
ವಿರಾಜಪೇಟೆ: ‘ಮಹಿಳೆಯರು ಉದ್ಯಮಶೀಲರಾಗಲು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಶಿಬಿರಗಳು, ಕಾರ್ಯಾಗಾರಗಳು ಸಹಕಾರಿಯಾಗಲಿವೆ’ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣ (ಮಹಿಳಾ ಸಮಾಜ)ದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ. ಮಡಿಕೇರಿ, ಕೊಡಗು ಮಹಿಳಾ ಸಹಕಾರ ಸಂಘ ವಿರಾಜಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗೆ ಸಹಕಾರ ಕಾಯ್ದೆ-ಕಾನೂನು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಕುರಿತು ಶುಕ್ರವಾರ ನಡೆದ ವಿಶೇಷ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕ್ರಾಂತಿಯ ಯುಗದಲ್ಲಿ ಮಹಿಳೆಯರು ಸಬಲರಾಗಬೇಕು. ಉದ್ದಿಮೆಯ ಕಡೆಗೆ ಹೆಚ್ಚು ಆಸ್ಥೆ ವಹಿಸಬೇಕು. ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ವಿವಿಧ ವಿಷಯಗಳಲ್ಲಿ ನೈಪುಣ್ಯತಾ ತರಬೇತಿಗಳನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿಸಲು ಸಾಧ್ಯವಿದೆ’ ಎಂದರು.
ಕೊಡಗು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅನೇಕ ಮಹಿಳೆಯರಲ್ಲಿ ಉದ್ದಿಮೆ ಆರಂಭಿಸುವ ಉತ್ಸಾಹ ಇದ್ದರೂ ಮಾಹಿತಿ ಕೊರತೆಯಿಂದ ಹಿಂದೇಟು ಹಾಕುತ್ತಾರೆ. ಅಂತವರಿಗೆ ಉದ್ದಿಮೆ ರಂಗದ ಸಮಗ್ರ ಮಾಹಿತಿ ನೀಡಬೇಕಿದೆ. ಅವರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶವೇ ಈ ಕಾರ್ಯಕ್ರಮದ್ದು. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ’ ಎಂದರು.
ಮೃದು ಕೌಶಲ ತರಬೇತುದಾರ ಮೈಸೂರಿನ ಎಚ್.ಎಸ್. ಕೃಷ್ಣಮೂರ್ತಿ ಮಾತನಾಡಿ, ‘ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಜೊತೆಯಲ್ಲಿ ಸೂಕ್ತ ಪ್ರೋತ್ಸಾಹದ ಅವಶ್ಯಕತೆಯಿದೆ. ಸ್ವಯಂ ಉದ್ಯೋಗ ತರಬೇತಿ ಪಡೆದು ಬಿಡುವಿನ ವೇಳೆಯಲ್ಲಿ ಆಲಂಕಾರಿಕಾ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಗೃಹ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಂತ ಉದ್ಯೋಗ ಮಾಡುವ ಶಕ್ತಿ ಹೊಂದಿದ್ದರೂ ಪ್ರೋತ್ಸಾಹ, ಮಾರ್ಗದರ್ಶನ ಕೊರತೆಯಿಂದ ಗೊಂದಲಕ್ಕೆ ಸಿಲುಕುತ್ತಾರೆ. ಸರ್ಕಾರದಿಂದ ನೀಡುವ ಮಾಹಿತಿ ಜತೆ ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಸ್ವಂತ ಉದ್ಯೋಗ ಮಾಡಬೇಕು. ಜೇನು ಸಾಕಾಣಿಕೆ, ಹೈನುಗಾರಿಕೆ ಮುಂತಾದವುಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಿ ಆರ್ಥಿಕ ಸ್ವಾವಲಂಬಿಗಳಾಗಲು ಹೆಚ್ಚಿನ ಸಹಕಾರಿಯಾಗುತ್ತದೆ’ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕಿ ಎಂ.ಎ. ಶ್ಯಾಮಲಾ ಅವರು ಸಹಕಾರ ಸಂಘಗಳಿಗೆ ಸಂಬಂಧಿಸಿದ ಕಾನೂನು ಹಾಗೂ ಇತ್ತಿಚೆಗೆ ಆದ ಕೆಲವು ಕಾನೂನು ತಿದ್ದುಪಡಿ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಎಂ.ಟಿ. ಸುಬ್ಬಯ್ಯ, ಎ.ಸಿ. ಕುಶಾಲಪ್ಪ, ಎಸ್.ಆರ್. ಸುನಿಲ್ ರಾವ್, ತಾಲ್ಲೂಕು ಸಹಕಾರ ಕೂಟ ನಿಯಮಿತದ ಅಧ್ಯಕ್ಷ ಎ.ಡಿ. ಸುಧೀರ್, ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಗೂ ವ್ಯವಸ್ಥಾಪಕಿ ಮಂಜುಳಾ, ಜಿಲ್ಲೆಯ ವಿವಿಧೆಡೆಗಳಿಂದ ಮಹಿಳಾ ಸಹಕಾರ ಸಂಘದ ಸದಸ್ಯರು, ವಿರಾಜಪೇಟೆ ಮಹಿಳಾ ಸಹಕಾರ ಸಂಘದ ಸದಸ್ಯರು ಹಾಜರಿದ್ದರು.
ನಿರುದ್ಯೋಗಿಗಳು ಉದ್ಯಮಿಗಳು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರು ರೈತರು ಮಹಿಳಾ ಸ್ವ-ಸಹಾಯ ಸಂಘದವರು ಕಾರ್ಯಾಗಾರದ ಪ್ರಯೋಜನ ಪಡೆಯಬೇಕು. ಮಹಿಳೆಯರು ಸಬಲರಾದರೆ ದೇಶವೇ ಸಬಲವಾದಂತೆ
-ಪಳೆಯಂಡ ರಾಬಿನ್ ದೇವಯ್ಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.