
ಮಡಿಕೇರಿ: ‘ಒಂದು ತಂಡವಾಗಿ ಕೆಲಸ ಮಾಡಿ, ಎಲ್ಲರ ವಿಶ್ವಾಸ, ಸಹಕಾರ ಪಡೆದು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಕುರಿತು ಸರ್ಕಾರಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವರದಿ ಸಲ್ಲಿಸಬೇಕು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಕುರಿತು ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಈಗಾಗಲೇ 2 ಬಾರಿ ವರದಿ ಸಲ್ಲಿಸಲಾಗಿದೆ ಎಂಬುದನ್ನು ಮರೆಯದಿರಿ. ಹಾಗಾಗಿ, ಅಕಾಡೆಮಿಯು ಉಪ ಸಮಿತಿಗಳ ತಂಡವನ್ನು ರಚಿಸಿಕೊಂಡು ಕಾನೂನಾತ್ಮಕ ಮಾನದಂಡದನ್ವಯ, ಶಿಸ್ತುಬದ್ಧವಾಗಿ ವರದಿ ಸಿದ್ಧಪಡಿಸಬೇಕು. ಅಕಾಡೆಮಿ ಜೊತೆಗೆ ಕೊಡವ ಸಮಾಜಗಳು, ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡ ಪಿ.ಜಿ.ಅಯ್ಯಪ್ಪ ಮಾತನಾಡಿ, ‘ಕೊಡವ ಭಾಷೆ ಸಂಸ್ಕೃತಿಯನ್ನು ಉಳಿಸಲು 21 ಭಾಷಿಕ ಜನರು ಸಂಘಟಿತರಾಗಬೇಕು’ ಎಂದರು.
ಕೊಡವ ಭಾಷಿಕ ಜನಾಂಗಗಳ ಮುಖಂಡ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು’ ಎಂದು ಸಲಹೆ ನೀಡಿದರು.
ಪರದಂಡ ಕೆ.ಸುಬ್ರಮಣಿ ಮಾತನಾಡಿ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮಾಹಿತಿ ನೀಡಬೇಕು’ ಎಂದು ಕೋರಿದರು.
ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ‘ಸಮಗ್ರ ವರದಿ ನೀಡುವ ನಿಟ್ಟಿನಲ್ಲಿ ಆಳವಾದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಿದೆ’ ಎಂದರು.
ಡಾ.ತೀತಿರ ರೇಖಾ ವಸಂತ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಚಂಗಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಮುಲ್ಲೆಂಗಡ ರೇವತಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ, ರಾಜು ಬೋಪಯ್ಯ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ, ಅಕಾಡೆಮಿ ಸದಸ್ಯರಾದ ಸಂಜು ಕಾವೇರಪ್ಪ, ಪಿ.ಕೆ.ಕುಟ್ಟಪ್ಪ, ದಿನು ಬೋಜಪ್ಪ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಶಿವಾಜಿ, ಕುಡಿಯರ ಕಾವೇರಪ್ಪ, ಪೊನ್ನಿರ ಗಗನ್, ನಾಪಂಡ ಗಣೇಶ್, ಮೊಣ್ಣಂಡ ಶೋಭ ಸುಬ್ಬಯ್ಯ, ಪುಪ್ಪು ತಿಮ್ಮಯ್ಯ ಭಾಗವಹಿಸಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಭಿಕರು ವರದಿ ಸಲ್ಲಿಕೆಗೆ ಎಲ್ಲರ ಸಹಕಾರ ಪಡೆಯಲು ಸೂಚನೆ ನಿಯಮಾನುಸಾರ, ಶಿಸ್ತುಬದ್ಧವಾಗಿ ವರದಿ ಸಲ್ಲಿಸಲು ಸಲಹೆ
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕುಅರುಣ್ ಮಾಚಯ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ.
ವರದಿ ತಯಾರಿಸುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಕೊಡವ ಕನ್ನಡ ಇಂಗ್ಲೀಷ್ ಹಿಂದಿ ಭಾಷೆಯಲ್ಲಿ ವರದಿ ಸಿದ್ಧಪಡಿಸಬೇಕುಮನೆಯಪಂಡ ಎ.ಪೊನ್ನಪ್ಪ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ.
ಸಂವಿಧಾನಕ್ಕೆ ಸೇರುವುದರಿಂದ ಆಗುವ ಪ್ರಯೋಜನ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಆಗುವ ಪ್ರಯೋಜನಗಳನ್ನು ಕುರಿತು ಮಾತನಾಡಿದರು. ಇದರಿಂದ ವಿಶೇಷ ಸ್ಥಾನಮಾನ ಹಾಗೂ ಅಧಿಕೃತ ಮನ್ನಣೆ ದೊರೆಯಲಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಸಮ್ಮೇಳನಗಳು ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕೊಡವ ಭಾಷೆ ಅಧ್ಯಯನಕ್ಕೆ ಅವಕಾಶ ಕೇಂದ್ರ ಮತ್ತು ರಾಜ್ಯ ನಾಗರಿಕ ಸೇವೆಗಳಲ್ಲೂ ಸಹ ಕೊಡವ ಭಾಷೆ ಬಳಕೆಗೆ ಅವಕಾಶ ಭಾಷೆ ಅಭಿವೃದ್ಧಿ ಸರ್ಕಾರದಿಂದ ಹಲವು ನೆರವು ಹೀಗೆ ಹಲವು ಉಪಯೋಗಗಳು ದೊರೆಯಲಿದೆ ಎಂದು ವಿವರಿಸಿದರು.
ಹಲವು ದಶಕಗಳಿಂದ ಹೋರಾಟ; ನಾಚಪ್ಪ ಕೊಡವ ನ್ಯಾಷನಲ್ ಕೌನ್ಸಿಲ್ ನಂದಿನೆರವಂಡ ನಾಚಪ್ಪ ಮಾತನಾಡಿ ‘ಕೊಡವ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವೆ. ಆ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.