ಮಡಿಕೇರಿ: ‘ಮಡಿಕೇರಿ ದಸರಾ ಕ್ರೀಡಾಕೂಟವು ಸೆ. 22ರಿಂದ 30ರವರೆಗೆ ನಗರದಲ್ಲಿ ನಡೆಯಲಿದೆ. 22ರಂದು ಬೆಳಿಗ್ಗೆ 6 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್‌ವರೆಗೆ ಪುರುಷ ಮತ್ತು ಮಹಿಳೆಯರು ಮ್ಯಾರಥಾನ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ಕ್ರೀಡಾಕೂಟ ಆರಂಭವಾಗಲಿದೆ. ನಂತರ, ನಿತ್ಯವೂ 30ರವರೆಗೆ ವೈವಿಧ್ಯಮಯವಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ’ ಎಂದು ಮಡಿಕೇರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರಾ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. 23ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್‌ಬಾಲ್, ಸಾರ್ವಜನಿಕರಿಗೆ ಫುಟ್‌ಬಾಲ್ (5+2) ನಡೆಯಲಿದೆ. 24ರಂದು ಬನ್ನಿಮಂಟಪದಿಂದ ಕ್ರೀಡಾ ಜ್ಯೋತಿಯನ್ನು ಮೆರವಣಿಗೆ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಗುವುದು. ನಂತರ, ಕ್ರೀಡಾಕೂಟ ನಡೆಯಲಿದೆ ಎಂದರು.
1ನೇ ತರಗತಿಯಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಹಾಗೂ ಸಾರ್ವಜನಿಕರಿಗೆ 100 ಮೀಟರ್ ಓಟದ ಸ್ಪರ್ಧೆ, ಸಾರ್ವಜನಿಕರಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ 400 ಮೀಟರ್ ಓಟದ ಸ್ಪರ್ಧೆ, ಪುರುಷ, ಮಹಿಳೆಯರಿಗೆ ರಿಲೇ, ಸಾರ್ವಜನಿಕರಿಗೆ ಭಾರದ ಗುಂಡು ಎಸೆತ, 1ನೇ ವರ್ಷದಿಂದ ಹಿಡಿದು 6ನೇ ವರ್ಷದವರೆಗೆ ಬಾಲಕ, ಬಾಲಕಿಯರಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಬಾಸ್ಕೆಟ್ ಇನ್ ದ ಬಾಲ್ ಸೇರಿದಂತೆ ಹಲವು ಕ್ರೀಡೆಗಳಿವೆ ಎಂದು ಹೇಳಿದರು.
ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಹಿಳೆಯರಿಗಾಗಿ ಥ್ರೋಬಾಲ್, ಪುರುಷರಿಗಾಗಿ ನಿಧಾನ ದ್ವಿಚಕ್ರ ವಾಹನ ಚಾಲನೆ, ಮಹಿಳೆಯರಿಗಾಗಿ ನಿಂಬೆ–ಚಮಚ ಓಟ, ವಿಷದ ಚೆಂಟು ಆಟಗಳಿವೆ. ಅಂಗವಿಕಲರಿಗೆ ಓಟದ ಸ್ಪರ್ಧೆಗಳಿವೆ ಎಂದರು.
25ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾ ಸಮಿತಿ, ಮಡಿಕೇರಿ ದಸರಾ ಸಮಿತಿ, ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ, ಪೊಲೀಸ್ ಇಲಾಖೆ, ಶಿಕ್ಷಕರು, ವಕೀಲರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾ ಪಂಚಾಯಿತಿ, ಕಾರಾಗೃಹ ಸಿಬ್ಬಂದಿ, ಅಗ್ನಿಶಾಮಕ ದಳ, ಸಾರ್ವಜನಿಕರಿಗೆ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಜೊತೆಗೆ, ಕೂರ್ಗ್ ಎಂಟರ್‌ಪ್ರೈಸಸ್ ಕಟ್ಟಡದಲ್ಲಿ ಸ್ನೂಕರ್ ನಡೆಯಲಿದೆ ಎಂದು ಹೇಳಿದರು.
26ರಂದು ರಾಜದರ್ಶನ್ ಹೋಟೆಲ್‌ನಲ್ಲಿ ಚೆಸ್ ಮತ್ತು ಕೇರಂ ಸ್ಪರ್ಧೆ, 27ರಂದು ಗಾಂಧಿ ಮೈದಾನದಲ್ಲಿ ತಾಲ್ಲೂಕುಮಟ್ಟದ ವಾಲಿಬಾಲ್, 28ರಂದು ಗಾಂಧಿ ಮೈದಾನದಲ್ಲಿ ಕಬಡ್ಡಿ, 29ರಂದು ರಾಜದರ್ಶನ್ ಹೋಟೆಲ್‌ನಲ್ಲಿ ದೇಹದಾರ್ಡ್ಯ ಸ್ಪರ್ಧೆ, 30ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ ಬಾಕ್ಸಿಂಗ್ ನಡೆಯಲಿದೆ. ಮಾಹಿತಿಗೆ ಮೊ: 7338547897, 9148045614, 9731009841 ಸಂಪರ್ಕಿಸಬಹುದು ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕಪಿಲ್‌ಕುಮಾರ್ ದುಗ್ಗಳ, ಉಪಾಧ್ಯಕ್ಷರಾದ ಕೆ.ಆರ್.ದಿನೇಶ್‌ಶೆಟ್ಟಿ, ಉಮೇಶ್, ಸಹಕಾರ್ಯದರ್ಶಿ ಎಂ.ಪಿ.ನಿರಂಜನ್, ಗೌರವ ನಿರ್ದೇಶಕ ಜಿ.ಸಿ.ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.