ಸೋಮವಾರಪೇಟೆ: ಕಾನೂನಾತ್ಮಕವಾಗಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಯನ್ನು ವಜಾಗೊಳಿಸದೆ, ಎಲ್ಲರಿಗೂ ದಾಖಲಾತಿ ನೀಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಕಂದಾಯ ಇಲಾಖೆಯ ವತಿಯಿಂದ ಶಾಸಕರ ಕಚೇರಿ ಆವರಣದಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಬುಧವಾರ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ತಿರಸ್ಕೃತಗೊಂಡಿರುವ ಹಕ್ಕುಪತ್ರ ಅರ್ಜಿಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಹಕ್ಕುಪತ್ರಗಳನ್ನು ಪಡೆಯುವ ಅವಕಾಶ ಬರಬಹುದು. ಹಕ್ಕುಪತ್ರ ಪಡೆದುಕೊಂಡವರು ಜಾಗವನ್ನು ಯಾವುದೇ ಕಾರಣಕ್ಕೂ ಮಾರಾಟ ಹಾಗೂ ವಿಲೇವಾರಿ ಮಾಡದೆ ಕಾಪಾಡಿಕೊಳ್ಳಬೇಕು ಎಂದರು.
ಈ ಹಿಂದೆ ಕಂದಾಯ ಇಲಾಖಾಧಿಕಾರಿಗಳು ಮಾಡಿದ ತಪ್ಪುಗಳಿಂದ ಈಗ ಬಡವರು ಹಕ್ಕಪತ್ರಗಳಿಂದ ವಂಚಿತರಾಗಬೇಕಾಗಿದೆ. ಅರ್ಜಿ ನೀಡಿದ ಗ್ರಾಮಗಳಿಗೆ ಕಂದಾಯ ಅಧಿಕಾರಿಗಳು ವಾಹನಗಳಲ್ಲಿ ತೆರಳುವ ಅವಕಾಶ ಇದೆ. ಕಂದಾಯ ಇಲಾಖೆಗೆ ಸೇರಬೇಕಾದ ಜಾಗವನ್ನು ಇನ್ನಾದರೂ ಕಾಪಾಡಿಕೊಳ್ಳಬೇಕು. ಬಡವರಿಗೆ ಹಕ್ಕುಪತ್ರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಕ್ಕುಪತ್ರ ನೀಡಬೇಕು ಎಂದು ಹೇಳಿದರು.
ಕಂದಾಯ ಇಲಾಖೆಗೆ ಸಲ್ಲಿಕೆಯಾಗಿರುವ, ಸದ್ಯದ ನಿಯಮದಂತೆ ಹಕ್ಕುಪತ್ರಗಳನ್ನು ನೀಡಲು ಸಾಧ್ಯವಾಗದ ಯಾವುದೇ ಅರ್ಜಿಗಳನ್ನು ತಹಶೀಲ್ದಾರ್ ವಜಾ ಮಾಡಬಾರದು. ಮಾಡಿದಲ್ಲಿ ಮತ್ತೆ ಸಂಬಂಧಿಸಿದ ಸ್ಥಳಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಪೂರಕವಾದ ನಿಯಮಗಳನ್ನು ಸರ್ಕಾರ ತಂದಾಗ ಕಾನೂನಿನ ಚೌಕಟ್ಟಿನಲ್ಲಿ ಉಳಿಕೆ ಅರ್ಜಿಗಳನ್ನು ವಿಲೇವಾರಿ ಮಾಡಬಹುದು. ತಾಲ್ಲೂಕಿನ ವಡಯನಪುರ ಸೇರಿ ಅನೇಕ ಗ್ರಾಮಗಳಲ್ಲಿರುವ ಜಾಗದ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮುಂದುವರಿದಿದೆ. ಬಡವರಿಗೆ ಹಕ್ಕುಪತ್ರ ಕೊಡಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಸೋಮವಾರ ಸಂತೆ ದಿನ ತಾಲ್ಲೂಕು ಕಚೇರಿಯಲ್ಲಿ ಎಲ್ಲ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿರುವ ವ್ಯವಸ್ಥೆಯಾಗಬೇಕು. ಈ ಬಗ್ಗೆ ತಹಶೀಲ್ದಾರ್ ಅವರು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, 2014 ಮತ್ತು 2022ರಲ್ಲಿ ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮ ಸಮಿತಿಗೆ ಸಲ್ಲಿಕೆಯಾಗಿರುವ 10 ಸಾವಿರ ಅರ್ಜಿಗಳಲ್ಲಿ, ಈಗಾಗಲೇ 4,200 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಕಾನೂನಾತ್ಮಕವಾಗಿ ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಶಾಸಕರ ಸಲಹೆಯಂತೆ ಪ್ರತಿ ಹಂತದಲ್ಲೂ ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಅರ್ಜಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ. ಸತೀಶ್, ಜನಾರ್ಧನ್, ಚಂದ್ರಿಕಾ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.