ಮಡಿಕೇರಿ: ‘ನಾನು ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಬಹಿರಂಗಪಡಿಸಿರುವೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಲಿ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸವಾಲೆಸೆದರು.
‘₹ 155 ಕೋಟಿ ಮೊತ್ತದಲ್ಲಿ 131 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಆಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗುತ್ತದೆ. ಈ ರಸ್ತೆಗಳನ್ನು ಮಾಡಿರುವುದು ಹಿಂದಿನ ಶಾಸಕರ ಅವಧಿಯಲ್ಲಿ. ಈ ಈಗ ರಸ್ತೆ ಹಾಳಾಗಿರುವುದಕ್ಕೆ ಯಾರು ಕಾರಣ?’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಪ್ರಬಲವಾದ ವಿರೋಧ ಪಕ್ಷ ಬೇಕು. ಅದು ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಬರಬೇಕು. ಆದರೆ, ಒಂದೊಂದು ಗುಂಡಿಯಲ್ಲಿ ಅರ್ಧ ಇಂಚು ನೀರು ನಿಂತಿರುವಾಗ ರಸ್ತೆ ನಿರ್ಮಿಸಿ ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವುದು ತೀರಾ ಹಾಸ್ಯಾಸ್ಪದ’ ಎಂದರು.
ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಗೋಣಿಕೊಪ್ಪದಲ್ಲಿ 30 ರಿಂದ 60 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಹುದಿಕೇರಿಯಲ್ಲಿ ₹ 30 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಲಿದೆ. ವಿ.ಬಾಡಗದಲ್ಲಿ 11 ಎಕರೆ ಜಾಗದಲ್ಲಿ ‘ಕ್ರೀಡಾ ತರಬೇತಿ ಕೇಂದ್ರ’ ಆರಂಭಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ಬಲವರ್ಧನೆಗೆ ₹ 208 ಕೋಟಿ ಬಿಡುಗಡೆಯಾಗಿದೆ, ಗೋಣಿಕೊಪ್ಪಲುವಿನಲ್ಲಿ ಬಸ್ ನಿಲ್ದಾಣ, 14 ಹಾಡಿಗಳಿಗೆ ವಿದ್ಯುತ್‍ಚ್ಛಕ್ತಿ ಹಾಗೂ ಕುಡಿಯುವ ನೀರು ಪೂರೈಸಲಾಗಿದೆ ಎಂದು ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಪ್ರದರ್ಶಿಸಿದರು. ಜೊತೆಗೆ, ಬಿಜೆಪಿಯವರು ತಮ್ಮ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಇದೇ ರೀತಿ ಶ್ವೇತಪತ್ರ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
‘ಕಳೆದ ಎರಡೂವರೆ ವರ್ಷದಲ್ಲಿ 300 ರಿಂದ 400 ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ 2 ಸಾವಿರ ಮಂದಿಗೆ ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದೆ. ನಾನು ಜನರ ಸೇವೆ ಮಾಡುತ್ತಾ ಬದುಕಿರುವವ. ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ’ ಎಂದರು.
‘ಪ್ರತಿಭಟನೆಯಲ್ಲಿ ಘೋಷಣೆ ಕೂಗಿದವರು ಮಾರನೆಯ ದಿನ ನನ್ನ ಮನೆಯ ಬಳಿ ಬರುತ್ತಾರೆ. ರಸ್ತೆ ಗುಂಡಿ ವಿಷಯಕ್ಕೆ ಪ್ರತಿಭಟನೆಗೆಂದು ಕರೆದು ಧರ್ಮದ ವಿಚಾರ ಮಾತನಾಡಿ ಜನರ ಹಾದಿ ತಪ್ಪಿಸುತ್ತಾರೆ. ಇಂತಹ ರಾಜಕೀಯ ಬಿಡಿ, ನನ್ನ ನೇರ ಸವಾಲು ಸ್ವೀಕರಿಸಿ, ಚರ್ಚೆಗೆ ಬನ್ನಿ’ ಎಂದರು.
ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಮುಖಂಡರಾದ ಕೊಲ್ಯದ ಗಿರೀಶ್, ಟಾಟು ಮೊಣ್ಣಪ್ಪ, ತೆನ್ನಿರಾ ಮೈನಾ, ಪಟ್ಟಡ ರಂಜಿ ಪೂಣಚ್ಚ, ಹಂಸ, ಇಸ್ಮಾಯಿಲ್, ಸೂರಜ್ ಭಾಗವಹಿಸಿದ್ದರು.
‘ಸಮೀಕ್ಷೆ ವಿರೋಧಿಸುವವರು ಸಂವಿಧಾನ ವಿರೋಧಿಗಳು’
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿರುವುದು ಜಾತಿ ಗುರುತಿಸಲು ಅಲ್ಲ. ಹಿಂದುಳಿದವರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದಕ್ಕಾಗಿ ಸಮೀಕ್ಷೆ ನಡೆಯುತ್ತಿದೆ. ಸಂವಿಧಾನಬದ್ಧವಾಗಿ ಸುಪ್ರೀಂಕೋರ್ಟ್‌ನ ಆದೇಶದಂತೆಯೇ ಸಮೀಕ್ಷೆ ನಡೆಯುತ್ತಿದೆ. ಹಾಗಾಗಿ ಸಮೀಕ್ಷೆ ವಿರೋಧಿಸುವವರು ಸಂವಿಧಾನದ ವಿರೋಧಿಗಳು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಟೀಕಿಸಿದರು. ನ್ಯಾಯಾಲಯವೂ ಒಪ್ಪಿಗೆ ನೀಡಿದ ಮೇಲೆ ಬೇರೆ ದಾರಿ ಕಾಣದೇ ಬಿಜೆಪಿಯವರು ಸಮೀಕ್ಷೆಯನ್ನೇ ಬಹಿಷ್ಕರಿಸಿ ಎಂದು ಹೇಳುತ್ತಿರುವುದು ನಿಜಕ್ಕೂ ಸಂವಿಧಾನ ವಿರೋಧಿ ಕೆಲಸ. ಇಂತಹ ಕೆಲಸ ಬಿಡಬೇಕು ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.