ADVERTISEMENT

ಹೂಳು ತುಂಬಿದ ‘ಗೌರಿ ಕೆರೆ’

ನಿರ್ವಹಣೆಯ ನಿರ್ಲಕ್ಷ್ಯ, ಉಳಿದ ಸಣ್ಣ ಕೆರೆಗಳೂ ಮಾಯವಾಗುವ ಆತಂಕ

ಜೆ.ಸೋಮಣ್ಣ
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಗೌರಿ ಕೆರೆ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಗೌರಿ ಕೆರೆ   

ಗೋಣಿಕೊಪ್ಪಲು: ಹಳ್ಳ ಗುಡ್ಡ ಮತ್ತು ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗಿನಲ್ಲಿ ಸಾರ್ವಜನಿಕ ಕೆರೆಗಳು ಬಹಳ ಅಪರೂಪ. ಇದ್ದರೂ ಅವು ಬೆರಳೆಣಿಕೆಯಷ್ಟು ಮಾತ್ರ.

ಕಣ್ಣು ಹಾಯಿಸಿದ ಕಡೆಯೆಲ್ಲೆಲ್ಲಾ ತೊರೆ ತೋಡುಗಳೇ ಕಂಡು ಬರುತ್ತಿರುವುದರಿಂದ ಕೊಡಗಿನ ಜನತೆ ಕೃಷಿ ಮತ್ತು ಕುಡಿಯುವ ನೀರು ಮತ್ತಿತರ ದಿನ ಬಳಕೆಗೆ ಕೆರೆಗಳನ್ನು ಅವಂಬಿಸಿರುವುದು ಬಹಳ ಅಪರೂಪ. ಇಂತಹ ಪರಿಸರದಲ್ಲಿ ಕೆಲವು ಗ್ರಾಮಗಳಲ್ಲಿ ಒಂದೆರಡು ಸಣ್ಣ ಪುಟ್ಟ ಕೆರೆಗಳು ಮಾತ್ರ ಕಂಡು ಬರುತ್ತಿವೆ. ಅವು ಕೂಡ ನಿರ್ವಹಣೆಯ ನಿರ್ಲಕ್ಷ್ಯದಿಂದ ಹೂಳು ತುಂಬಿ, ಜೊಂಡು ಬೆಳೆದು ಮುಚ್ಚಿ ಹೋಗುವ ಸ್ಥಿತಿಗೆ ತಲುಪಿವೆ. ಇಂಥ ಅವನತಿಗೆ ತಲುಪಿರುವ ಕೆರೆಗಳಲ್ಲಿ ಪೊನ್ನಂಪೇಟೆ ಗೌರಿ ಕೆರೆಯೂ ಒಂದು.

ಈ ಕೆರೆ ಪೊನ್ನಂಪೇಟೆ ಹೃದಯ ಭಾಗವಾದ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಅಂತರದಲ್ಲಿದೆ. ಪಟ್ಟಣದ ಹೆಗ್ಗುರುತಾದ ಬಸವೇಶ್ವರ ದೇವಾಲಯದಲ್ಲಿ ಶಿವ ಪಾರ್ವತಿ ಮತ್ತು ಗಣಪತಿ ವಿಗ್ರಹಗಳಿವೆ. ನೂರಾರು ವರ್ಷಗಳಿಂದ ಗಣೇಶೋತ್ಸವದಲ್ಲಿ ಗೌರಿ ಗಣಪತಿ ಕೂರಿಸಿ, ಬಳಿಕ ಅವುಗಳ ವಿಸರ್ಜನೆಗೆ ಈ ಕೆರೆಯನ್ನೇ ಬಳಸಲಾಗುತ್ತಿದೆ. ಹೀಗಾಗಿ, ಇದಕ್ಕೆ ಗೌರಿ ಕೆರೆ ಎಂದು ಹೆಸರು ಬಂದಿದೆ ಎನ್ನುತ್ತಾರೆ ಪಟ್ಟಣದ ಹಿರಿಯರಾದ ಎಸ್.ಎಲ್.ಶಿವಣ್ಣ.

ADVERTISEMENT

ಹಿರಿಯರು ಹೇಳುವಂತೆ ಈ ಕೆರೆ ಮೊದಲು ಸಣ್ಣ ಹಳ್ಳವಾಗಿತ್ತು. ಗೌರಿ ಗಣಪತಿ ವಿಸರ್ಜನೆ ಮಾಡಲು ತೊಡಗಿದ ಮೇಲೆ ಅದನ್ನು ವಿಸ್ತಾರಗೊಳಿಸಲಾಯಿತು. ಕೆರೆ ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿದೆ. ಕೆರೆಯ ಕೆಳಗಿನ ಗದ್ದೆಗಳು ದೇವಸ್ಥಾನಕ್ಕೆ ಸೇರಿವೆ. ಇಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುವ ಕೊಡಗಿನ ಪ್ರಮುಖ ಹಬ್ಬ ಹುತ್ತರಿಗೆ ಈ ಗದ್ದೆಯಿಂದಲೇ ಸಾರ್ವಜನಿಕರು ವಾಲಗ ಸಮೇತ ತೆರಳಿ ಭಕ್ತಿ ಭಾವದಿಂದ ಭತ್ತದ ಕದಿರು ತಂದು ದೇವಸ್ಥಾನಕ್ಕೆ ಅರ್ಪಿಸುತ್ತಾರೆ.

ಕೆರೆಯ ನೀರನ್ನು ಸಂರಕ್ಷಿಸಲು ಸುತ್ತ ಏರಿ ನಿರ್ಮಿಸಲಾಗಿದೆ. ಹೆಚ್ಚಾದ ನೀರು ಹೊರ ಹೋಗಲು ಮೋರಿ ಅಳವಡಿಸಲಾಗಿದೆ. ಹಳ್ಳದಲ್ಲಿ ಕೆರೆ ಇರುವುದರಿಂದ ಯಾವತ್ತೂ ನೀರು ಕಡಿಮೆಯಾಗುವುದಿಲ್ಲ. ಮಳೆ ಮತ್ತು ಜಲದ ನೀರು ಕೆರೆಯನ್ನು ಸದಾ ಜೀವಂತವಾಗಿರಿಸಿದೆ. ಇದರಿಂದ ಪೊನ್ನಂಪೇಟೆ ಪಟ್ಟಣದ ಜನತೆಗೆ ಕೊಳವೆ ಬಾವಿ ಮತ್ತು ತೆರೆದ ಬಾವಿಗಳಲ್ಲಿ ಅಂತರ್ ಜಲ ಸಮಸ್ಯೆ ಕಾಡುತ್ತಿಲ್ಲ.

ಕೆರೆಯ ಅಂಗಳದಲ್ಲಿ ತಾವರೆ ಆವರಿಸಿಕೊಂಡಿದ್ದು, ಹೂವು ಅರಳಿ ಕಂಗೊಳಿಸುತ್ತಿದೆ. ಮತ್ತೊಂದು ಕಡೆ ಜೊಂಡು ಹುಲ್ಲು ಬೆಳೆದುಕೊಂಡಿದ್ದರೆ, ದಡದ ಸುತ್ತ ಗಿಡಿಗಂಟಿಗಳು ಬೆಳೆದು ಹತ್ತಿರ ಹೋಗದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.