ADVERTISEMENT

ಕುಶಾಲನಗರ | 'ಆಚರಣೆ ಉಳಿಸಲು ಕೊಡವ ಸಮಾಜ ಅಗತ್ಯ'

ಕೈಲ್ ಪೊಳ್ದ್ ಆಟೋಟ ಮತ್ತು ಸಂತೋಷ ಕೂಟದಲ್ಲಿ ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:55 IST
Last Updated 7 ಅಕ್ಟೋಬರ್ 2025, 7:55 IST
ಕುಶಾಲನಗರ ಕೊಡವ ಸಮಾಜದ ವತಿಯಿಂದ ನಡೆದ ಕೈಲ್ ಪೊಳ್ದ್ ಆಟೋಟ ಮತ್ತು ಸಂತೋಷಕೂಟ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಶಾಸಕ ಪೊನ್ನಣ್ಣ ಬಹುಮಾನ ವಿತರಣೆ ಮಾಡಿದರು
ಕುಶಾಲನಗರ ಕೊಡವ ಸಮಾಜದ ವತಿಯಿಂದ ನಡೆದ ಕೈಲ್ ಪೊಳ್ದ್ ಆಟೋಟ ಮತ್ತು ಸಂತೋಷಕೂಟ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಶಾಸಕ ಪೊನ್ನಣ್ಣ ಬಹುಮಾನ ವಿತರಣೆ ಮಾಡಿದರು   

ಕುಶಾಲನಗರ: ಇಲ್ಲಿನ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಆಟೋಟ ಮತ್ತು ಸಂತೋಷ ಕೂಟ ಕಾರ್ಯಕ್ರಮ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊಡಗಿನ ಹಾಗೂ ವಿಶೇಷವಾಗಿ ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳು ವಿಶೇಷ ಪಾತ್ರ ವಹಿಸುತ್ತಿವೆ ಎಂದರು. ಸಮಾಜ ಬಾಂಧವರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳನ್ನು ಅನುಸರಿಸುತ್ತಾ ಬೆಳೆಸುವ ಗುರುತರ ಜವಾಬ್ದಾರಿಯನ್ನು ಕೊಡವ ಸಮಾಜದವರು ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಂದು ಸಮಾಜ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲು ಅದರ ಸಂಸ್ಕೃತಿ, ಭಾಷೆ ಹಾಗೂ ಆಚರಣೆಗಳನ್ನು ಪೋಷಿಸಿ ಬೆಳೆಸುವುದು ಅತ್ಯಂತ ಅವಶ್ಯಕ ವಿಷಯವಾಗಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಾ ನಮ್ಮ ಆಚರಣೆಗಳನ್ನು ಜಗತ್ತಿಗೆ ಪರಿಚಯಿಸುವುದರಲ್ಲಿ ನಾವು ಎಂದಿಗೂ ಹಿಂದೆ ಬೀಳಬಾರದು ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊಡಗರು ಎಂದು ಸಂಬೋಧಿಸಲ್ಪಡುತ್ತಿದ್ದ ಶಬ್ದವನ್ನು ಕೊಡವ ಎಂಬುದಾಗಿ ತಿದ್ದುಪಡಿ ಮಾಡಿಸಿರುವುದು, ಕೋವಿ ಹಕ್ಕಿನ ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಳ್ಳಲು ಕ್ರಮ ಕೈಗೊಂಡಿರುವುದು, ನಮ್ಮನ್ನು ದಶಕಗಳಿಂದ ಕಾಡುತ್ತಿರುವ ಜಮ್ಮಾ ಬಾಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಗುತ್ತಿದೆ. ಕೊಡವ ಜನಾಂಗದವರು ಹಾಗೂ ಈ ನಾಡಿನ ಎಲ್ಲಾ ಜನಾಂಗದವರ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ನಡುಬಾಡೆ ಇ-ನ್ಯೂಸ್ ಸಂಪಾದಕ ಚಾಮೆರ ದಿನೇಶ್ ಬೆಳ್ಯಪ್ಪ ಸೇರಿದಂತೆ ಕೊಡವ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ‌ ಮುನ್ನ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಸಾಧಕರಿಗೆ ಸನ್ಮಾನ ಸೇರಿದಂತೆ, ಆಟೋಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.