ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ರಾತ್ರಿ ನಟ ಪುಷ್ಪರಾಜ್ ಬೊಳ್ಳಾರ್ ಅವರು ಸಿನಿಮಾ ತುಣುಕೊಂದನ್ನು ಪ್ರಸ್ತುತಪಡಿಸಿದರು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ: ಇಲ್ಲಿನ ಗಾಂಧಿ ಮೈದಾನಕ್ಕೆ ‘ಬಾವ’ ಬರುವ ಹೊತ್ತಿಗೆ ಮಂಗಳವಾರ 10.30 ದಾಟಿತ್ತು. ಸಂಜೆಯಿಂದಲೂ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕ ವೃಂದ ಕಡೆಗೂ ನಿಟ್ಟುಸಿರು ಬಿಟ್ಟರು. ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಲಿದರು.
‘ಸು ಫ್ರ ಸೊ’ ಸಿನಿಮಾ ಖ್ಯಾತಿಯ ನಟ ಪುಷ್ಪರಾಜ್ ಬೊಳ್ಳಾರ್ ಅವರು ವೇದಿಕೆಗೆ ಬರುತ್ತಿದ್ದಂತೆ ಪ್ರೇಕ್ಷಕರ ಕಣ್ಣುಗಳು ವೇದಿಕಯತ್ತ ನೆಟ್ಟವು. ಅವರು ದಸರಾ ಸಮಿತಿಯ ಕೆಲ ಸದಸ್ಯರೊಂದಿಗೆ ಸಿನಿಮಾದ ರೂಪಕವೊಂದನ್ನು ಪ್ರಸ್ತುತಪಡಿಸಿ, ನಗೆಯಬುಗ್ಗೆಯನ್ನು ಉಕ್ಕಿಸಿದರು.
ನಂತರ ಮಾತನಾಡಿದ ಅವರು, ‘ಸಿನಿಮಾ ಯಶಸ್ಸಿಗೆ ಜನರ ಪ್ರೋತ್ಸಾಹ ಕಾರಣ’ ಎಂದು ಹೇಳಿದರು. ಜೊತೆಗೆ ಕನ್ನಡ ಭಾಷೆಯ ಚಿತ್ರವನ್ನು ನಾವು ಪ್ರೀತಿಸಬೇಕು. ಕನ್ನಡವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು’ ಎಂದರು.
‘ಬಾವ ಬಂದರು’ ಹಾಡಿಗೆ ಪ್ರೇಕ್ಷಕ ವೃಂದವೂ ಹೆಜ್ಜೆ ಹಾಕಿತು.
ಇದಕ್ಕೂ ಮುನ್ನ ಮೈಸೂರಿನ ಸುಮಾ ರಾಜ್‌ಕುಮಾರ್ ಅವರು ಜಾದೂ ಪ್ರದರ್ಶಿಸಿ ಮಕ್ಕಳ ಮನಗೆದ್ದರು.
ವಾಹನ ಚಾಲನೆಯಲ್ಲಿ ದಾಖಲೆ ನಿರ್ಮಿಸಿದ, ಹಿಟಾಚಿ ಸೇರಿದಂತೆ ವಿವಿಧ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುವ 11 ವರ್ಷದ ಕಾವೇರಿ ಮನೆ ಚಂದನ್ ಅವರನ್ನು ಸನ್ಮಾನಿಸಲಾಯಿತು.
ಮೂರ್ನಾಡು ಜ್ಞಾನಜ್ಯೋತಿ ತಂಡ, ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೊ, ಮಕ್ಕಂದೂರಿನ ಗೌಡ ಮಕ್ಕಳ ತಂಡ, ಚೆಟ್ಟಿಮಾನಿಯ ಸಾನಿಕಾ ಮತ್ತು ಸ್ನೇಹಿತರು, ವನಚಾಮುಂಡಿ ಸೇವಾ ಸಮಿತಿ ಜ್ಯೋತಿನಗರ ಸೇರಿದಂತೆ ಹಲವು ಕಲಾತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.