ADVERTISEMENT

ಶಾಸನ ಸಭೆಗಳಲ್ಲಿ ಕೊಡವರಿಗೆ ಪ‍್ರತ್ಯೇಕ ಪ್ರಾತಿನಿಧ್ಯ ಕೊಡಿ: ನಾಚಪ್ಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:40 IST
Last Updated 22 ಆಗಸ್ಟ್ 2025, 4:40 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸದಸ್ಯರು ಗುರುವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸದಸ್ಯರು ಗುರುವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿದರು   

ಮಡಿಕೇರಿ: ರಾಷ್ಟ್ರೀಯ ಜನಗಣತಿ ವೇಳೆ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಬೇಕು ಹಾಗೂ ಶಾಸನ ಸಭೆಗಳಲ್ಲಿ ಕೊಡವರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಡೆಸುತ್ತಿರುವ ಮಾನವ ಸರಪಳಿ ಮುಂದುವರಿದಿದೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಗುರುವಾರ ನಡೆದ 10ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ವೇಳೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ವೇಳೆ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕೆನ್ನುವ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ವಿವಿಧಡೆ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ADVERTISEMENT

ಇಲ್ಲಿಯ ತನಕ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದೆ ಆ. 27ರಂದು ಬೆಳಿಗ್ಗೆ 10.30ಕ್ಕೆ ವಿರಾಜಪೇಟೆಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ರೇಖಾ ನಾಚಪ್ಪ, ಕವಾಡಿಚಂಡ ಕಮಲಾ, ಸರ್ವಶ್ರೀ ಕಮೋಡೋರ್ ಕುಕ್ಕೇರ ಕೇಶು ಉತ್ತಪ್ಪ, ಕುಕ್ಕೇರ ಜಯ ಚಿನ್ನಪ್ಪ, ಚೇರಂಡ ಸುಭಾಷ್, ಚೆಂದಂಡ ಚುಮ್ಮಿ ಪೂವಯ್ಯ ಪಾಲಚಂಡ ಜಾಲಿ ತಮ್ಮಯ್ಯ, ಕಾಡುಮಂಡ ತಮ್ಮಯ್ಯ, ಮೂಕೊಂಡ ದಿಲೀಪ್, ಅಜ್ಜಿನಿಕಂಡ ಸನ್ನಿ ಭಾಗವಹಿಸಿದ್ದರು. 

ದಿನ ಕಳೆದಂತೆ ಹೆಚ್ಚಾದ ನಗರೀಕರಣ 
2018 ಮತ್ತು 2019ರಲ್ಲಿ ಭೀಕರ ಪ್ರಾಕೃತಿಕ ವಿಕೋಪ ಸಂಭವಿಸಿದ ಹೊರತಾಗಿಯೂ ಕೊಡಗಿನಲ್ಲಿ ಹೊರಗಿನ ಬಂಡವಾಳ ಷಾಹಿಗಳು ಭೂಮಿ ಖರೀದಿಸಿ ಅದನ್ನು ಪರಿವರ್ತನೆ ಮಾಡಿ ರೆಸಾರ್ಟ್‌ಗಳನ್ನು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ನಗರೀಕರಣವೂ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇವುಗಳೆಲ್ಲವೂ ಈ ನೆಲಕ್ಕೆ ಭಾರಿ ಬೆದರಿಕೆಗಳೆನಿಸಿದ್ದು ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತರಿಪಡಿಸುವುದರಿಂದ ಈ ರೀತಿಯ ಅನಾಹುತಗಳನ್ನು ತಡೆಯಲು ಸಾಧ್ಯ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.