ADVERTISEMENT

ಮಡಿಕೇರಿ| ಗಣರಾಜ್ಯೋತ್ಸವಕ್ಕೆ ಅಧಿಕಾರಿಗಳ ಹಾಜರಿ ಕಡ್ಡಾಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:50 IST
Last Updated 13 ಜನವರಿ 2026, 5:50 IST
ಗಣರಾಜ್ಯೋತ್ಸವ ಆಚರಣೆ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಡಿಕೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು
ಗಣರಾಜ್ಯೋತ್ಸವ ಆಚರಣೆ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಡಿಕೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು   

ಮಡಿಕೇರಿ: ‘ಈ ಬಾರಿ ಗಣರಾಜ್ಯೋತ್ಸವವು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಅಥವಾ ಪೊಲೀಸ್ ಕವಾಯತು ಮೈದಾನದಲ್ಲಿ ಜ.26ರಂದ ನಡೆಯಲಿದ್ದು, ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳೂ ಕಡ್ಡಾಯವಾಗಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಸದಂತೆ ಎಚ್ಚರ ವಹಿಸಬೇಕು. ಶುಚಿತ್ವಕ್ಕೆ ಆದ್ಯತೆ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಸಂಬಂಧದ ಪೂರ್ವಭಾವಿ ಸಭೆಯಲ್ಲಿ ಅವರು ಹಲವು ಸೂಚನೆಗಳನ್ನು ನೀಡಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸಹ ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ವಿವಿಧ ಉಪ ಸಮಿತಿಗಳು ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಶಾಲೆಗಳ ವಿವರ ತಿಳಿಸಬೇಕು. ಜೊತೆಗೆ ತಾಲೀಮನ್ನು ಮಾಡಿಕೊಳ್ಳಬೇಕು. ಶಾಲೆಯಲ್ಲಿಯೇ ಅಗತ್ಯ ತರಬೇತಿ ಪಡೆದು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸ್ತಬ್ಧಚಿತ್ರ ಏರ್ಪಡಿಸಬೇಕು. ಕಾರ್ಯಕ್ರಮ ನಿಮಿತ್ತ ಕಲಾತಂಡಗಳ ಆಹ್ವಾನ, ಮತ್ತಿತರ ಬಗ್ಗೆ ಗಮನಹರಿಸುವಂತೆ ತಿಳಿಸಿದರು.

ತಾಲೀಮಿನ ದಿನ ಹಾಗೂ ಕಾರ್ಯಕ್ರಮದ ದಿನ ಉಪಾಹಾರ ಪೂರೈಕೆ ಮಾಡುವುದು, ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತಿತರ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆಯೇ ವೇದಿಕೆ ನಿರ್ಮಾಣ, ಸೇರಿದಂತೆ ಹಲವು ಕಾರ್ಯಕ್ರಮಗಳ ಸಂಬಂಧ ಗಮನಹರಿಸುವಂತೆ ಅವರು ಸಲಹೆ ನೀಡಿದರು.

ವಿವಿಧ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳ ಸಂಬಂಧ ಜ.14 ರೊಳಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಪ್ರಶಸ್ತಿ ವಿತರಣೆ ಇದ್ದಲ್ಲಿ 16ರೊಳಗೆ ಮಾಹಿತಿ ನೀಡುವಂತಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಸಂಬಂಧಿಸಿದಂತೆ 21ರೊಳಗೆ ಲಿಖಿತವಾಗಿ ಮಾಹಿತಿ ನೀಡುವಂತೆ ಅವರು ಹೇಳಿದರು.

ನಗರದಲ್ಲಿರುವ ಎಲ್ಲಾ ಗಣ್ಯರ ಪ್ರತಿಮೆಗಳಿಗೆ ದೀಪಾಲಂಕಾರ ಮಾಡುವುದು ಸೇರಿದಂತೆ ಹಬ್ಬದ ರೀತಿ ಗಣರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಅವರು ಸಲಹೆ ಮಾಡಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ‘ಮೈದಾನದ ಮಧ್ಯಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಅಚ್ಚುಕಟ್ಟಾಗಿ ನಡೆಸಬೇಕು. ಈ ಸಂಬಂಧ ಅಗತ್ಯ ಸಿದ್ಧತೆಯನ್ನು ಶಾಲೆಯಲ್ಲಿಯೇ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ವೇದಿಕೆಯನ್ನು  ಸೂಕ್ತ ಜಾಗದಲ್ಲಿ ನಿರ್ಮಿಸಬೇಕು’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ, ಪೌರಾಯುಕ್ತ ಎಚ್.ಆರ್.ರಮೇಶ್, ತಹಶೀಲ್ದಾರ್ ಶ್ರೀಧರ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಜಿ.ಕೆ.ನಾಯಕ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಎಂಜಿನಿಯರ್ ಪ್ರಭು, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಮ್ಮಿ ಸ್ವಿಕ್ವೇರಾ, ಭೂದಾಖಲೆಗಳ ಉಪನಿರ್ದೇಶಕ ನಿರಂಜನ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.