
ಮಡಿಕೇರಿ: ಕುಡಿಯ ಜನಾಂಗವು ಕೊಡವ ಸಂಸ್ಕೃತಿ, ಭಾಷೆ, ಜಾನಪದಕ್ಕೆ ಅನಾದಿಕಾಲದಿಂದಲೇ ಕೊಡುಗೆ ನೀಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್‍ನಾಡ್ ಪೂಮಲೆ ಕುಡಿಯ ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಯವಕಪಾಡಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕುಡಿಯಡ ಸಾಂಸ್ಕೃತಿಕ ನಮ್ಮೆಯಲ್ಲಿ ಅವರು ಮಾತನಾಡಿದರು.
‘ಕೊಡಗಿನಲ್ಲಿ ‘ಮಲೆ ಕುಡಿಯ ಅಥವಾ ಪೂಮಾಲೆ ಕುಡಿಯ’ ಎಂದು ಗುರುತಿಸಿಕೊಂಡಿದ್ದು ಇವರು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಕೊಡವ ಆಚಾರ-ವಿಚಾರ, ಪದ್ಧತಿಯನ್ನು ತಮ್ಮ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡು ಬರುತ್ತಿರುವುದೇ ಅಲ್ಲದೆ ಒಗ್ಗಟ್ಟಿನಲ್ಲಿ ಬದುಕು ನಡೆಸುತ್ತಿರುವುದು ಶ್ಲಾಘನೀಯ. ಇವರು ತಮ್ಮನ್ನು ಆದಷ್ಟು ಹೊರಜಗತ್ತಿಗೆ ಪರಿಚಯಿಸಿಕೊಳ್ಳುವಂತಾಗಬೇಕು’ ಎಂದರು.
ಕೊಡವ ಸಂಸ್ಕೃತಿಯು ಕೇವಲ ಒಂದು ಆಚರಣೆ ಮಾತ್ರ ಅಲ್ಲ, ಇದೊಂದು ಬದುಕಿನ ಪಥವಾಗಿದೆ. ಕೊಡವ ಸಂಸ್ಕೃತಿ ಪಾಲಿಸುತ್ತಿರುವ ಜನಾಂಗಗಳು ಎಲ್ಲಿಯೇ ಇದ್ದರೂ ತಮ್ಮ ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆ ಮರೆತು ನಡೆಯಬಾರದು ಎಂದು ಕಿವಿಮಾತು ಹೇಳಿದರು.
ಕೊಡವ ತಕ್ಕ್ ಜನಾಂಗ ಒಕ್ಕೂಟದ ಅಧ್ಯಕ್ಷ ಪಡಿಞಂರಂಡ ಜಿ.ಅಯ್ಯಪ್ಪ ಮಾತನಾಡಿ, ‘ಯಾವುದೇ ಒಂದು ಜನಾಂಗದ ಅಳಿವು-ಉಳಿವು ಅವರ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವುದರ ಮೇಲೆ ನಿಂತಿರುತ್ತದೆ. ಕೊಡವ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಈಗಿನ ಅಕಾಡೆಮಿ ಅಧ್ಯಕ್ಷರಿಗೆ ಬಹುತರವಾದ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಇದಕ್ಕೆ ಎಲ್ಲಾ ಜನಾಂಗದವರು ಸಹಕರಿಸಬೇಕು. ಕೊಡವ ಭಾಷೆಗೆ ಸರ್ಕಾರದಿಂದ ಮಾನ್ಯತೆ ದೊರೆತರೆ, ಸರ್ವರಿಗೂ ಮಾನ್ಯತೆ ದೊರೆತಂತೆ’ ಎಂದರು.
ಕುಡಿಯ ಸಮುದಾಯದಲ್ಲಿ ಕೊಡವ ಆಚಾರ-ವಿಚಾರ, ಜನಪದವನ್ನು ಕಲಿತು, ಕಲಿಸುತ್ತ ಕುಡಿಯ ಸಂಸ್ಕೃತಿಯನ್ನು ಬೆಳೆಸುತ್ತಿರುವ ಗಾಳಿಬೀಡಿನ ಬಾಳೋಪಾಟ್ ಕಲಾವಿದ ನೇರತೊಕ್ಕಡ ರಮೇಶ್, ಯವಕಪಾಡಿಯ ಜಾನಪದ ಕಲಾವಿದ ಪಡಿಯಮಲೆ ಗಣೇಶ್ ಬಿದ್ದಪ್ಪ, ಹಿರಿಯ ಯವಕಪಾಡಿಯ ಜಾನಪದ ಕಲಾವಿದ ಕುಯಿನಾಲಮಲೆ ಪೂಣಚ್ಚ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎಂ.ರಾಜ, ತೋರ ಗ್ರಾಮದ ಯುವ ಜಾನಪದ ಕಲಾವಿದೆ ಕಿಪ್ಪರೆಮಲೆ ಪುಷ್ಪ ಮಾಚಯ್ಯ ಗಾಳಿಬೀಡಿನ ಯುವ ಜಾನಪದ ಕಲಾವಿದೆ ನೇರತೊಕ್ಕಡ ರಾಧಿಕಾ ಅವರನ್ನು ಸನ್ಮಾನಿಸಲಾಯಿತು.
ಕದ್ದಣಿಯಂಡ ವಂದನ ಚಿಣ್ಣಪ್ಪ, ಅಂಜಪರವಂಡ ರಂಜನ್ ಮುತ್ತಪ್ಪ, ಮೂವೆರ ರೇಖಾ ಪ್ರಕಾಶ್ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಗಾಳಿಬೀಡು, ಯವಕಪಾಡಿ ತಂಡದಿಂದ ಕೋಲಾಟ್ ಹಾಗೂ ಉರ್‍ಟಿಕೊಟ್ಟ್ ಆಟ್ ಪ್ರದರ್ಶನ ನಡೆಯಿತು. ಗಿರಿಜ ಹಾಗೂ ತಂಡದವರು ಪ್ರಾರ್ಥನೆ ಮಾಡಿದರು. ಹಿರಿಯರಾದ ಕುಯಿನಾಲಮಲೆ ಸೀತಮ್ಮ ಕರುಂಬಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಅಕಾಡೆಮಿ ಸದಸ್ಯರಾದ ಕುಡಿಯರ ಕಾವೇರಪ್ಪ, ಮೊಳ್ಳೆಕುಟ್ಟಡ ದಿನು ಬೋಜಪ್ಪ ಸಂಚಾಲಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು. ಗಗನ್, ಚೆಪ್ಪುಡಿರ ಎಸ್. ಉತ್ತಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ಕಕ್ಕಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮರಂದೋಡ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್, ಹಿರಿಯರಾದ ಬಾಚಮಂಡ ರಾಜ ಪೂವಣ್ಣ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ, ಹಿರಿಯ ಜಾನಪದ ಕಲಾವಿದ ಕೋಲಿಂದಮಲೆ ಎ. ಚಿಣ್ಣಪ್ಪ, ಕೋಡಿಮಣಿಯಂಡ ಬೋಪಯ್ಯ, ಆರತೊಕ್ಕಡ ಮಹೇಶ್, ಮಿಥುನ್ ರಂಜಿತ್, ಕೋಪಟ್ಟಿಮಲೆ ಮಹೇಶ್, ಐರಿರ ರೈನ ಕಾರ್ಯಪ್ಪ, ಕಣಿಯರ ನಾಣಯ್ಯ, ಕಬ್ಬೆಮಲೆ ಲೋಲಾವತಿ, ಕುಡಿಯರ ಭರತ್ ದೇವಯ್ಯ ಭಾಗವಹಿಸಿದ್ದರು.
‘ಜಿಲ್ಲಾ ಮಟ್ಟದಲ್ಲಿ ಕುಡಿಯ ಸಾಂಸ್ಕೃತಿಕ ನಮ್ಮೆ ನಡೆಸಿ’
‘ಕೊಡಗ್‍ರ ದೇವನೆಲೆಲ್ ಕುಡಿಯ ಜನಾಂಗ’ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರ ಮಂಡಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕೋಲಿಂದಮಲೆ ಕೆ.ಬೋಪಯ್ಯ ಪ್ರಸ್ತುತ ಕೊಡಗಿನ (ಪೂ)ಮಲೆ ಕುಡಿಯರಲ್ಲಿ 35 ಕುಟುಂಬಗಳಿವೆ. ಅಂದಾಜು ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಕುಡಿಯರು ಪನ್ನಂಗಾಲತಮ್ಮೆ ನೆಲೆ ನಿಂತಲ್ಲಿಂದಲೇ ವಿವಿಧ ದೇವನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕುಡಿಯ ಸಾಂಸ್ಕೃತಿಕ ನಮ್ಮೆ ನಡೆಸಿಕೊಡಬೇಕು ಎಂದು ಮನವಿ ಮಾಡಿದರು.
‘ಬಾಲ್ಯದಲ್ಲೇ ಕೊಡವ ಭಾಷೆ ಸಂಸ್ಕೃತಿ ಕಲಿಸಿ’
ಮುಖಂಡ ಕುಡಿಯರ ಮುತ್ತಪ್ಪ ಮಾತನಾಡಿ ಮನೆಯಲ್ಲಿ ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಚಿಕ್ಕಂದಿನಿಂದಲೇ ಕೊಡವ ಭಾಷೆ ಸಂಸ್ಕೃತಿಯನ್ನು ಕಲಿಸಬೇಕು. ಪ್ರತಿಯೊಬ್ಬರೂ ಬಾಲ್ಯದಲ್ಲಿ ತಮ್ಮ ಹೆಗಲಿನಲ್ಲಿ ದುಡಿಯನ್ನು ತೂಗಿಸುವ ಕೆಲಸ ಮಾಡಬೇಕು. ಬಾಳೋಪಾಟ್ ಕಲಿತರೆ ಇಡೀ ಸಂಸ್ಕೃತಿ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಇದು ಕೊಡವಾಮೆ ಪ್ರಜ್ವಲಿಸಲು ಅನುವು ಮಾಡಿಕೊಡುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.