
ಕುಶಾಲನಗರ: ‘ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆಯ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ₹8 ಕೋಟಿ ಅನುದಾನ ಮಂಜೂರಾಗಿದ್ದು, ಹೊಸ ವರ್ಷದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಲೋಕೋಪಯೋಗಿ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಂಜರಾಯಪಟ್ಟಣ ಗ್ರಾಮದಲ್ಲಿ ₹5.14 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಬೇಕು ಎಂಬ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಹೊಸ ವರ್ಷದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎಂದರು.
‘ಚಿಕ್ಲಿಹೊಳೆ ಜಲಾಶಯದ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ₹5 ಕೋಟಿ ಮಂಜೂರಾಗಿದೆ. ಮುಖ್ಯಮಂತ್ರಿಗಳ ನಿಧಿಯಿಂದ ₹2 ಕೋಟಿ ವೆಚ್ಚದಲ್ಲಿ ಬಾಳುಗೋಡು ರಸ್ತೆ ಅಭಿವೃದ್ಧಿ ಅನುದಾನ ಬಿಡುಗಡೆಗೊಂಡಿದೆ. ಮಾವಿನಹಳ್ಳ ತೋಡು ಅಭಿವೃದ್ಧಿ ₹25 ಲಕ್ಷ ಸೇರಿದಂತೆ ನಂಜರಾಯಪಟ್ಟಣ ಪಂಚಾಯಿತಿಗೆ ಒಟ್ಟು ₹20 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಹೇಳಿದರು.
‘ಹಾಸ್ಟೆಲ್‌ಗೆ ಕುಡಿಯುವ ನೀರು, ತಡೆಗೋಡೆಯನ್ನು ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಸುನೀತಾ ಮಂಜುನಾಥ್, ನಂಜರಾಯಪಟ್ಟಣ ವಿದ್ಯಾಸಂಸ್ಥೆ ಯತೀಶ್ ಕುಮಾರ್, ಕಾರ್ಯದರ್ಶಿ ಲೋಕನಾಥ್, ಲಿಲಿತ್ಮ ಚಿದಂಬರ್,ಪಿ.ಡಿ. ಅಶೋಕ್, ಪಂಚಾಕ್ಷರಿ, ಪ್ರೇಮನಂದ, ಕಾಳಿಂಗ, ಪಿಡಿಒ ರಾಜಶೇಖರ್, ಲೋಕೋಪಯೋಗಿ ಎಂಜಿನಿಯರ್
ಹರ್ಬಜ್ ಮಹಮ್ಮದ್, ಶಿಕ್ಷಕ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.
ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪದಕಂಡಿ ಬಳಿ ₹1.65 ಕೋಟಿ ವೆಚ್ಚದಲ್ಲಿ ನಾಲೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಉಪಾಧ್ಯಕ್ಷೆ ನೇತ್ರಾವತಿ, ಮುಖಂಡರಾದ ಚಂದ್ರಶೇಖರ್, ಮಲ್ಲಿಕಾರ್ಜುನ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕುಮಾರಸ್ವಾಮಿ, ಗ್ರಾಮದ ಮುಖಂಡರಾದ ದಾಮೋದರ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಸ್ತೆ ಅಭಿವೃದ್ಧಿಗೆ ಚಾಲನೆ: ಮಾದಪಟ್ಟಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ₹25 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿಗೆ ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ದಾಮೋದರ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.