ಶಿವರಾತ್ರಿ ಹಾಗೂ ಶಿವರಾತ್ರಿಯ ಮರುದಿನ ಅಂದರೆ 26 ಹಾಗೂ 27 ರಂದು ದೊಡ್ಡ ಹಬ್ಬ ನಡೆಯಲಿದೆ.
ಉತ್ಸವದ ಕಾರ್ಯಕ್ರಮಗಳು
24 ರಂದು ಬೆಳಿಗ್ಗೆ 7ಕ್ಕೆ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 25ರಂದು ಮಧ್ಯಾಹ್ನ 12ಕ್ಕೆ ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ನಡೆಯಲಿದೆ.
ಶಿವರಾತ್ರಿ ದಿನದಂದು ಬೆಳಿಗ್ಗೆ 7ಕ್ಕೆ ತಲಕಾವೇರಿಯಿಂದ ಶಕ್ತಿ ಆವಾಹನೆ, ಅಭಿಷೇಕ ಪೂಜೆ, ರಾತ್ರಿ 7.30ಕ್ಕೆ ಪ್ರಥಮ ಕಾಲ ಅಭಿಷೇಕ ಪೂಜೆ, ರಾತ್ರಿ 10ಕ್ಕೆ ದ್ವಿತೀಯ ಕಾಲ ಅಭಿಷೇಕ ಪೂಜೆ, ಮಧ್ಯರಾತ್ರಿ 12ಕ್ಕೆ ತೃತೀಯ ಕಾಲ ಅಭಿಷೇಕ ಪೂಜೆ ನಡೆಯಲಿದೆ.
27 ರಂದು ಮುಂಜಾನೆಕೆ ಚತುರ್ಥ ಕಾಲ ಅಭಿಷೇಕ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅಲಂಕಾರ ಪೂಜೆ ನಡೆದ ಬಳಿ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4ರ ಬಳಿಕ ಶ್ರೀ ಅಂಗಾಳಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ಮೆರವಣಿಗೆಯಲ್ಲಿ ಕೀಲುಕುದುರೆ, ದೇವರ ವಿವಿಧ ಅವತಾರಗಳು, ಕೇರಳದ ಬ್ಯಾಂಡ್ ತಂಡಗಳು ಸೇರಿದಂತೆ ವಿಶೇಷ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿದೆ. ಜೊತೆಗೆ, ಸ್ತ್ರೀಯರು ನವಧಾನ್ಯಗಳ ಸಸಿಗಳನ್ನು ಬುಟ್ಟಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗುವುದು ವಿಶೇಷವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಪಿ.ಕೃಷ್ಣ ಮಾಹಿತಿ ನೀಡಿದರು.
ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ ಹಾಗೂ ಖಾಸಗಿ ಬಸ್ ನಿಲ್ದಾಣದ ಮೂಲಕ ಮೀನುಪೇಟೆಯಲ್ಲಿನ ಕಂಚಿ ಕಾಮಾಕ್ಷಿ ದೇವಾಲಯದವರೆಗೆ ಮೆರವಣಿಗೆ ನಡೆಯಲಿದೆ. ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಾಲಯಕ್ಕೆ ಆಗಮಿಸಿ ರಾತ್ರಿ 8.30ಕ್ಕೆ ವಿಶೇಷ ಪೂಜೆ ನಡೆಯಲಿದೆ. ವಿವಾಹ ಭಾಗ್ಯ, ಸಂತಾನ ಭಾಗ್ಯದ ವಿಚಾರದಲ್ಲಿ ದೇವಿಯನ್ನು ಪ್ರಾರ್ಥಿಸಿದರೆ ಫಲಪ್ರಾಪ್ತಿಯಾಗುತ್ತದೆ ಎನ್ನುವ ಅಚಲ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ವಿಶೇಷವಾಗಿರುವ ನಂದಿಯ ವಿಗ್ರಹ
ಉತ್ಸವವು ಫೆ.24ರಿಂದ 27ರವರೆಗೆ ನಡೆಯಲಿದ್ದು, ದೊಡ್ಡ ಹಬ್ಬ 26 ಮತ್ತು 27ರಂದು ಜರುಗಲಿವೆ. ಇದಕ್ಕಾಗಿ ಸರ್ವ ಸಿದ್ಧತೆಗಳೂ ನಡೆದಿವೆಟಿ.ಪಿ.ಕೃಷ್ಣ, ಅಧ್ಯಕ್ಷರು ದೇವಾಲಯದ ಆಡಳಿತ ಮಂಡಳಿ
ದೇವಾಲಯದಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪೂಜಾ ಕಾರ್ಯಗಳು ನಡೆಯುತ್ತಿವೆ. ಮಂಗಳವಾರ, ಅಮವಾಸ್ಯೆ ಮತ್ತು ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯುತ್ತದೆಷಣ್ಮುಗ ಶೆಟ್ಟಿ, ದೇವಾಲಯದ ಅರ್ಚಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.