ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿ ಪ್ರಮಾಣ ಇಳಿಕೆಯಾಗದ ಕಾರಣ, ಜುಲೈ 5ರ ತನಕ ಲಾಕ್‌ಡೌನ್ ಮುಂದುವರಿಸಲಾಗಿದೆ.ಹಾಲಿ ಜಾರಿಯಲ್ಲಿ ಇರುವ ಲಾಕ್‌ಡೌನ್ ನಿಯಮಾವಳಿ ಜುಲೈ 5ರ ಬೆಳಿಗ್ಗೆ 6 ಗಂಟೆ ತನಕ ಯಥಾವತ್ ಜಾರಿಯಲ್ಲಿ ಇರಲಿವೆ.
ತರಕಾರಿ, ಹಣ್ಣು- ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆ, ಹಾಪ್‌ಕಾಮ್ಸ್ ಮಳಿಗೆಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 1ರ ತನಕ ಮಾತ್ರ ತೆರೆಯಲು ಅವಕಾಶವಿದೆ.
ಕೃಷಿ ಪರಿಕರವಾದ ರಸಗೊಬ್ಬರವನ್ನು ರೈತರು ಈಗಾಗಲೇ ನಿಗದಿಪಡಿಸಿರುವ ದಿನಗಳಲ್ಲಿ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ನಿಗದಿಪಡಿಸಿದ ಸಮಯದಲ್ಲಿ (ಬೆಳಿಗ್ಗೆ 6ರಿಂದ ಮಧ್ಯಾಹ್ನ 1) ರಸೀದಿ ಪಡೆದು ಖರೀದಿಸಲು ಹಾಗೂ ಖರೀದಿಸಿದ ಸ್ಥಳದಿಂದ ರೈತರ ಕೃಷಿ ಚಟುವಟಿಕೆಯ ಸ್ಥಳಕ್ಕೆ ಅದೇ ದಿನದಂದು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ಸಾಗಾಣಿಕೆ ಸಮಯದಲ್ಲಿ ಅಧಿಕೃತ ರಶೀದಿಯನ್ನು ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರಿಗೆ ಮಳೆಗಾಲಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರೇನ್‌ಕೋಟ್, ಛತ್ರಿ, ತಾಡಪಾಲ್, ಬಟ್ಟೆ, ಚಪ್ಪಲಿ, ಗಮ್ ಬೂಟು ಮುಂತಾದ ವಸ್ತುಗಳ ಅವಶ್ಯಕತೆ ಇರುವುದರಿಂದ ಇಂತಹ ವಸ್ತುಗಳ ಮಾರಾಟ ಮಳಿಗೆಯನ್ನು ತೆರೆಯಲು ಸೋಮವಾರ, ಬುಧವಾರ ಮತ್ತು ಶುಕ್ರವಾರ ಅವಕಾಶ ಕಲ್ಪಿಸಿದೆ. ಪಡಿತರ ನ್ಯಾಯಬೆಲೆ ಮಳಿಗೆಗಳು ತೆರೆಯಲು ಅನುಮತಿ ನೀಡಲಾಗಿದೆ.
ಸ್ಟಾಂಡ್ ಅಲೋನ್ ಹಾಲಿನ ಬೂತ್‌ಗಳು, ದಿನಪತ್ರಿಕೆಗಳ ಸೆಗ್ರಿಗೇಷನ್ ಮತ್ತು ವಿತರಣೆಗೆ ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಆಸ್ಪತ್ರೆ, ಔಷಧಾಲಯ, ವೈದ್ಯಕೀಯ ಸೇವೆಗಳು, ಪೆಟ್ರೋಲ್ ಬಂಕ್, ಎಲ್.ಪಿ.ಜಿ ಕೇಂದ್ರಗಳ 24X7 ಕಾರ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ.ಹೋಟೆಲ್, ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಟೇಕ್ ಅವೆ (ಪಾರ್ಸಲ್) ರೂಪದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೆಯಲು ಅನುಮತಿ ನೀಡಲಾಗಿದೆ.
ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್‌ಪೋಸ್ಟ್‌ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೇ ಅನಗತ್ಯ ಸಂಚರಿಸುವುದು, ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.