
ಮಡಿಕೇರಿ: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಹಳೆಯ ಸರ್ಕಾರಿ ಶಾಲೆಯೊಂದು 155 ವರ್ಷಗಳನ್ನು ಪೂರೈಸಿ ಸಂಭ್ರಮಾಚರಣೆಯಲ್ಲಿದೆ. ಸುತ್ತಮುತ್ತಲ ಶಿಕ್ಷಣ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.
ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಬ್ರಿಟಿಷರ ಅವಧಿಯಲ್ಲಿ 1870ರಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಶಾಲೆಯಲ್ಲಿ ಕಲಿತವರು ರಾಜಕಾರಣಿಗಳಾಗಿದ್ದಾರೆ, ಐಎಎಸ್, ಕೆಎಎಸ್ ಅಧಿಕಾರಿಗಳಾಗಿದ್ದಾರೆ, ಹೈಕೋರ್ಟ್‌ನ ವಕೀಲರೂ ಆಗಿದ್ದಾರೆ. ಈ ಮೂಲಕ ಈ ಶಾಲೆ ಸಮಾಜದ ನಾನಾ ಕ್ಷೇತ್ರಗಳಿಗೆ ತನ್ನದೇ ಕೊಡುಗೆ ನೀಡಿದೆ.
ಈ ಶಾಲೆಯಲ್ಲಿ ಸುಸಜ್ಜಿತವಾದ ವಿಶಾಲವಾದ ಕ್ರೀಡಾಂಗಣ ಇದೆ. ದೈಹಿಕ ಶಿಕ್ಷಕಿ ಆಶಾ ಅವರ ನೇತೃತ್ವದಲ್ಲಿ ಮಕ್ಕಳಿಗೆ ಉತ್ತಮ ಕ್ರೀಡಾ ತರಬೇತಿ ದೊರೆಯುತ್ತಿದೆ. ಈಚೆಗಷ್ಟೇ ಈ ಶಾಲೆಯ ಕೆಲವು ವಿದ್ಯಾರ್ಥಿಗಳು ಕ್ರೀಡಾಶಾಲೆಗಳಿಗೆ ಆಯ್ಕೆಯಾಗಿದ್ದಾರೆ.
ಒಂದು ಕಾಲದಲ್ಲಿ 22 ಶಿಕ್ಷಕರು ಮತ್ತು 1,200 ಮಕ್ಕಳು ಈ ಶಾಲೆಯಲ್ಲಿದ್ದರು. ಆನಂತರ, ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳ ಹೊಡೆತದಿಂದ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕುಸಿತ ಕಂಡಿತ್ತು. ಈಗ ಶಾಲೆಯ ಶಿಕ್ಷಕರು, ಶಾಲಾ ಆಡಳಿತ ಮತ್ತು ಮೇಲ್ವಿಚಾರನಾ ಸಮಿತಿ ಹಾಗೂ ಗ್ರಾಮಸ್ಥರ ಒತ್ತಾಸೆಯಿಂದ 200 ಮಕ್ಕಳು ಈಗ ಶಾಲೆಯಲ್ಲಿದ್ದಾರೆ.
ಇಲ್ಲಿಗೆ ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ, ಹಂಡ್ಲಿ, ಬೆಂಬಳೂರು, ಊರುಗುತ್ತಿ, ಎಸಳೂರು, ಕಿರುಕೊಡ್ಲಿ ಸೇರಿದಂತೆ ಸುತ್ತಮುತ್ತಲ 15ಕ್ಕೂ ಹೆಚ್ಚು ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಾಸನ ಜಿಲ್ಲೆಯ ಕೆರೋಡಿ ಗ್ರಾಮದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿರುವುದು ವಿಶೇಷ.
ವಿಶಾಲವಾದ ಕ್ರೀಡಾಂಗಣದ ಜತೆಗೆ, 2,500ಕ್ಕೂ ಪುಸ್ತಕಗಳಿರುವ ಗ್ರಂಥಾಲಯ ಇದೆ, ಕ್ರೀಡಾ ಪರಿಕರಗಳೂ ಇಲ್ಲಿವೆ. ಶಾಲಾ ಆಡಳಿತ ಮಂಡಳಿ ಮತ್ತು ಮೇಲ್ವಿಚಾರನಾ ಸಮಿತಿಯ ಅಧ್ಯಕ್ಷ ವಸಂತ್ ಹಾಗೂ ಸದಸ್ಯರು ಶಾಲೆಯ ಉಳಿವಿಗೆ ವಿಶೇಷ ಗಮನ ಹರಿಸಿದ್ದಾರೆ. ವಸಂತ್ ಅವರೇ ಸ್ವತಃ ವಾಹನ ಚಾಲನೆ ಮಾಡಿಕೊಂಡು ಸುತ್ತಮುತ್ತಲ ಹಳ್ಳಿಗಳಿಂದ ಮಕ್ಕಳನ್ನು ಶಾಲೆಗೆ ಕರೆ ತರುತ್ತಿರುವುದು ವಿಶೇಷ.
‘ಈ ಶಾಲೆಯು ಅತ್ಯಂತ ಹಳೆಯ ಶಾಲೆ. ಇಲ್ಲಿ ಕಲಿತವರು ಉನ್ನತ ಹುದ್ದೆಗಳಿಗೆ ಏರಿದ್ದಾರೆ. ಖಾಸಗಿ ಶಾಲೆಗಳ ಬಿರುಸಿನ ಸ್ಪರ್ಧೆಯ ನಡುವೆಯೂ ಇಂದಿಗೂ ಈ ಶಾಲೆ ಉತ್ತಮ ಶಿಕ್ಷಣ ನೀಡುತ್ತಿದೆ’ ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಕೊಡ್ಲಿಪೇಟೆಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಅಬ್ದುಲ್ ರಬ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶತಮಾನೋತ್ಸವ ಕಾರ್ಯಕ್ರಮ ಇಂದು
ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 155ನೇ ಸಾರ್ಧ ಶತಮಾನೋತ್ಸವ ಮತ್ತು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಫೆ. 7ರಂದು ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಶಾಲಾ ಮಕ್ಕಳಿಂದ ಮೆರವಣಿಗೆ ನಡೆಯಲಿದ್ದು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಲಿಸದ್ದಾರೆ. ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕೊಡ್ಲಿಪೇಟೆಯ ಕಲ್ಲುಮಠದ ಮಹಾಂತ ಸ್ವಾಮೀಜಿ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.