ಮಡಿಕೇರಿ: ‘ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರು ಬೆಳೆದ ಕಾಫಿ ಹಾಗು ಏಲಕ್ಕಿ ತೋಟವನ್ನು ನಾಶ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಹಾಗೂ ₹ 30 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ರೈತ ಹೋರಾಟ ಸಮಿತಿ ಮತ್ತು ರೈತ ಸಂಘದ ಕಾರ್ಯಕರ್ತರು ಇಲ್ಲಿನ ಅರಣ್ಯ ಭವನದ ಮುಂಭಾಗ ಶುಕ್ರವಾರ ದಿನವಿಡೀ ಪ್ರತಿಭಟನೆ ನಡೆಸಿದರು.
ರೈತರಿಗೆ ನೋಟಿಸ್ ನೀಡಿ, ಸರಿಯಾದ ದಾಖಲೆ ಕೊಟ್ಟು ನಂತರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅರಣ್ಯ ಇಲಾಖೆಯದ್ದೇ ಜಾಗವಾಗಿದ್ದರೂ, ಅಲ್ಲಿರುವ ತೋಟವನ್ನು ನಾಶ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಘೋಷಣೆಗಳನ್ನು ಕೂಗುತ್ತಾ ಸ್ಥಳದಿಂದ ತೆರಳುವುದಿಲ್ಲ. ತೋಟ ಕಡಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಆಗಲೇ ಬೇಕು ಎಂದು ಪಟ್ಟು ಹಿಡಿದರು.
ಡಿಸಿಎಫ್ ಅಭಿಷೇಕ್ ಮಾತನಾಡಿ, ಆ ಜಾಗವು 2014ರ ಸರ್ವೆಯಲ್ಲಿ ಅರಣ್ಯ ಇಲಾಖೆಗೆ ಸೇರಿದೆ. ಆ ಜಾಗದಲ್ಲಿ ಹೊಸದಾಗಿ ಕಾಫಿ ಗಿಡಗಳನ್ನು ನೆಡಲಾಗಿತ್ತು’ ಎಂದು ಹೇಳಿದರು.
ಇದರಿಂದ ಕೋಪಗೊಂಡ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ, ತೆರವುಗೊಳಿಸಲು ನೋಟಿಸ್ ನೀಡಿಲ್ಲ. ಈ ಜಾಗ ಕಂದಾಯ ಇಲಾಖೆಗೆ ಸೇರಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಮಾತನಾಡಿ, ‘ಈ ಕ್ಷಣವೇ ಪ್ರಕರಣದ ತನಿಖೆಗೆ ಆದೇಶಿಸುವೆ. ತನಿಖೆಗೆ ಒಂದು ವಾರದ ಅವಕಾಶ ಬೇಕಿದೆ. ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಆದರೆ, ಇದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ. ನಾವು ಈ ಹಿಂದೆ ಒಂದು ತಿಂಗಳ ಕಾಲಾವಕಾಶ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಕಿಡಿಕಾರಿದರು.
ನಂತರ, ಮುಕ್ಕೋಡ್ಲು ಗ್ರಾಮದಲ್ಲಿ ಏಲಕ್ಕಿ ಮತ್ತು ಕಾಫಿಗಿಡಗಳಿರುವ ಒತ್ತುವರಿ ತೆರವು ಮಾಡಿರುವ ಕುರಿತು, ಕಾಫಿ, ಏಲಕ್ಕಿ ಗಿಡಗಳನ್ನು ನಾಶಪಡಿಸಿರುವ ಕುರಿತು ತನಿಖೆಗೆ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದರು. ಉಪಸಂರಕ್ಷಣಾಧಿಕಾರಿ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವ ಆದೇಶ ಹೊರಡಿಸಿದ ನಂತರ ಪ್ರತಿಭಟನಾಕಾರರು ಸಂಜೆ ವಾಪಸ್ ತೆರಳಿದರು.
ಮುಖಂಡರಾದ ದಿವಾಕರ್ ಗೌಡ, ಹೊಸೂರು ಗಿರೀಶ, ಭವಿನ್, ದೀಪಕ್, ದಿನೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.