ADVERTISEMENT

ಕುಶಾಲನಗರ ಪುರಸಭೆ: 23 ವಾರ್ಡ್‌ ಆಗಿ ವಿಂಗಡಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:17 IST
Last Updated 20 ಜುಲೈ 2025, 4:17 IST
ಕುಶಾಲನಗರ ಪುರಸಭೆಯನ್ನು 23 ವಾರ್ಡ್ ಗಳಾಗಿ ವಿಂಗಡಣೆ ಮಾಡಲಾಗಿದೆ.
ಕುಶಾಲನಗರ ಪುರಸಭೆಯನ್ನು 23 ವಾರ್ಡ್ ಗಳಾಗಿ ವಿಂಗಡಣೆ ಮಾಡಲಾಗಿದೆ.   

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದಾರ್ಜೆಗೆ ಏರಿಸದ ಸರ್ಕಾರ ಇದೀಗ ಎರಡು ವರ್ಷಗಳ ನಂತರ ಪುರಸಭೆಯನ್ನು 23 ವಾರ್ಡ್‌ಗಳಾಗಿ ವಿಂಗಡಣೆ ಮಾಡಿದೆ.

ಚರಿತಾಪ್ರಕಾಶ್ ಪ.ಪಂ.ಅಧ್ಯಕ್ಷರಾಗಿದ್ದ 2014ರ ಅವಧಿಯಲ್ಲಿ ಕಾನೂನು ಸಲಹೆಗಾರರಾಗಿದ್ದ ಆರ್.ಕೆ.ನಾಗೇಂದ್ರ ಬಾಬು ಅವರ ಮಾರ್ಗದರ್ಶನದಲ್ಲಿ ನೀಲನಕಾಶೆ ಸಿದ್ಧಪಡಿಸಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪುರಸಭೆಯಾಗಿ ಮೇಲ್ದಾರ್ಜೆಗೇರಿಸಬೇಕು ಎಂಬ ನಿರ್ಣಯ ಕೈಗೊಂಡು ಪೂರಕ ದಾಖಲೆಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಈ ಬೇಡಿಕೆ ಈಡೇರಲಿಲ್ಲ. 2021 ಜುಲೈ 17 ರಂದು ಪ.ಪಂ.ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಹೊಸದಾಗಿ ವರದಿ ಸಿದ್ಧಪಡಿಸಿ ಮತ್ತೆ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಯಿತು.

ADVERTISEMENT

ಆಗಿನ ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ಸರ್ಕಾರಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಕಳುಹಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಗಿನ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಅವರ ವಿಶೇಷ ಆಸಕ್ತಿಯಿಂದ ಕಳೆದ ಎರಡು ವರ್ಷಗಳ ಹಿಂದೆ ಕುಶಾಲನಗರ ಪುರಸಭೆಯಾಗಿ ಮೇಲ್ದಾರ್ಜೆಗೇರಿತು. ಕುಶಾಲನಗರ ಪಟ್ಟಣ ಸೇರಿದಂತೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರಿನ ಗ್ರಾ.ಪಂ.ಯ ಮಾದಪಟ್ಟಣ ಗ್ರಾಮದ ಭಾಗಶಃ ಪುರಸಭೆ ಸುಪರ್ದಿಗೆ ಸೇರ್ಪಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಇ-ಆಡಳಿತ) ಕರ್ನಾಟಕ ಸರ್ಕಾರ ಪ್ರಾದೇಶಿಕ ಕೇಂದ್ರ, ಮೈಸೂರು ಇದೀಗ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಗ್ರಾಮಗಳನ್ನು ಒಳಗೊಂಡಂತೆ ಪುರಸಭೆಯನ್ನು 23 ವಾರ್ಡ್ ಆಗಿ ವಿಂಗಡಣೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.