ಮಡಿಕೇರಿ: ರಾಜ್ಯ ಸರ್ಕಾರದ ವತಿಯಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಜಾತಿ, ಭಾಷೆ ಮತ್ತು ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸುವ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ಸಿಎನ್‌ಸಿ ಸಂಘಟನೆ ವತಿಯಿಂದ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಈಚೆ ನಡೆದ 15ನೇ ಮಾನವ ಸರಪಳಿ ಜನಜಾಗೃತಿ ವೇಳೆ ಅವರು ಮಾತನಾಡಿದರು.
‘ನಾವು ಕೊಡವರು ಕೊಡಗಿಗೆ ಸೀಮಿತವಾದ ಆದಿಮಸಂಜಾತ ಆ್ಯನಿಮಿಷ್ಟಿಕ್ ನಂಬಿಕೆಯ ಅಪರೂಪದ ಅಪ್ಪಟ್ಟ ದೇಶ ಪ್ರೇಮಿ, ಅಖಂಡ ರಾಷ್ಟ್ರೀಯವಾದಿ ಜನರಾಗಿದ್ದಾರೆ. ಇಂದು ನಮ್ಮ ಜನ್ಮಭೂಮಿಯಲ್ಲಿ ನಮ್ಮ ಅಸ್ಮಿತೆ, ಸ್ವಾಭಿಮಾನ, ಅಸ್ತಿತ್ವ, ಹೆಗ್ಗುರುತು ಮತ್ತು ಭವಿಷ್ಯತ್ತಿಗೆ ಬುನಾದಿಯಾಗಲು ಸಂವಿಧಾನದ ಭದ್ರತೆ ಬೇಕು. ಆ ಮೂಲಕ ನಮ್ಮ ಎಲ್ಲಾ ಸಂವಿಧಾನಿಕ ಹಕ್ಕುಗಳ ಮೂಲಕ ಸ್ಥಿರೀಕರಣವಾಗಬೇಕಾದರೆ ರಾಜ್ಯ ದಾಖಲೆಯ ಮೂಲ ಸತ್ವವಾದ ಗಣತಿಯಲ್ಲಿ ನಾವು ಸೇರಬೇಕು. ಇದು ಮುಂದೆ 2026-27ರಲ್ಲಿ ನಡೆಯುವ ರಾಷ್ಟ್ರೀಯ ಜನಗಣತಿಯೊಂದಿಗಿನ ಜಾತಿ ಸಮೀಕ್ಷೆಗೂ ಪೂರಕವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಸಿಖ್ ಧರ್ಮದ ಕಿರ್ಪಾಣಕ್ಕೆ ಸಂವಿಧಾನದ 25, 26ರ ಅಡಿಯಲ್ಲಿ ಶಾಶ್ವತ ರಾಜ್ಯಾಂಗ ಖಾತರಿ ಸಿಕ್ಕಿದೆ. ಹಾಗೆಯೇ, 1871-72ರಿಂದ 1931ರ ತನಕ ಕೊಡವರನ್ನು ಧರ್ಮಾತೀತವಾದ ಪ್ರತ್ಯೇಕ ರೇಸ್ ಎಂದು ದಾಖಲಾಗಿದ್ದು ಸೇರಿದಂತೆ ಕೊಡವರ ಧಾರ್ಮಿಕ ಸಂಸ್ಕಾರ ತೊಕ್-ಗನ್ ಇಂಡಿಯನ್ ಆರ್ಮ್ಸ್ ಆ್ಯಕ್ಟ್‌ನಲ್ಲಿ ವಿಶೇಷ ಮಾನ್ಯತೆ ಪಡೆದಿದ್ದರು. ಆದರೆ, ಮುಂದೆ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆ ವೇಳೆ ಈ ವಿಶೇಷತೆಯನ್ನು ಕಳೆದುಕೊಳ್ಳುವ ಅಪಾಯ ಇದೆ. ಸಿಖ್‌ರಂತೆಯೇ ಕೊಡವರು ಯೋಧ ಪರಂಪರೆಯ ಜನರಾಗಿದ್ದು, ರಾಷ್ಟ್ರ ರಕ್ಷಣೆ ಮತ್ತು ರಾಷ್ಟ್ರಅಭಿವೃದ್ಧಿಯಲ್ಲಿ ನಮ್ಮ ಕಾಣಿಕೆ ಅಮೋಘವಾಗಿದೆ. ನಮ್ಮ ತೋಕ್-ಗನ್‌ಗೆ ರಾಜ್ಯಾಂಗ ಖಾತ್ರಿ ಸಂವಿಧಾನ 26–26ರ ಧಾರ್ಮಿಕ ಸ್ವಾತಂತ್ರ್ಯದ ಅನ್ವಯ ದೊರಕಬೇಕಾದ್ದಲ್ಲಿ ಧರ್ಮ, ಜಾತಿ ಮತ್ತು ಭಾಷೆ ಕಾಲಂನಲ್ಲಿ ಕಡ್ಡಾಯವಾಗಿ ಕೊಡವ ಎಂದು ದಾಖಲಿಸಲೇಬೇಕು ಎಂದು ಅವರು ಒತ್ತಾಯಿಸಿದರು.
ಕೊಡವರ ಪ್ರತ್ಯೇಕ ಅಸ್ತಿತ್ವ ಸಂವಿಧಾನದಡಿಯಲ್ಲಿ ಸ್ಥಿರವಾಗಿ ಕಾಪಾಡಿದರೆ, ಭಾರತ ರಾಷ್ಟ್ರೀಯತೆಯ ಕಿರೀಟಕ್ಕೆ ಇನ್ನೊಂದು ವಿಶೇಷ ಗರಿ ಮೂಡಿದಂತಾಗುತ್ತದೆ ಎಂದೂ ಅವರು ಹೇಳಿದರು.
ಅ.11ರಂದು ಬೆಳಿಗ್ಗೆ 10.30ಕ್ಕೆ ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ ಜನಜಾಗೃತಿ ಮೂಡಿಸಲಾಗುವುದು. ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪಲು ಮತ್ತು ಮೂರ್ನಾಡುವಿನಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ ಎಂದರು.
ಮಂದಪಂಡ ರಚನ ಮನೋಜ್, ಕಲ್ಮಾಡಂಡ ದೇಚಮ್ಮ ಮೇದಪ್ಪ, ಮಂದಪಂಡ ಹರಿಣಿ ಅಯ್ಯಣ್ಣ, ಕಲ್ಮಾಡಂಡ ದಮಯಂತಿ ಮೊಣ್ಣಪ್ಪ, ಮಂದಪಂಡ ನಿಹಾಲಿ ದೇಚಕ್ಕ, ಪಟ್ಟಮಾಡ ಸೀತಮ್ಮ, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಮಂದಪಡ ಮನೋಜ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಬೊಳರ್ಪಂಡ ಚೆಂಗಪ್ಪ, ನಾಪಂಡ ಗಣೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.