ADVERTISEMENT

ಕೊಡಗು: ಶಾಸನಸಭೆಯಲ್ಲಿ ಪ್ರತ್ಯೇಕ ಮೀಸಲು ಸ್ಥಾನಕ್ಕೆ ಬೇಡಿಕೆ

ಸಿಎನ್‌ಸಿಯಿಂದ ಮಾನವ ಸರಪಳಿ; ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 3:02 IST
Last Updated 29 ಆಗಸ್ಟ್ 2025, 3:02 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನೇತೃತ್ವದಲ್ಲಿ ಬುಧವಾರ ವಿರಾಜಪೇಟೆಯಲ್ಲಿ ಮಾನವ ಸರಪಳಿ ರಚಿಸಲಾಯಿತು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನೇತೃತ್ವದಲ್ಲಿ ಬುಧವಾರ ವಿರಾಜಪೇಟೆಯಲ್ಲಿ ಮಾನವ ಸರಪಳಿ ರಚಿಸಲಾಯಿತು   

ಮಡಿಕೇರಿ: ರಾಷ್ಟ್ರೀಯ ಜನಗಣತಿ ವೇಳೆ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಬೇಕು ಹಾಗೂ ಶಾಸನಸಭೆಗಳಲ್ಲಿ ಕೊಡವರಿಗೆ ಪ್ರತ್ಯೇಕ ಮೀಸಲು ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಡೆಸುತ್ತಿರುವ ಮಾನವ ಸರಪಳಿ ಮುಂದುವರಿದಿದೆ.

ವಿರಾಜಪೇಟೆಯಲ್ಲಿ ಬುಧವಾರ ನಡೆದ 11ನೇ ಮಾನವ ಸರಪಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ‘ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವ ಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ ‘ಸಂಘ’ ಕ್ಷೇತ್ರದಂತೆಯೇ 2026ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಕೊಡಗಿನಲ್ಲಿ ಬಾಂಗ್ಲಾದೇಶಿಗರು ಹಾಗೂ ರೋಹಿಂಗ್ಯಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಜೊತೆಗೆ, ಹೊರರಾಜ್ಯದವರನ್ನು ಇಲ್ಲಿಯೇ ನೆಲೆಯೂರಿಸಿ ಅಕ್ರಮ ಮತಬ್ಯಾಂಕ್‌ ಸೃಷ್ಟಿಸಲೂ ಪ್ರಯತ್ನಗಳು ನಡೆದಿವೆ ಎಂಬ ಕುರಿತು ಆರೋಪಗಳಿವೆ. ಈ ಕುರಿತು ವಿಸ್ತೃತ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸೆ.8ರಂದು ಗೋಣಿಕೊಪ್ಪಲಿನಲ್ಲಿ ಜನಜಾಗೃತಿ ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು. ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ’ ಎಂದರು.

ಬಿದ್ದಂಡ ಉಷಾ ದೇವಮ್ಮ, ಮುದ್ದಿಯಡ ಲೀಲಾವತಿ, ಬೊಳ್ಳಂಡ ಸೌಮ್ಯಾ ಪೂವಯ್ಯ, ಪಾಂಡಂಡ ಗೊಂಬೆ ಪ್ರಕಾಶ್, ಕೋಳೆರ ಟೀನ ರನ್ನ, ಪಾಲಂಧೀರ ಗಂಗಮ್ಮ, ದೇಯಂಡ ಶಾಂತಿ, ನೆಲ್ಲಮಕ್ಕಡ ಕಾವೇರಮ್ಮ, ಮುಂಡಂಡ ಲವ್ಲಿ, ಕರಿನೆರವಂಡ ಬೋಜಿ ಭೀಮಯ್ಯ, ಕರಿನೆರವಂಡ ಶಾಂತಿ, ಬಿದ್ದಂಡ ತಿಲಕ, ಬಿದ್ದಂಡ ಸುರಕ್ಷಿತಾ, ಕರಿನೆರವಂಡ ಜಯ, ಚಿಲ್ಲವಂಡ ರೇಖಾ ಹರೀಶ್, ಕೂತಂಡ ಅಕ್ಷಿತಾ ಲೋಕೇಶ್ ಭಾಗವಹಿಸಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನೇತೃತ್ವದಲ್ಲಿ ಬುಧವಾರ ವಿರಾಜಪೇಟೆಯಲ್ಲಿ ಮಾನವ ಸರಪಳಿ ರಚಿಸಲಾಯಿತು

‘ಭೂಪರಿವರ್ತನೆಯಿಂದ ಅನಾಹುತ’

‘2018ರಲ್ಲಿ ಕೊಡವಲ್ಯಾಂಡ್‌ನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಸಾವುನೋವು ಕಷ್ಟನಷ್ಟಗಳು ಎದುರಾಗಿದ್ದರೂ ಇದನ್ನು ಲೆಕ್ಕಿಸದೆ ಭೂಪರಿವರ್ತನೆ ಎಗ್ಗಿಲ್ಲದೇ ನಡೆದಿದೆ. ಬೃಹತ್ ಕಾಫಿ ತೋಟಗಳನ್ನು ಬೃಹತ್ ವಿಲ್ಲಾ ಮತ್ತು ಟೌನ್‌ಶಿಪ್ ಮಾಡುವ ಪ್ರಯತ್ನಗಳು ನಡೆದಿವೆ. ಹೊರಗಿನ ಬಂಡವಾಳಶಾಹಿಗಳು ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ’ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.