ADVERTISEMENT

ಬುಡಕ್ಕೇ ನೀರು,ಗೊಬ್ಬರ:‘ಸಬ್‌ ಸಾಯಿಲ್‌ ಇಂಜೆಕ್ಟರ್‌’, ಕಾಫಿ ಗಿಡಗಳ ರಕ್ಷಣೆ ತಂತ್ರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 9:02 IST
Last Updated 18 ಡಿಸೆಂಬರ್ 2018, 9:02 IST
ಕಾಫಿ ಗಿಡಕ್ಕೆ ನೇರವಾಗಿ ನೀರು ಹಾಗೂ ಗೊಬ್ಬರ ಪೂರೈಕೆ ಮಾಡುತ್ತಿರುವ ದೃಶ್ಯ
ಕಾಫಿ ಗಿಡಕ್ಕೆ ನೇರವಾಗಿ ನೀರು ಹಾಗೂ ಗೊಬ್ಬರ ಪೂರೈಕೆ ಮಾಡುತ್ತಿರುವ ದೃಶ್ಯ   

ಮಡಿಕೇರಿ: ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಇಳುವರಿ ಹೆಚ್ಚಳ ಹಾಗೂ ಗಿಡಗಳ ಪೋಷಣೆಗೆ ಬೆಳೆಗಾರರು ಹಲವು ‘ತಂತ್ರ’ ಅನುಸರಿಸುತ್ತಿದ್ದಾರೆ. ಅದರಲ್ಲೂ ಸಣ್ಣ ಗಿಡಗಳು ಬೇಸಿಗೆಯಲ್ಲಿ ನೀರನ್ನು ಹೆಚ್ಚಾಗಿ ಬೇಡುತ್ತವೆ. ನೀರಾವರಿ ಸೌಲಭ್ಯ ಇದ್ದವರು ಸ್ಪಿಕ್ಲರ್‌ ಮಾಡುತ್ತಾರೆ; ಇಲ್ಲದವರು ಪರ್ಯಾಯ ಮಾರ್ಗಗಳ ಮೂಲಕ ಗಿಡಗಳ ರಕ್ಷಣೆಗೆ ಮುಂದಾಗುತ್ತಾರೆ.

ಚೆಟ್ಟಳ್ಳಿಯ ಸೋಮಯಂಡ ದಿಲೀಪ್ ಅಪ್ಪಚ್ಚು ಅವರು ತಮ್ಮ ಕಾಫಿ ತೋಟಗಳಲ್ಲಿ ಸುಮಾರು 30 ವರ್ಷಗಳಿಂದ ಕಾಫಿ ಗಿಡಗಳ ಅಭಿವೃದ್ಧಿಗೆ ‘ಸಬ್‌ ಸಾಯಿಲ್ ಇಂಜೆಕ್ಟರ್’ ಬಳಕೆ ತಂತ್ರಜ್ಞಾನದ ಮೂಲಕ ಸಾಧಕ ರೈತರಾಗಿದ್ದಾರೆ. ಅವರ ತೋಟದಲ್ಲಿ ಅರೇಬಿಕಾ, ರೋಬಸ್ಟಾ ಕಫಿ, ಏಲಕ್ಕಿ, ಕಾಳು ಮೆಣಸು ಬೆಳೆ ಇದೆ. ಸಬ್‌ ಸಾಯಿಲ್‌ ಇಂಜೆಕ್ಟರ್‌ ಮೂಲಕ ಕಾಫಿ ಗಿಡಗಳ ಪೋಷಣೆ ಮಾಡುತ್ತಿದ್ದಾರೆ.

ತಮಿಳುನಾಡಿನ ಎಸ್ಟೇಟ್‌ನಲ್ಲಿ ಈ ವಿಧಾನವನ್ನು ದಿಲೀಪ್‌ ಅಪ್ಪಚ್ಚು ವೀಕ್ಷಿಸಿದ್ದರು. ಅದರ ಪೂರ್ಣ ಮಾಹಿತಿ ಪಡೆದ ದಿಲೀಪ್ ಅಪ್ಪಚ್ಚು ಕೊಯಮತ್ತೂರಿನಲ್ಲಿ ಎರಡು ಸಬ್‌ಸಾಯಿಲ್ ಇಂಜೆಕ್ಟರ್ ಯಂತ್ರ ಖರೀದಿಸಿದ್ದರು.

ADVERTISEMENT

ಹೇಗೆ ಬಳಕೆ, ಏನು ಪ್ರಯೋಜನ: ಬೆನ್ನಿನ ಹಿಂಬದಿಗೆ ಸಿಕ್ಕಿಸುವ 20 ಲೀಟರ್‌ ಡಬ್ಬ ಇರುತ್ತದೆ. ಜತೆಗೆ, ಲೋಹದ ಸಿರಿಂಜ್‌ನಂತೆ ಇರುವ ಉಪಕರಣ. ಮಿಶ್ರಣವನ್ನು ಡಬ್ಬಕ್ಕೆ ತುಂಬಿಸಿ ಕಾಫಿ ಗಿಡಗಳ ಬುಡಗಳಿಗೆ ಇಟ್ಟು ಕಾಲಿನಿಂದ ಒತ್ತಿದ್ದಾಗ ನೀರು ಹಾಗೂ ಗೊಬ್ಬರದ ಮಿಶ್ರಣವು ನೇರವಾಗಿ ಗಿಡದ ಬೇರಿಗೆ ತಲುಪುವ ವ್ಯವಸ್ಥೆ ಇದು.

ಸುಮಾರು ಒಂದು ವರ್ಷ ಕಳೆದ ಕಾಫಿ ಗಿಡಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಅವಶ್ಯಕತೆ ಹೆಚ್ಚು. ಬಿಸಿಲಿನ ತಾಪಕ್ಕೆ ಹಲವು ಗಿಡಗಳು ಒಣಗಿ ಸಾಯುವ ಪರಿಸ್ಥಿತಿಗೆ ತಲುಪುತ್ತವೆ. ನೀರು ಹಾಗೂ ಗೊಬ್ಬರ ಇಂಜೆಕ್ಟ್‌ ಮಾಡುವುದರಿಂದ ಗಿಡಗಳು ನಳನಳುಸುತ್ತವೆ ಎನ್ನುತ್ತಾರೆ ದಿಲೀಪ್‌.

ನವೆಂಬರ್‌ನಲ್ಲಿ ಒಂದು ವರ್ಷ ಕಳೆದ ಕಾಫಿ ಗಿಡಗಳಿಗೆ ಈ ಯಂತ್ರದ ಮೂಲಕ ಗಿಡಗಳ ಬುಡದ ಒಂದು ಬದಿಗೆ ನೀರನ್ನು ಇಂಜೆಕ್ಟ್ ಮಾಡಬೇಕು. 21 ದಿನ ಕಳೆದ ನಾಲ್ಕು ಬದಿಗಳಿಗೂ ಈ ಯಂತ್ರದ ಮೂಲಕ ನೀರು ಇಂಜೆಕ್ಟ್ ಮಾಡಬೇಕು. 2ನೇ ಸುತ್ತಿನಲ್ಲಿ 15 ದಿನಗಳಿಗೊಮ್ಮೆ ಯೂರಿಯಾ ಮಿಶ್ರಿತ ನೀರನ್ನು ಮಳೆ ಬರುವ ತನಕ ಕಾಫಿ ಗಿಡಕ್ಕೆ ಹಾಕಬೇಕು. ವರ್ಷಕ್ಕೆ ಸುಮಾರು 12 ಬಾರಿ ಇಂಜೆಕ್ಟ್ ಮಾಡುವುದರಿಂದ ಗಿಡಕ್ಕೆ ಅನುಕೂಲ ಎಂದೂ ಹೇಳುತ್ತಾರೆ.

ನೀರು ಆವಿಯಾಗುವ ಸಾಧ್ಯತೆಕಡಿಮೆ. ನೀರಾವರಿಗೆ ವ್ಯಯಿಸುವ ಖರ್ಚು ಉಳಿತಾಯ. ಬೇರಿನ ತನಕ ನೀರು ತಲುಪಿ ಗಿಡಗಳಿಗೆ ನೀರಿನ ಸಂಪೂರ್ಣ ಬಳಕೆಯಾಗಲಿದೆ. ಒಬ್ಬ ಕಾರ್ಮಿಕ ಪ್ರತಿನಿತ್ಯ 275ರಿಂದ 300 ಗಿಡಗಳಿಗೆ ನೀರು ಇಂಜೆಕ್ಟ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.