ADVERTISEMENT

ತೋಟದ ಕಚೇರಿ ಮುಂದೆ ಕಾರ್ಮಿಕರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಬಿ.ಬಿ.ಟಿ.ಸಿ ಕಂಪನಿ ಕೆಲಸಗಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:50 IST
Last Updated 14 ಫೆಬ್ರುವರಿ 2021, 3:50 IST
ಸಿದ್ದಾಪುರದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶನಿವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಸಿದ್ದಾಪುರದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶನಿವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಸಿದ್ದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ಖಾಸಗಿ ಸಂಸ್ಥೆಯ ತೋಟದ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಮೀಪದ ಬಿ.ಬಿ.ಟಿ.ಸಿ ಕಂಪನಿಗಳ ಕಾಫಿ ತೋಟಗಳ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿರುವ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಡಾ.ಐ.ಆರ್. ದುರ್ಗಾಪ್ರಸಾದ್, ‘ಬಿ.ಬಿ.ಟಿ.ಸಿ ಕಂಪನಿಗೆ ಸೇರಿದ 8 ಕಾಫಿ ತೋಟಗಳಲ್ಲಿ 400ಕ್ಕೂ ಅಧಿಕ ಕಾರ್ಮಿಕರಿದ್ದು ಇವರು ವಾಸ ಮಾಡಿಕೊಂಡಿರುವ ಲೈನ್ ಮನೆಗಳು ಕುಸಿಯುತ್ತಿದ್ದರೂ ಕೂಡ ಸಂಸ್ಥೆಯು ದುರಸ್ತಿಪಡಿಸದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ADVERTISEMENT

‘ಅಲ್ಲದೇ ಕಾರ್ಮಿಕರಿಗೆ ಬೋನಸ್ ಹಣ ಸಮರ್ಪಕವಾಗಿ ನೀಡುತ್ತಿಲ್ಲ. ಕಾಡಾನೆ ಹಾವಳಿಗಳು ಹೆಚ್ಚಾಗಿದ್ದು, ವನ್ಯ ಪ್ರಾಣಿಗಳ ದಾಳಿಯ ನಡುವೆಯೂ ಕೂಡಾ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಸೂಕ್ತ ರಕ್ಷಣೆಯನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಕಾರ್ಮಿಕರ ಇತರ ಸಮಸ್ಯೆಗಳಿಗೂ ಕೂಡಾ ಸಂಸ್ಥೆಯು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಅಸಡ್ಡೆ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕರ ಬೇಡಿಕೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಪ್ರಮುಖರಾದ ಮಹಾದೇವ್ ಮತ್ತು ಎಚ್.ಪಿ ರಮೇಶ್ ಹಾಗೂ ಬಿಬಿಟಿಸಿ ಕಂಪನಿಗೆ ಸೇರಿದ 8 ಕಾಫಿ ತೋಟಗಳ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.