ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಉದ್ಘಾಟಿಸಿದರು.
ಕುಶಾಲನಗರ: ‘ಶಿಕ್ಷಣವು ಮನುಷ್ಯನ ವ್ಯಕ್ತಿತ್ವದ ವಿಕಸನಕ್ಕೆ ಭದ್ರ ಬುನಾದಿ ಆಗಿದೆ’ ಎಂದು ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.
ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಹಾಗೂ ಸಮಾನ ಶಿಕ್ಷಣ ದೊರೆಯಬೇಕು ಎಂಬುದನ್ನು ಅಳವಡಿಸಿದರು. ಅದೇ ರೀತಿ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಹೋರಾಟ ನಡೆಸಿದರು. ಈ ಮಹಾನೀಯರ ಹೋರಾಟದ ಫಲದಿಂದ ಇಂದು ಹೆಣ್ಣು ಮಕ್ಕಳು ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ಎಲ್ಲಾ ರಂಗಗಳಲ್ಲೂ ಮಹಿಳೆ ದಿಟ್ಟತನದಿಂದ ಮುಂದೆ ಹೋಗಲು ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಇಂದು ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಇದ್ದು, ಪಠ್ಯ ಕೇಂದ್ರಿತ ಶಿಕ್ಷಣ ಹಾಗೂ ಸಮಾಜೋ ಸಾಂಸ್ಕೃತಿಕ ಶಿಕ್ಷಣ ಇದೆ. ವಿದ್ಯಾರ್ಥಿ ಈ ಎರಡನ್ನು ರೂಢಿಸಿಕೊಳ್ಳಬೇಕು. ಕೇವಲ ಬುದ್ದಿ ಬೆಳೆಸಿಕೊಳ್ಳುವುದು ಮುಖ್ಯವಲ್ಲ, ಭಾವನೆಗಳನ್ನೂ ರೂಪಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಪ್ರಬುದ್ಧನಾಗಿ ಬೆಳೆಯಲು ಸಾಧ್ಯ’ ಎಂದರು.
‘ಕಾಲೇಜಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ’ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ಮಾತನಾಡಿ, ‘ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಕಾಲೇಜು ಆದ ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು, ತುಂಬ ಸಂತಸ ತಂದಿದೆ. ಮಾರ್ಚ್‌ನಲ್ಲಿ ನಿವೃತ್ತಿಯಾಗಿದ್ದೇನೆ. ಈ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇಲ್ಲಿ ಶಿಸ್ತು ಬದ್ದವಾಗಿ ಪರೀಕ್ಷೆ ನಡೆಸುತ್ತೇವೆ’ ಎಂದರು.
ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಸಂಚಾಲಕ ಪ್ರೊ.ರಮೇಶ್ಚಂದ್ರ ಕಾಲೇಜು ವರದಿ ವಾಚಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರ್ಪಿತಾ ಮತ್ತು ತಂಡದವರು ನಾಡಗೀತೆ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಗೌಡ, ಸುಷ್ಮಕೃಷ್ಣ, ಬಿ.ಕೆ.ಚೇತನ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಟಿ.ಎಂ.ಸುಧಾಕರ್, ಎನ್.ಎಸ್.ಎಸ್ ಅಧಿಕಾರಿ ಬಿ.ಕೆ.ಕುಮಾರ್, ಕ್ರೀಡಾ ವಿಭಾಗದ ಸಂಚಾಲಕರಾದ ಜಯಂತಿ, ಕೆ.ಟಿ.ಕುಸುಮಾ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ಸುನೀಲ್ ಕುಮಾರ್, ರಶ್ಮಿ, ಕಚೇರಿ ಅಧೀಕ್ಷಕ ಮೋಹನ್ ಕುಮಾರ್, ಉಪನ್ಯಾಸಕರಾದ ಕೆ.ಆರ್.ವಂದನಾ, ಕುಸುಮಾ ಪಾಲ್ಗೊಂಡಿದ್ದರು.
‘ಬಿಎಸ್‌ಸಿ ಕೋರ್ಸ್ ಆರಂಭಕ್ಕೆ ಮನವಿ’
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜೇಗೌಡ ಮಾತನಾಡಿ ‘ಮುಂದಿನ ಶೈಕ್ಷಣಿಕ ಸಾಲಿನಿಂದ ಬಿಎಸ್‌ಸಿ ಕೋರ್ಸ್ ಆರಂಭಿಸಬೇಕು ಎಂಬ ಬೇಡಿಕೆಯನ್ನು ಶಾಸಕ ಮಂತರ್ ಗೌಡ ಅವರಿಗೆ ಮನವಿ ಮಾಡಲಾಗಿದೆ. ಶಾಸಕರೂ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ.
ಬಿಎಸ್‌ಸಿ ಕೋರ್ಸ್ ಆರಂಭವಾದರೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ತುಂಬ ಅನುಕೂಲವಾಗಲಿದೆ. ದೂರದ ನಗರ ಪ್ರದೇಶಗಳಿಗೆ ಹೋಗುವುದು ಹಾಗೂ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ’ ಎಂದರು.
‘ಕಾಲೇಜಿನಲ್ಲಿರುವ ಕಂಪ್ಯೂಟರ್ ವಿಭಾಗವನ್ನು ಸದುಪಯೋಗ ಪಡಿಸಿಕೊಂಡು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು. ಅದೇ ರೀತಿ ಕ್ರೀಡಾ ಚಟುವಟಿಕೆಗಳಲ್ಲೂ ಮುಂದೆ ಬರಬೇಕು. ಕಾಲೇಜು ಸುತ್ತಲೂ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.