ADVERTISEMENT

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸುದೀರ್ಘ ರಜೆ

ಅಧಿಕಾರಿಗಳಿಂದ ಬೀಳ್ಕೊಡುಗೆ ಸಮಾರಂಭ, ಕೊಡಗಿನಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿದೆ: ಅನೀಸ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:57 IST
Last Updated 13 ಜನವರಿ 2021, 16:57 IST
ರಜೆಯ ಮೇಲೆ ತೆರಳುತ್ತಿರುವ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರಿಗೆ ಬೀಳ್ಕೊಡುಗೆ ನೀಡಲಾಯಿತು
ರಜೆಯ ಮೇಲೆ ತೆರಳುತ್ತಿರುವ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರಿಗೆ ಬೀಳ್ಕೊಡುಗೆ ನೀಡಲಾಯಿತು   

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ವೈಯಕ್ತಿಕ ಕಾರಣಕ್ಕೆ ಸುದೀರ್ಘ ರಜೆಯ ಮೇಲೆ ತೆರಳುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾತ್ರಿ ವಿವಿಧ ಇಲಾಖೆಯ ಅಧಿಕಾರಿಗಳು, ಅವರಿಗೆ ಬೀಳ್ಕೊಡುಗೆ ನೀಡಿದರು. ಗುರುವಾರದಿಂದಲೇ ಅವರು ರಜೆಯ ಮೇಲೆ ತೆರಳುತ್ತಿದ್ದಾರೆ. ಸದ್ಯಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಭನ್ವರ್‌ ಸಿಂಗ್‌ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸುದೀರ್ಘ ರಜೆಯ ಮೇಲೆ ತೆರಳಲು ನಿಖರವಾದ ಕಾರಣ ಖಚಿತವಾಗಿಲ್ಲ. ಆದರೆ, ಅವರು ವಾಷಿಂಗ್ಟನ್‌ಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ಕಳೆದ ಎರಡು ವರ್ಷದಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. 2019ರ ಜನವರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೊಡಗಿಗೆ ಬಂದಿದ್ದರು. ಕೊಡಗಿನಲ್ಲಿ ಸಾಕಷ್ಟು ಸವಾಲಿನಿಂದ ಅವರು ಕೆಲಸ ಮಾಡಿದ್ದರು. 2019ರಲ್ಲೂ ಕೊಡಗು ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಅದಾದ ಮೇಲೆ 2020ರಲ್ಲೂ ಮಹಾಮಳೆ ಸುರಿದು ಭೂಕುಸಿತ ಮತ್ತಿತರ ಅನಾಹುತಗಳು ಸಂಭವಿಸಿದ್ದವು. ಆಗಲೂ ಅಧಿಕಾರಿಗಳ ತಂಡದೊಂದಿಗೆ ಉತ್ತಮವಾಗಿ ಕೆಲಸ ಮಾಡಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅನೀಸ್ ಕಣ್ಮಣಿ ಜಾಯ್‌ ಅವರು, ‘ನಾನು ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಬಳಿಕ ಹಿಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರೇ ಮುಂದುವರಿಯಲಿ ಎಂಬ ಕೂಗು ಜಿಲ್ಲೆಯಲ್ಲಿ ಕೇಳಿಬಂದಿತ್ತು. ಹೀಗಾಗಿ, ಅಂದು ನನಗೆ ಸಾಕಷ್ಟು ಸವಾಲುಗಳು ಎದುರಿಗಿದ್ದವು, ಕ್ರಮೇಣ ಎಲ್ಲವೂ ಸರಿಯಾಯಿತು. ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಲು ಎಲ್ಲ ಇಲಾಖೆಯ ಅಧಿಕಾರಿಗಳೂ ಬೆಂಬಲವಾಗಿ ನಿಂತರು. ಅವರ ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಯಿತು. ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ’ ಎಂದು ಹೇಳಿದರು.

ಈ ಹಿಂದಿನ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರೂ ಸುದೀರ್ಘ ರಜೆಯ ಮೇಲೆ ತೆರಳಿದ್ದರು. ಬಳಿಕ, ಕೇರಳ ಕೇಡರ್‌ಗೆ ವರ್ಗಾವಣೆ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.