ಕುಶಾಲನಗರ: ಶಿವರಾತ್ರಿ ಹಬ್ಬವನ್ನು ಬುಧವಾರ ಪಟ್ಟಣ ಸೇರಿದಂತೆ ಸುತ್ತಲಿನ ಜನರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆ, ಅಂಗಳವನ್ನು ಸಿಂಗರಿಸಿ ಹಬ್ಬಕ್ಕಾಗಿ ಸಿದ್ಧಗೊಳಿಸಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ದೇವರಿಗೆ ಅಭಿಷೇಕ, ಹೋಮ, ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಕುಶಾಲನಗರ, ಸುತ್ತಲಿನ ಗ್ರಾಮಗಳ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಉಮಾಮಹೇಶ್ವರ ದೇವಸ್ಥಾನ, ಸಿದ್ದಲಿಂಗಪುರ ಬಳಿಯ ಅರಿಸಿನಗುಪ್ಪೆ ಮಂಜುನಾಥೇಶ್ವರ ದೇವಸ್ಥಾನ, ಹೆಬ್ಬಾಲೆಯ ಕಾಳಿಕಾಂಬೆ ದೇವಾಲಯ ಹಾಗೂ ಕಣಿವೆಯ ರಾಮಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿತು. ನಂಜರಾಯಪಟ್ಟಣದ ನಂಜುಂಡೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು.
ಹುದುಗೂರು ವಿಶೇಷ ಪೂಜೆ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಉಮಾಮಹೇಶ್ವರ ಕ್ಷೇತ್ರದ ಅವರಣದಲ್ಲಿ ಮಹಾ ಶಿವರಾತ್ರಿಯ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ ,ರುದ್ರಾಭಿಷೇಕಗಳು ನಡೆದವು.
ಸಂಜೆ ಸ್ವಾಮಿಯ ವಿಗ್ರಹವನ್ನು ಅಲಂಕೃತ ಭವ್ಯ ಮಂಟಪದಲ್ಲಿ ಇರಿಸಿ, ಗ್ರಾಮದಲ್ಲಿ ಪ್ರದಕ್ಷಿಣೆ ಮಾಡಲಾಯಿತು ಹುದುಗೂರು ಗ್ರಾಮಸ್ಥರು, ಹಾರಂಗಿ, ಮದಲಾಪುರ, ಕೂಡಿಗೆ ಕುಶಾಲನಗರದ ಭಕ್ತರು ಭಾಗವಹಿಸಿದ್ದರು.
ದೇಗುಲ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ, ಉಪಾಧ್ಯಕ್ಷ ಎನ್.ಎಸ್.ಮುತ್ತಪ್ಪ, ಕಾರ್ಯದರ್ಶಿ ಬಿ.ಎಲ್ ಸುರೇಶ್ ಮತ್ತು ಸದಸ್ಯರು ಇದ್ದರು.
ವಿಶೇಷ ಪೂಜೆ : ಕೊಡ್ಲಿಪೇಟೆ ಬಳಿಯ ಕ್ಯಾತೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇಗುಲದಲ್ಲಿ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನವನ್ನು ವಿವಿಧ ಪುಷ್ಪ ಹಾಗೂ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಲ್ಲಿಕಾರ್ಜುನ ಸ್ವಾಮಿ ವಿಗ್ರಹವನ್ನು ಸಿಂಗರಿಸಲಾಗಿತ್ತು. ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.