ADVERTISEMENT

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ; ಪ್ರತಿಭೆಗಳ ಶೋಧ

ಜ.1ರಿಂದ 4ರವರೆಗೆ ನಡೆಯಲಿದೆ ವಿದ್ಯಾರ್ಥಿಗಳಿಗಾಗಿ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:19 IST
Last Updated 25 ಡಿಸೆಂಬರ್ 2025, 6:19 IST
<div class="paragraphs"><p>ಹಾಕಿ</p></div>

ಹಾಕಿ

   

ಮಡಿಕೇರಿ: ಚೇನಂಡ ಕುಟುಂಬದವರು ಮುಂದಿನ ವರ್ಷ ಏ. 5ರಿಂದ ಮೇ 2ರವರೆಗೆ ನಾ‍‍ಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವು ಹಲವು ಮೊದಲುಗಳಿಗೆ ಕಾರಣವಾಗಲಿದೆ. ಮಾತ್ರವಲ್ಲ, ಅಲ್ಲಿ ಹೊಸ ಹೊಸ ಕ್ರೀಡಾ ಪ್ರತಿಭೆಗಳು ಅರಳಲಿದ್ದಾರೆ.

ಈ ಉತ್ಸವದ ಅಂಗವಾಗಿ ಶಾಲಾ ಹಂತದಲ್ಲೇ ಇರುವ ಹಾಕಿ ಪ್ರತಿಭೆಗಳನ್ನು ಶೋಧಿಸಲು ಜಿಲ್ಲೆಯಲ್ಲಿ ಅತಿ ವಿಶಿಷ್ಟ ಪ್ರಯತ್ನವೊಂದನ್ನು ಆಯೋಜನಾ ಸಮಿತಿ ನಡಸಿದೆ.

ADVERTISEMENT

‘ಜ. 1ರಿಂದ 4ರವರೆಗೆ ಜಿಲ್ಲೆಯಲ್ಲಿ ಕಲಿಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಹಾಕಿ ಟೂರ್ನಿಯನ್ನು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದೆ. ಇಲ್ಲಿ ಉತ್ತಮವಾಗಿ ಆಡಿದ 30 ಮಂದಿಗೆ ಹಾಕಿ ಉತ್ಸವದ ವೇಳೆ ನುರಿತ ಕ್ರೀಡಾಪಟುಗಳಿಂದ ತರಬೇತಿ ನೀಡಲಾಗುತ್ತದೆ. ಈ ಮೂಲಕ ಹೊಸ ಹೊಸ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಅವಕಾಶವಾಗುತ್ತದೆ’ ಎಂದು ಚೇನಂಡ ಹಾಕಿ ಉತ್ಸವದ ಆಯೋಜನಾ ಸಮಿತಿಯ ಕಂಬಣಿ ಕರುಂಬಯ್ಯ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘4ನೇ ತರಗತಿಯಿಂದ 7ನೇ ತರಗತಿಯವರೆಗೆ ಮತ್ತು 8ನೇ ತರಗತಿಯಿಂದ 10ನೇ ತರಗತಿಯವರೆಗೆ ಬಾಲಕ, ಬಾಲಕಿಯರಿಗೆ ಈ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಯಾವುದೇ ಧರ್ಮದ, ಯಾವುದೇ ಜಾತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು’ ಎಂದು ಹೇಳಿದರು.

ಕೊಡಗಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ತಮ್ಮ ತಮ್ಮ ಶಾಲೆಯ ಹಾಕಿ ತಂಡಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬೇಕು.  ಒಂದು ವೇಳೆ ಹಾಕಿ ತಂಡ ಇಲ್ಲದಿದ್ದರೆ, ತಮ್ಮ ಶಾಲೆಯಲ್ಲಿ ಹಾಕಿ ಆಡಲು ಆಸಕ್ತಿ ಇರುವ ವಿದ್ಯಾರ್ಥಿಗಳನ್ನೂ ಕಳುಹಿಸಿಕೊಡಬಹುದು. ತಂಡವನ್ನು ನೋಂದಾಯಿಸಲು ಡಿ.28 ಕೊನೆಯ ದಿನ. ಮಾಹಿತಿಗೆ ಮೊ.ಸಂ. 87623 49951, 94811 14095, 90351 98434 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

‘ಎಲ್ಲ ಹಾಕಿ ಪಂದ್ಯಗಳನ್ನು ನೋಂದಾಯಿತ ಸಂಸ್ಥೆಯಾದ ಹಾಕಿ ಕೂರ್ಗ್‌ನ ನುರಿತ ತೀರ್ಪುಗಾರರು ನಡೆಸಿಕೊಡುತ್ತಾರೆ, ವಿಜೇತರಿಗೆ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಬಹುಮಾನ ಮತ್ತು ಪಾರಿತೋಷಕ ನೀಡಲಾಗುತ್ತದೆ. ವಿಜೇತರಿಗೆ ಹಾಕಿ ಕೂರ್ಗ್ ವತಿಯಿಂದ ಪ್ರಶಸ್ತಿಪತ್ರ ನೀಡಲಾಗುತ್ತದೆ, ಕ್ರೀಡಾಪಟುಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ, ಬಾಲಕಿಯರು ಹಾಕಿ ಆಡುವುದನ್ನು ಪ್ರೋತ್ಸಾಹಿಸಲು ಬಾಲಕಿಯರ ತಂಡ ಅಥವಾ ವೈಯಕ್ತಿಕ ಆಟಗಾರರಿಗೆ ಪ್ರಾತಿನಿಧ್ಯ ನೀಡಲಾಗುವುದು’ ಎಂದರು.

ಸಮಿತಿಯ ಕಾರ್ಯದರ್ಶಿ ಚೇನಂಡ ಮಧುಮಾದಯ್ಯ, ವಕ್ತಾರ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರಾದ ಚೇನಂಡ ನಂದ ಜಗದೀಶ್ ಹಾಗೂ ಚೇನಂಡ ಸಂಪತ್ ಭೀಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.