ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಪ್ರಸಿದ್ಧಿಯಾದ ದಸರಾ ಉತ್ಸವಕ್ಕೆ ಕರಗೋತ್ಸವದ ಮೂಲಕ ಸೋಮವಾರ ರಾತ್ರಿ ಚಾಲನೆ ದೊರಕಿತು.
ನಗರದ ಶಕ್ತಿದೇವತೆಗಳೆನಿಸಿದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳನ್ನು ಹೊತ್ತ ಕರಗಧಾರಿಗಳು ನಗರದ ರಾಜಬೀದಿಯಲ್ಲಿ ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತ ಸಮೂಹ ಕೈಮುಗಿಯಿತು.
ಮೈಗೆಲ್ಲ ಅರಿಸಿನ ಮೆತ್ತಿಕೊಂಡಿದ್ದ ನಾಲ್ವರು ಕರಗಧಾರಿಗಳ ನರ್ತನಕ್ಕೆ, ಮಂಗಳವಾದ್ಯಗಳ ನಿನಾದಕ್ಕೆ ಸೇರಿದ್ದ ಭಕ್ತ ವೃಂದ ತಲೆದೂಗಿತು. ಎಲ್ಲ ಕರಗಗಳಿಗೂ ಮನೆಮನೆಯವರು ಪೂಜೆ ಸಲ್ಲಿಸಿದರು. ಕೆಲವೆಡೆ ಪುಷ್ಪವೃಷ್ಟಿ ನಡೆಯಿತು.
ಸೆ. 23ರಿಂದ ಅ.2ರವರೆಗೂ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 2ರಂದು ರಾತ್ರಿಯಿಂದ ಮರುದಿನ ಬೆಳಿಗ್ಗೆಯವರೆಗೂ ದಸರಾ ದಶಮಂಟಪಗಳ ಶೋಭಾಯಾತ್ರೆ ಜರುಗಲಿದೆ.
ಮತ್ತೊಂದೆಡೆ, ದಕ್ಷಿಣ ಕೊಡಗಿನ ವಾಣಿಜ್ಯ ಪಟ್ಟಣ ಎನಿಸಿದ ಗೋಣಿಕೊಪ್ಪಲಿನ ಸ್ವಾತಂತ್ರ್ಯಹೋರಾಟಗಾರ ಭವನದಲ್ಲಿ ಸೋಮವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪಿಸಿ ದಸರಾ ಜನೋತ್ಸವ ಆರಂಭಗೊಂಡಿತು. ಇಲ್ಲಿಯೂ ನವರಾತ್ರಿಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.