ADVERTISEMENT

ಮಡಿಕೇರಿಯಲ್ಲಿ ಭೀತಿ ಹುಟ್ಟಿಸಿದ ಚಿರತೆ ಹೋಲುವ ಪ್ರಾಣಿ

ಬೆಳ್ಳಂಬೆಳಿಗ್ಗೆಯೇ ಮಡಿಕೇರಿಯ ನೆಹರೂ ಮಂಟಪದ ಬಳಿ ಆತಂಕದ ವಾತಾವರಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 12:23 IST
Last Updated 22 ನವೆಂಬರ್ 2019, 12:23 IST
ಮಡಿಕೇರಿಯ ನೆಹರೂ ಮಂಟಪದಲ್ಲಿ ಚಿರತೆ ಹೋಲುವ ಪ್ರಾಣಿಯ ಹುಡುಕಾಟದಲ್ಲಿ ನಿರತ ಅರಣ್ಯ ಸಿಬ್ಬಂದಿಗಳು
ಮಡಿಕೇರಿಯ ನೆಹರೂ ಮಂಟಪದಲ್ಲಿ ಚಿರತೆ ಹೋಲುವ ಪ್ರಾಣಿಯ ಹುಡುಕಾಟದಲ್ಲಿ ನಿರತ ಅರಣ್ಯ ಸಿಬ್ಬಂದಿಗಳು   

ಮಡಿಕೇರಿ: ಮಂಜಿನ ನಗರಿಯ ಪ್ರವಾಸಿ ತಾಣವಾದ ನೆಹರೂ ಮಂಟಪದ ಬಳಿ ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಆತಂಕದ ವಾತಾವರಣ. ಚಿರತೆ ಹೋಲುವ ನಾಲ್ಕು ಪ್ರಾಣಿಗಳು ಪ್ರತ್ಯಕ್ಷವಾಗಿದ್ದರಿಂದ ಸ್ಥಳೀಯರು ಹಾಗೂ ಮಂಟಪದ ಬಳಿಯಿದ್ದ ಕಾವಲುಗಾರರು ಆತಂಕಕ್ಕೆ ಒಳಗಾಗಿದ್ದರು.

ಬೆಳಿಗ್ಗೆ 6.45 ಸುಮಾರಿಗೆ ಚಿರತೆಯಂತಿದ್ದ ದೊಡ್ಡ ಪ್ರಾಣಿ ಸೇರಿದಂತೆ ಮೂರು ಮರಿಗಳು ನೆಹರೂ ಮಂಟಪದ ಮೆಟ್ಟಿಲು ಬಳಿಯಲ್ಲಿ ಸುಳಿದಾಡಿ ಆತಂಕ ತಂದೊಡ್ಡಿದವು.

ಈ ಪ್ರಾಣಿಗಳ ಓಡಾಡುತ್ತಿದ್ದ ದೃಶ್ಯವನ್ನು ಭಯದ ನಡುವೆಯೂ ಮಂಟಪದ ಕಾವಲುಗಾರ ಗಣೇಶ್‌ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಆದರೆ, ಮೊಬೈಲ್‌ನಲ್ಲಿ ಸೆರೆಯಾಗಿರುವ ದೃಶ್ಯ ಅಸ್ಪಷ್ಟವಾಗಿದೆ.

ADVERTISEMENT

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಆದರೆ, ಎಲ್ಲಿಯೂ ಚಿರತೆ ಹೆಜ್ಜೆ ಗುರುತು ಕಂಡುಬಂದಿಲ್ಲ. ಮಧ್ಯಾಹ್ನದ ತನಕವೂ ಹುಡುಕಾಟ ನಡೆಸಿದ ಸಿಬ್ಬಂದಿ, ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪ್ರಾಣಿಗಳನ್ನು ಹೆದರಿಸುವ ಕೆಲಸ ಮಾಡಿದರು.

ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾತನಾಡಿ, ‘ಚಿರತೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಈವರೆಗೂ ಕೊಡಗು ಜಿಲ್ಲೆಯ ಕಾಫಿ ತೋಟ, ಕಾಡು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಮಡಿಕೇರಿ ನಗರಕ್ಕೂ ಪ್ರವೇಶಿಸಿದವೇ ಎಂಬ ಭಯ ಕಾಡಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.