
ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ 2,344 ದರಖಾಸ್ ಪೋಡಿ ಅಭಿಯಾನಡಿ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 1,500ಕ್ಕೂ ಹೆಚ್ಚು ಕಡತ ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಜಿಲ್ಲಾಡಳಿತ, ಕಂದಾಯ ಇಲಾಖೆ, ಕುಶಾಲನಗರ ತಾಲ್ಲೂಕು ವತಿಯಿಂದ ಇಲ್ಲಿನ ಮಾದಾಪಟ್ಟಣದಲ್ಲಿ ₹ 8.60 ಕೋಟಿ ವೆಚ್ಚದ ತಾಲ್ಲೂಕು ಆಡಳಿತ ಭವನ ‘ಪ್ರಜಾಸೌಧ’ ಕಟ್ಟಡಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ 42 ಲಕ್ಷ ಜಮೀನು ಮೃತರ ಹೆಸರಿನಲ್ಲಿದ್ದು, ಇದನ್ನು ಸಹ ಪಟ್ಟಿ ಮಾಡಲಾಗಿದೆ. ಈ ಪೌತಿ ಖಾತೆ ಆಂದೋಲನಡಿ ರೈತರ ಮನೆ ಬಾಗಿಲಿಗೆ ಹೋಗಿ ಕುಟುಂಬದವರ ಹೆಸರಿಗೆ ಖಾತೆ ಮಾಡುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಭೂ ಸುರಕ್ಷತೆ ಯೋಜನೆಯಡಿ ಭೂಮಿಗೆ ಸಂಬಂಧಪಟ್ಟಂತೆ 50 ಕೋಟಿ ಪುಟಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ. ಇನ್ನೂ 50 ಕೋಟಿ ಪುಟ ಸ್ಕ್ಯಾನಿಂಗ್ ಮಾಡಲು ಬಾಕಿ ಇದೆ. ಎಲ್ಲಾ ದಾಖಲೆಗಳು ಆನ್‍ಲೈನ್ ಮೂಲಕ ಮೊಬೈಲ್‍ನಲ್ಲಿಯೇ ದೊರೆಯಲಿದೆ ಎಂದರು.
ರಾಜ್ಯದಲ್ಲಿರುವ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೆ ಲ್ಯಾಪ್‍ಟಾಪ್ ವಿತರಿಸುವ ಕಾರ್ಯ ನಡೆದಿದ್ದು, ಕಾಗದ ರಹಿತವಾಗಿ ಇ-ಕಚೇರಿ ಮೂಲಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಲಾಗಿದೆ ಎಂದು ಹೇಳಿದರು.
ಇಲಾಖೆಯಲ್ಲಿ ಸಾರ್ವಜನಿಕರನ್ನು ಸತಾಯಿಸಬಾರದು. ಉತ್ತರಾಧಾಯಿತ್ವ ಹೊಂದಿರಬೇಕು. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯನ್ನು ಅಪ್‍ಡೇಟ್ ಮಾಡಲಾಗುತ್ತಿದೆ ಎಂದರು.
ತಹಶೀಲ್ದಾರರ ನ್ಯಾಯಾಲಯದಲ್ಲಿ ಇದ್ದ 10,774 ಪ್ರಕರಣಗಳಲ್ಲಿ 510 ಪ್ರಕರಣಗಳು ಮಾತ್ರ ಬಾಕಿ ಇದೆ, ಉಪ ವಿಭಾಗಾಧಿಕಾರಿ ಕೋರ್ಟ್‍ನಲ್ಲಿ ನ್ಯಾಯಾಲಯದಲ್ಲಿ 6 ತಿಂಗಳಿಂದ ಕಡತಗಳನ್ನು ವಿಲೇವಾರಿ ಮಾಡಬೇಕಿದ್ದು, ಹಿಂದ 59,335 ಅರ್ಜಿಗಳು ವಿಲೇವಾರಿಗೆ ಬಾಕಿ ಇತ್ತು. ಈಗ 12,249 ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಇದೆ, ಕಳೆದ 5 ವರ್ಷದಲ್ಲಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ 32,787 ಪ್ರಕರಣಗಳು ಇದ್ದವು, ಈಗ 3,974 ಅರ್ಜಿಗಳು ಮಾತ್ರ ಬಾಕಿ ಇದೆ. ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕಿದೆ ಎಂದು ಸಚಿವರು ಹೇಳಿದರು.
ಭೂಕುಸಿತ ತಡೆಯುವ ಸಂಬಂಧ ಕಾಮಕಾರಿ ಕೈಗೊಳ್ಳಲು ₹ 50 ಕೋಟಿ ಬಿಡುಗಡೆಯಾಗಿದ್ದು, ಇನ್ನೂ ₹ 10 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಭೂದಾಖಲೆಗಳ ಉಪ ನಿರ್ದೇಶಕರಾದ ನಿರಂಜನ ಭಾಗವಹಿಸಿದ್ದರು.
ಕಳೆದ 2 ದಶಕಗಳ ಹೋರಾಟದ ಪ್ರಯತ್ನದ ಫಲವಾಗಿ ಕುಶಾಲನಗರ ತಾಲ್ಲೂಕು ಕೇಂದ್ರವಾಗಿದ್ದು ಪ್ರಜಾ ಸೌಧ ನಿರ್ಮಾಣವಾಗುತ್ತಿದೆವಿ.ಪಿ.ಶಶಿಧರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ
ಕುಶಾಲನಗರದಲ್ಲಿ ಉಪ ವಿಭಾಗ ಕಚೇರಿ ತೆರೆಯಬೇಕು. ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಆಗಬೇಕು. ಉಪ ನೋಂದಾಣಾಧಿಕಾರಿ ಕಚೇರಿ ಆರಂಭಿಸಬೇಕುನಾಗೇಂದ್ರ ಬಾಬು ವಕೀಲರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.