ADVERTISEMENT

ಮಡಿಕೇರಿ ದಸರೆಯಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ: ಸಚಿವ ಭೋಸರಾಜು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:12 IST
Last Updated 16 ಸೆಪ್ಟೆಂಬರ್ 2025, 4:12 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಎರಡೂ ನಗರಗಳ ದಸರಾ ಸಮಿತಿಯೊಂದಿಗಿನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿದರು 
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಎರಡೂ ನಗರಗಳ ದಸರಾ ಸಮಿತಿಯೊಂದಿಗಿನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿದರು    

ಮಡಿಕೇರಿ: ‘ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ, ಜವಾಬ್ದಾರಿಯುತವಾಗಿ ದಸರಾ ಕಾರ್ಯಕ್ರಮಗಳು ಹಾಗೂ ಶೋಭಾಯಾತ್ರೆಯನ್ನು ಮಾಡಿ. ಉತ್ಸವದ ವೇಳೆ ರಾಜ್ಯದ ವಿವಿಧೆಡೆ ನಡೆದಿರುವ ಘಟನೆಗಳು ಇಲ್ಲಿ ನಡೆಯದಂತೆ ಕಟ್ಟೆಚ್ಚರ ವಹಿಸಿ’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಸಮಿತಿಯ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಎರಡೂ ನಗರಗಳ ದಸರಾ ಸಮಿತಿಯೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

ಡಿ.ಜೆ.ವಿರುದ್ಧ ಈಗಾಗಲೇ ಒಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ಗಮನದಲ್ಲಿರಲಿ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿರಿ ಎಂದರು.

ADVERTISEMENT

ಸರ್ಕಾರ ಮಡಿಕೇರಿ ದಸರೆಗೆ ₹1.5 ಕೋಟಿ ಹಾಗೂ ಗೋಣಿಕೊಪ್ಪಲು ದಸರೆಗೆ ₹ 75 ಲಕ್ಷ ನೀಡಲು ನಿರ್ಧರಿಸಿದೆ. ಕೊಡಗಿನ ಇತಿಹಾಸ ಉಳಿಸುವ ಹಾಗೆ ಕಾರ್ಯಕ್ರಮಗಳನ್ನು ರೂಪಿಸಿರಿ ಎಂದು ಹೇಳಿದರು.

ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ‘ತುಂಬಾ ಕಟ್ಟುನಿಟ್ಟಿನ ನಿಯಮಗಳನ್ನು ಹೇರಬೇಡಿ’ ಎಂದು ಮನವಿ ಮಾಡಿದರು.

ಮಡಿಕೇರಿ ದಸರಾ ಸಮಿತಿ ಸದಸ್ಯ ಮುದ್ದುರಾಜ್  ‘ರಸ್ತೆ ಗುಂಡಿ ಮುಚ್ಚಿಲ್ಲ’ ಎಂಬ ವಿಷಯ ಪ್ರಸ್ತಾಪಿಸಿದರು. ಮಂಟಪಗಳಿಗೆ ತಲಾ ₹ 5 ಹಾಗೂ ಕರಗಗಳಿಗೆ ತಲಾ ₹ 3 ಲಕ್ಷ ಅನುದಾನ ನೀಡಬೇಕು’ ಎಂದರು.

ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ದಸರಾ ಕಾರ್ಯಕ್ರಮಗಳ ವೇಳಾಪಟ್ಟಿ ಮಂಡಿಸಿದರು.

ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ಮಾತನಾಡಿ, ‘ಜನರು ಓಡಾಡಲು ಸಾಧ್ಯವಾಗದಷ್ಟು ರಸ್ತೆಗಳು ಹಾಳಾಗಿವೆ. ಕೂಡಲೇ ಸರಿಪಡಿಸಿ. ದಶಮಂಟಪಗಳ ಶೋಭಾಯಾತ್ರೆ ಮುಗಿದ ಬಳಿಕ ಡಿ.ಜೆ ನಿಲ್ಲಿಸಬೇಡಿ’ ಎಂದು ಕೋರಿದರು.

ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ‘ಕಲಾವಿದರ ಆಯ್ಕೆ ನಡೆದಿದೆ. ಸ್ಥಳೀಯ ಮತ್ತು ಹೊರಗಿನ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮಹಿಳಾ, ಮಕ್ಕಳ, ಜನಪದ, ಕಾಫಿ ಹೀಗೆ ವೈವಿಧ್ಯಮಯ ದಸರೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಗೋಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ‘47ನೇ ವರ್ಷದ ದಸರೆಯನ್ನು ಗೋಣಿಕೊಪ್ಪಲಿನಲ್ಲಿ ನಡೆಸಲಾಗುತ್ತಿದೆ. 11 ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ‘ಇನ್ನು7 ದಿನ ಮಾತ್ರ ಇದೆ. ದೀಪಾಲಂಕಾರವನ್ನು ತ್ವರಿತವಾಗಿ ಮಾಡಿಸಿ’ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ದಸರೆಯಲ್ಲಿ ಹಣಕಾಸಿನ ಶಿಸ್ತನ್ನು ನಿರ್ವಹಿಸಿ, ಕೊಟ್ಟಿರುವ ಅನುದಾನದ ಒಳಗೆ ಕೆಲಸ ಮಾಡಿ. ಜಿಎಸ್‌ಟಿ ಇರುವ ಬಿಲ್‌ಗಳನ್ನು ಆದಷ್ಟು ಬೇಗ ಕೊಡಿ’ ಎಂದು ಸೂಚಿಸಿದರು.

‘ಡಿ.ಜೆ., ಹೊಗೆ, ಪಟಾಕಿ, ಲೇಸರ್ ಲೈಟ್‌ ಕುರಿತು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಈಗ ಇರುವ ಸ್ವಾತಂತ್ರ್ಯ ಮುಂದೆಯೂ ಇರಬೇಕು ಎಂದರೆ ಎಚ್ಚರಿಕೆಯಿಂದ ಕೆಲಸ ಮಾಡಿ. ಏನಾದರೂ ಹೆಚ್ಚು, ಕಡಿಮೆಯಾದರೆ ಅನುದಾನವೇ ನಿಂತು, ವಿಪರೀತ ನಿಯಮಗಳು ಹೇರಿಕೆಯಾಗುತ್ತವೆ ಎನ್ನುವುದನ್ನು ಮರೆಯದಿರಿ. ಎಲ್ಲರಿಗೂ ಖುಷಿಯಾಗುವಂತೆ ಹಬ್ಬ ಮಾಡಬೇಕೇ ವಿನಹಾ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗದಂತೆ ಹಬ್ಬ ಮಾಡಬಾರದು. ಮಂಟಪದ ಸುತ್ತ ಕನಿಷ್ಠ 5ರಿಂದ 10 ಮೀಟರ್ ಅಂತರದಲ್ಲಿ ಸಾರ್ವಜನಿಕರು ಬಾರದಂತೆ ನಿಗಾ ಇರಿಸಲು ಸ್ವಯಂಸೇವಕರನ್ನು ನೇಮಿಸಿಕೊಳ್ಳಿ’ ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮದ ಉತ್ತಪ್ಪ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರು
ಪಾರದರ್ಶಕವಾಗಿ ವೆಚ್ಚ ಮಾಡಿ. ಬಂದಿರುವ ಹಣದಲ್ಲಿ ಶಿಸ್ತುಬದ್ಧವಾಗಿ ಕಾರ್ಯಕ್ರಮ ಮಾಡಿ. ಗೋಣಿಕೊಪ್ಪಲು ದಸರೆಗೆ ನಾನು ಸಹ ಸಹಾಯ ಮಾಡುವೆ
ಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿಯ ಕಾನೂನು ಸಲಹೆಗಾರ

ಆದಷ್ಟು ಬೇಗ ರಸ್ತೆ ಗುಂಡಿ ಮುಚ್ಚಿ:ಡಾ.ಮಂತರ್‌ಗೌಡ

ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ವಾತಾವರಣ ನೋಡಿಕೊಂಡು ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಬೇಗ ಆರಂಭಿಸಿ’ ಎಂದು ಮಡಿಕೇರಿ ನಗರಸಭೆ ಪೌರಾಯುಕ್ತ ಎಚ್.ಆರ್.ರಮೇಶ್ ಅವರಿಗೆ ಸೂಚಿಸಿದರು. ಕಾರ್ಯಕ್ರಮಗಳನ್ನು ಬೇಗ ಆರಂಭಿಸಿ ಬೇಗನೇ ಮುಗಿಸಿ. ಕಳೆದ ಬಾರಿ ಒಬ್ಬೊಬ್ಬ ಅತಿಥಿಗಳಿಗೆ ಹತ್ತತ್ತು ಸ್ಮರಣಿಕೆ ಸಿಕ್ಕಿದೆ. ಈ ಬಾರಿ ಹಾಗಾಗದಂತೆ ನೋಡಿಕೊಂಡು ಒಬ್ಬ ಅತಿಥಿಗೆ ಒಂದೇ ಸ್ಮರಣಿಕೆ ನೀಡಿ. ಆದಷ್ಟು ಹಣ ಉಳಿಸುವ ಕಡೆಗೆ ಗಮನ ಕೊಡಿ. ವೇದಿಕೆಯಲ್ಲಿ ಭಾಷಣ ಸ್ವಾಗತ ವಂದಾರ್ಪಣೆಗೆ ಸಮಯ ಪೋಲು ಮಾಡದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಮಯ ಕೊಡಿ ಎಂದು ಸಲಹೆಗಳನ್ನು ನೀಡಿದರು. ಶೋಭಾಯಾತ್ರೆಯಂದು ಭಾರಿ ವಾಹನಗಳನ್ನು ಕುಶಾಲನಗರದಿಂದ ಬೈಪಾಸ್‌ ರಸ್ತೆಯಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿ. ಪ್ರತಿ ಮಂಟಪದ ಜೊತೆಗೂ 3ರಿಂದ 4 ಮಂದಿ ಸ್ಥಳೀಯ ಲೈನ್‌ಮೆನ್‌ಗಳನ್ನು ನಿಯೋಜಿಸಿ ಅಪರಿಚಿತರನ್ನು ಮಂಟಪಗಳ ಸಮಿತಿಗೆ ಸೇರ್ಪಡೆ ಮಾಡದೇ ತೀರಾ ವಿಶ್ವಾಸ ಹೊಂದಿದವರನ್ನು ಮಾತ್ರ ಸಮಿತಿಗೆ ಸೇರಿಸಿಕೊಳ್ಳಿ ಎಂದು ಹೇಳಿದರು.

ಹೆಚ್ಚುವರಿ ಅನುದಾನಕ್ಕೆ ಒಕ್ಕೊರಲ ಮನವಿ

‘ಈಗ ಸರ್ಕಾರ ನೀಡಿರುವ ಹಣ ಏನೇನೂ ಸಾಲದಾಗಿದೆ. ಹೆಚ್ಚುವರಿ ಹಣ ನೀಡಬೇಕು’ ಎಂದು ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಸಮಿತಿಯ ಸರ್ವ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಗೋಣಿಕೊಪ‍್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್‌ಕುಮಾರ್ ಹೀಗೆ ಮಾತನಾಡಿದ ಎಲ್ಲ ಸದಸ್ಯರೂ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಿದರು.

ಡಿ.ಜೆಗಳಿಂದ ಈ ವರ್ಷವೂ ಸಾವಾಗಿದೆ; ಎಸ್.ಪಿ ಎಚ್ಚರಿಕೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ‘ಡಿ.ಜೆ ಯಿಂದ ಈ ವರ್ಷವೂ ರಾಜ್ಯದ ಹಲವೆಡೆ ಸಾವುಗಳು ಉಂಟಾಗಿವೆ. ಈ ಬಾರಿಯೂ ಹೈಕೋರ್ಟ್‌ನಲ್ಲಿ ಡಿ.ಜೆ ವಿರುದ್ಧ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ಮರೆಯದಿರಿ. ನ್ಯಾಯಾಲಯದಿಂದ ಆದೇಶ ಬಂದರೆ ಪ್ರಕರಣ ದಾಖಲಾಗುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದರು. ಡಿ.ಜೆಯಲ್ಲಿ ಸ್ಪರ್ಧೆ ಮಾಡುವುದು ಬೇಡ. ಕಿವುಡಾಗುವುದು ಗಾಜುಗಳು ಒಡೆದು ಹೋಗುವುದು ಹೃದಯಾಘಾತ ಸಂಭವಿಸುವಷ್ಟು ಶಬ್ದಕ್ಕೆ ಅವಕಾಶವೇ ಇಲ್ಲ. ಮಂಟಪದ ಬಹುಮಾನ ಘೋಷಣೆ ವೇಳೆ ಗಲಾಟೆ ಮಾಡಿಕೊಳ್ಳುವುದೂ ಸರಿಯಲ್ಲ ಎಂದು ಹೇಳಿದರು.

ಗಾಂಧಿ ಮೈದಾನದ ಸುತ್ತೆಲ್ಲ ಧ್ವನಿವರ್ಧಕ ಹಾಕಿದರೆ ಸುತ್ತಮುತ್ತಲ ಮನೆಯವರು ಮಲಗುವುದು ಬೇಡವೇ ಎಂದೂ ಖಾರವಾಗಿ ಪ್ರಶ್ನಿಸಿದರು. ‘ಯಾರಿಗೂ ಏನೂ ಆಗಬಾರದು ಎಂಬುದೇ ನಮ್ಮ ಉದ್ದೇಶ. ಸುರಕ್ಷತೆಗೆ ಮೊದಲ ಆದ್ಯತೆ ಎಂಬುದರಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಅನಾಹುತ ಆದ ಮೇಲೆ ನಿಮಗೆ ಇಷ್ಟು ಸ್ವಾತಂತ್ರ್ಯ ಇರುವುದಿಲ್ಲ. ಸ್ವಾತಂತ್ರ್ಯ ಇರುವಾಗಲೇ ಜವಾಬ್ದಾರಿಯಿಂದ ದಸರೆ ಮಾಡಿ. ಪ್ರತಿ ವರ್ಷ ಜನ ಜಾಸ್ತಿಯಾಗುತ್ತಿದ್ದಾರೆ. ಹೋಗುವುದಕ್ಕೆ ಜಾಗ ಇಲ್ಲದ ಸ್ಥಿತಿಯಲ್ಲಿ ನಾವು ಲಾಠಿ ಬೀಸಲೂ ಸಾಧ್ಯವಿಲ್ಲ. ಹಾಗಾಗಿ ದೊಡ್ಡದೊಡ್ಡ ಮಂಟಪಗಳ ರಚನೆ ಬೇಡ’ ಎಂದು ಹೇಳಿದರು. ಮಂಟಪಗಳನ್ನು ವೈಜ್ಞಾನಿಕವಾಗಿ ವಿನ್ಯಾಸ ಮಾಡುವುದಿಲ್ಲ. ಕಾಲ್ತುಳಿತಕ್ಕೆ ಅವಕಾಶ ಹೆಚ್ಚಿದೆ. ಜಾಗ ಜಾಸ್ತಿ ಇರುವ ಕಡೆ ಮಾತ್ರ ಪ್ರದರ್ಶನ ಕೊಡಿ. ಈ ನಿಟ್ಟಿನಲ್ಲಿ ಸಹಕಾರ ಕೊಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.