ADVERTISEMENT

ಮಡಿಕೇರಿ: ನಶೆಯಲ್ಲಿ ತೇಲಿದ ಮದ್ಯ ಪ್ರಿಯರು

ವೈನ್ಸ್ ಶಾಪ್‌ಗಳ ಎದುರು ಕ್ಯೂ, ಸಂಜೆ 4ರ ತನಕ ನಡೆದ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 4 ಮೇ 2020, 12:17 IST
Last Updated 4 ಮೇ 2020, 12:17 IST
ಮದ್ಯ ಖರೀದಿಗೆ ಮಡಿಕೇರಿಯಲ್ಲಿ ಸಾಲು
ಮದ್ಯ ಖರೀದಿಗೆ ಮಡಿಕೇರಿಯಲ್ಲಿ ಸಾಲು   

ಮಡಿಕೇರಿ: ಸರ್ಕಾರವು ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ತನಕ 95 ವೈನ್ಸ್‌ಶಾಪ್‌ಗಳು ಮದ್ಯದ ವಹಿವಾಟು ನಡೆಸಿವು.

ಮಡಿಕೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಬಾಗಿಲು ತೆರೆಯುವ ಮೊದಲೇ ಮದ್ಯ ಪ್ರಿಯರು ಸರದಿಯಲ್ಲಿ ನಿಂತಿದ್ದರು. ಬಾಗಿಲು ತೆರೆಯುತ್ತಿದ್ದಂತೆಯೇ ಸಂತಸದಿಂದ ಮದ್ಯ ಖರೀದಿಸಿದರು. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 12ರ ತನಕ ಮದ್ಯ ಪ್ರಿಯರಿಗೆ ಬೇಕಾದ ಬ್ರ್ಯಾಂಡ್ ದೊರೆಯಿತು. 12ರ ಬಳಿಕ ಕೆಲವು ಕಡೆ ತಾವು ಕುಡಿಯುತ್ತಿದ್ದ ಮದ್ಯ ಸಿಗಲಿಲ್ಲ. ಅದರ ಬದಲಿಗೆ ಬೇರೊಂದು ಮದ್ಯ ಖರೀದಿಸಿದ ದೃಶ್ಯವೂ ಕಂಡುಬಂತು.

ಮಡಿಕೇರಿಯ ಡ್ರಪ್ಸ್‌ ಲಿಕ್ಕರ್‌ ವರ್ಲ್ಡ್‌, ಕದಂಬ ಹಾಗೂ ಕೊಹಿನೂರು ರಸ್ತೆಯ ಎಂಎಸ್‌ಐಎಲ್‌ ಎದುರು ಸಂಜೆಯ ತನಕವೂ ಸರದಿ ಕಂಡುಬಂತು. ಮದ್ಯ ಪ್ರಿಯರ ಮನೆಯಲ್ಲೂ ಹಬ್ಬದ ವಾತಾವರಣ ಕಂಡುಬಂತು. ಇನ್ನೂ ಮದ್ಯಕ್ಕೆ ಬೇಕಾದ ಸೈಡ್ಸ್‌ ಕೂಡ ತಯಾರಾಗಿತ್ತು.

ADVERTISEMENT

ಬಾಕ್ಸ್‌ಗಟ್ಟೆಲೇ ಹೊತ್ತೊಯ್ದರು

ಮದ್ಯ ಖರೀದಿಗೆ ಕೊಡಗಿನಲ್ಲಿ ಮಿತಿ ಇರಲಿಲ್ಲ. ಎಷ್ಟು ಬೇಕಾದರೂ ಮದ್ಯ ಖರೀದಿಗೆ ಅವಕಾಶ ನೀಡಲಾಗಿತ್ತು. ಕೆಲವರು ಬಾಕ್ಸ್‌ ಲೆಕ್ಕದಲ್ಲಿ ಮದ್ಯ ಕೊಂಡೊಯ್ದರು.

ಮದ್ಯ ಖರೀದಿಯಲ್ಲೂ ಶಿಸ್ತು

ಮದ್ಯ ಖರೀದಿಯಲ್ಲೂ ಮದ್ಯ ಪ್ರಿಯರು ಶಿಸ್ತು ಪಾಲಿಸಿದರು. ಅಂತರ ಕಾಯ್ದುಕೊಂಡೇ ಖರೀದಿಸಿದ ದೃಶ್ಯ ಕಂಡುಬಂತು. ಪ್ರತಿ ವೈನ್ಸ್‌ ಶಾಪ್‌ಗಳ ಎದುರು ಮಾರ್ಕ್‌ ಮಾಡಲಾಗಿತ್ತು. ಮದ್ಯ ಅಂಗಡಿಗೆ ಗುಂಪಾಗಿ ಪ್ರವೇಶ ನೀಡಲಿಲ್ಲ. ಸಾಲಿನಲ್ಲಿ ಬಂದಗರಿಗೆ ಮಾತ್ರ ಮದ್ಯ ವಿತರಣೆ ಮಾಡಲಾಯಿತು. ಮಿತಿಯೂ ಇರಲಿಲ್ಲ. ಎಷ್ಟು ಬೇಕಾದರೂ ಮದ್ಯ ಖರೀದಿ ಮಾಡಬಹುದಿತ್ತು. ಪ್ರತಿ ವೈನ್ಸ್‌ ಶಾಪ್‌ ಎದುರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ನಾಲ್ಕು ದಿನ ಮಾತ್ರ ಅವಕಾಶ: ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಮಾತ್ರ ಮದ್ಯ ಖರೀದಿಗೆ ಅವಕಾಶವಿದೆ. ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮದ್ಯ ಖರೀದಿಗೆ ಅವಕಾಶವಿದೆ. ಅವಕಾಶವಿದ್ದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ತನಕ ಖರೀದಿ ಮಾಡಬಹುದು.

ಮದ್ಯದ ಅಮಲು‌: ಮಹಿಳೆ ರಂಪಾಟ

ಮಡಿಕೇರಿ: ಸೋಮವಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೇ ತಡ ಜನರು ಲಿಕ್ಕರ್ ಶಾಪ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಅದರಲ್ಲೂ ಕೊಡಗಿನಲ್ಲಿ ಯುವತಿಯೊಬ್ಬಳ ಎಣ್ಣೆ ಕುಡಿದು ಅದರ ಕಿಕ್‌ಗೆ ರಸ್ತೆಯಲ್ಲಿ ರಂಪಾಟ ನಡೆಸಿದ್ದಾಳೆ. ಸೋಮವಾರಪೇಟೆ ತಾಲ್ಲೂಕಿನಮಹಿಳೆ, ಎಣ್ಣೆ ಹೊಡೆದು ವಾಹನಕ್ಕೂ ಕಲ್ಲು ಎಸೆಯಲು ಪ್ರಯತ್ನಿಸಿದ್ದಾಳೆ.

ಸಿಕ್ಕ ಸಿಕ್ಕವರ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಲು ಪ್ರಯತ್ನಿಸಿದರು. ಜನರು ಕಲ್ಲೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಜೊತೆಯಲ್ಲಿದ್ದ ಪಕ್ಕದ ಮನೆಯವರು ಯುವತಿ ರಂಪಾಟವನ್ನು ನಿಲ್ಲಿಸಲು ಹರಸಾಹಸ ಪಟ್ಟರೂ ಸಾಧ್ಯವೇ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.