ADVERTISEMENT

ಚೆಪ್ಪುಡಿರ– ಕುಲ್ಲೇಟಿರ ಮಧ್ಯೆ ಅಂತಿಮ ಹಣಾಹಣಿ

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:42 IST
Last Updated 30 ಡಿಸೆಂಬರ್ 2025, 8:42 IST
ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಮಂಡೇಪಂಡ ಮತ್ತು ಚೆಪ್ಪುಡಿರ ತಂಡಗಳ ಆಟಗಾರರು ಗೆಲುವಿಗಾಗಿ ಸೆಣಸಾಟ ನಡೆಸಿದರು
ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಮಂಡೇಪಂಡ ಮತ್ತು ಚೆಪ್ಪುಡಿರ ತಂಡಗಳ ಆಟಗಾರರು ಗೆಲುವಿಗಾಗಿ ಸೆಣಸಾಟ ನಡೆಸಿದರು   

ಮಡಿಕೇರಿ: ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ'ಯಲ್ಲಿ ಡಿ. 30ರಂದು ಬೆಳಿಗ್ಗೆ 10.30ಕ್ಕೆ ಚೆಪ್ಪುಡಿರ ಮತ್ತು ಕುಲ್ಲೇಟಿರ ತಂಡಗಳ ನಡುವೆ ಅಂತಿಮ ಹಣಾಹಣಿ ನಡೆಯಲಿದೆ. ಸೋಮವಾರ ನಡೆದ ಸೆಮಿಫೈನಲ್ಸ್ ಪಂದ್ಯಗಳಲ್ಲಿ ಎರಡೂ ತಂಡಗಳು ಕ್ರಮವಾಗಿ ಮಂಡೇಪಂಡ ಮತ್ತು ಕುಪ್ಪಂಡ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದವು.

ಕೊಡವ ಹಾಕಿ ಅಕಾಡೆಮಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಪಂದ್ಯಾವಳಿಯ ಮೊದಲ ಸೆಮಿಫೈನಲ್ಸ್ ಪಂದ್ಯಾವಳಿಯು ಮಂಡೇಪಂಡ ಮತ್ತು ಚೆಪ್ಪುಡಿರ ನಡುವೆ ನಡೆಯಿತು. ಉಭಯ ತಂಡಗಳ ನಡುವೆ ತೀವ್ರತರವಾದ ಪೈಪೋಟಿ ಕಂಡು ಬಂತು. ಅಂತಿಮವಾಗಿ ಚೆಪ್ಪುಡಿರ ತಂಡ 4-3 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.

ಈ ರೋಚಕ ಹಣಾಹಣಿಯಲ್ಲಿ ಚೆಪ್ಪುಡಿರ ಚೇತನ್ ಎರಡು, ಪ್ರಣವ್ ಹಾಗೂ ಮಾದಪ್ಪ ತಲಾ ಒಂದು ಗೋಲು ಗಳಿಸಿದರು. ಮಂಡೇಪಂಡ ಪರ ದಿಲನ್ ದೇವಯ್ಯ ಎರಡು ಹಾಗೂ ಚಂದನ್ ಕಾರ್ಯಪ್ಪ ಒಂದು ಗೋಲು ಗಳಿಸಿದರು.

ADVERTISEMENT

ರೋಚಕ ಪಂದ್ಯ: ಕುಲ್ಲೇಟಿರ ಮತ್ತು ಕುಪ್ಪಂಡ ತಂಡಗಳ ನಡುವಿನ ಮತ್ತೊಂದು ಸೆಮಿಫೈನಲ್‌ ಪಂದ್ಯವು ‌ಕ್ರೀಡಾಭಿಮಾನಿಗಳನ್ನು ಅಕ್ಷರಶಃ ತುದಿಗಾಲ ಮೇಲೆರಿಸಿತು.

ಉಭಯ ತಂಡಗಳ ಆಟಗಾರರು ರಕ್ಷಣಾತ್ಮಕವಾದ ಆಟ ಆಡಿದ್ದರಿಂದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗದೇ ಶೂನ್ಯ ಸಾಧನೆ ಮಾಡಿದವು. 

ಆನಂತರ ನಡೆದಿದ್ದೇ ಶೂಟ್‌ಔಟ್. ಇದರಲ್ಲಿ 3-0 ಅಂತರದಲ್ಲಿ ಕುಲ್ಲೇಟಿರ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಬಾಡಗ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕಂಬೀರಂಡ ಸತೀಶ್ ಮುತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮೂರ್ನಾಡು ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಚೌರಿರ ಜಗತ್ ತಿಮ್ಮಯ್ಯ ಹಾಗೂ ಕಾರ್ಯದರ್ಶಿ ಪೆಮ್ಮುಡಿಯಂಡ ಅಪ್ಪಣ್ಣ ಭಾಗವಹಿಸಿದ್ದರು. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. 

ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಕುಲ್ಲೇಟಿರ ಮತ್ತು ಕುಪ್ಪಂಡ ತಂಡಗಳ ಆಟಗಾರರು ಗೆಲುವಿಗಾಗಿ ಸೆಣಸಾಟ ನಡೆಸಿದರು

ಕುಲ್ಲೇಟಿರ ಮತ್ತು ಕುಪ್ಪಂಡ ತಂಡಗಳ ನಡುವೆ ರೋಚಕ ಹಣಾಹಣಿ ಭರಪೂರ ರಂಜನೆ ನೀಡಿದ ಸೆಮಿಫೈನಲ್ಸ್ ಪಂದ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.