
ಗೋಣಿಕೊಪ್ಪಲು: ಕೊಡವ ಭಾಷೆಯ ಸಾಹಿತ್ಯ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಒತ್ತಾಯಿಸಿದರು.
ಕೊಡವ ತಕ್ಕ್ ಎಳ್ತ್ ಕಾರಡ ಕೂಟ ಹಾಗೂ ಅಖಿಲ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಶನಿವಾರ ನಡೆದ ಕೂಟದ 196ನೇ ಕಾರ್ಯಕ್ರಮದ ‘ಕನ್ಯಾರ್’ ಕವನ ಪುಸ್ತಕ ಬಿಡುಗಡೆ ಹಾಗೂ ರಾಜ್ಯಮಟ್ಟದ ಕೊಡವ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎರಡನೇ ಅವಧಿಗೆ ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕೊಡವ ತಕ್ಕ್ ಎಳ್ತ್ ಕಾರಡ ಕೂಟದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕವಿಗಳು ತಮ್ಮ ಕಾವ್ಯದಲ್ಲಿ ಕೊಡಗಿನ ಪ್ರಕೃತಿ, ಪರಿಸರ, ಕೊಡವ ಕಲೆ ಸಂಸ್ಕೃತಿ, ಆಹಾರ ಪದ್ಧತಿ ಪ್ರತಿಬಿಂಬಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳನ್ನು ಸಾಹಿತ್ಯ ಓದುವ ಸಂಸ್ಕೃತಿಯತ್ತ ಕರೆತನ್ನಿ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಕೊಡವ ತಕ್ಕ್ ಎಳ್ತ್ ಕಾರಡ ಕೂಟವು ಸಾಹಿತ್ಯ ರಚನೆಗೆ ಯುವ ಲೇಖಕರನ್ನು ಪ್ರೋತ್ಸಾಹಿಸುವರ, ಹಿರಿಯ ಕಿರಿಯ ಲೇಖಕರಿಂದ ಬರೆಯಿಸಿ 196 ಕೊಡವ ಸಾಹಿತ್ಯ ಕೃತಿಗಳನ್ನು ಹೊರತಂದಿದೆ ಎಂದರು.
ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಕೂಟವು ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಮಾಡಿದ ಸೇವೆ ಹಾಗೂ ಸಾಧನೆಗಳ ಬಗ್ಗೆ ವಿವರಿಸಿದರು. ಮೂಕಳೆರ ಟೈನಿ ಪೂಣಚ್ಚ ‘ಕನ್ಯಾರ್’ ಕವನ ಸಂಕಲನ ಬಿಡುಗಡೆ ಮಾಡಿದರು. 40 ಮಂದಿ ಕವನ ವಾಚಿಸಿದರು. ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ನಿರ್ದೇಶಕಿ ಮನ್ನೇರ ಸರಸ್ವತಿ ರಮೇಶ್, ಕೂಟ ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ,ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ, ನಿರ್ದೇಶಕ ಕಾಳಿಮಾಡ ಮೋಟಯ್ಯ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.