ADVERTISEMENT

ಕೆದಕಲ್ ನೇಗದಾಳ ಈಶ್ವರ ದೇವಾಲಯದಲ್ಲಿ ಸಂಭ್ರಮದ ಮಹಾಶಿವರಾತ್ರಿ ನಾಳೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:06 IST
Last Updated 14 ಫೆಬ್ರುವರಿ 2026, 7:06 IST
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದ ಏಳನೇ ಮೈಲಿನಲ್ಲಿರುವ ಮಹಾದೇವ ಈಶ್ವರ ಮೂರ್ತಿ
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದ ಏಳನೇ ಮೈಲಿನಲ್ಲಿರುವ ಮಹಾದೇವ ಈಶ್ವರ ಮೂರ್ತಿ   

ಸುಂಟಿಕೊಪ್ಪ: ಸಮೀಪದ ಕೆದಕಲ್ ನೇಗದಾಳ್ ಗ್ರಾಮದ 7ನೇ ಮೈಲಿನಲ್ಲಿರುವ ಮಹಾದೇವ ಈಶ್ವರ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ.

ಈ ಹಿಂದೆ ದೇವಸ್ಥಾನದ ಜೀರ್ಣೋದ್ಧಾರದ ವಿಚಾರವಾಗಿ ತಿಳಿಯಲು 1992 ರಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಅಷ್ಟಮಂಗಲ ಪ್ರಶ್ನೆ ಹಾಕಲಾಗಿತ್ತು.ಧಾರ್ಮಿಕ ವಿಧಿಯಂತೆ ಭದ್ರಕಾಳೇಶ್ವರಿ ದೇವಾಲಯವು ಜೀರ್ಣೋದ್ಧಾರಗೊಂಡು ಶಾಸ್ತ್ರೋಕ್ತವಾಗಿ ನಿರ್ಮಿಸಿ, ಭಕ್ತರಿಗೆ ಪೂಜಾ ಪುನಸ್ಕಾರಗಳಿಗೆ ಅರ್ಪಿತವಾಗಿದೆ.ಆದರೆ ಮಹಾದೇವ ಈಶ್ವರ ದೇವಾಲಯವು ಜೀರ್ಣೋದ್ಧಾರ ಮತ್ತು ‌ಪುನಾರ್ ಪ್ರತಿಷ್ಢೆಯಾಗದೇ ಹಾಗೆಯೇ ಉಳಿದಿದೆ ಎಂಬ ಮಹತ್ತರವಾದ ಅಂಶವು ಬೆಳಕಿಗೆ ಬಂದಿತ್ತು.
ಐತಿಹಾಸಿಕ ಹಿನ್ನೆಲೆ: ಈ ದೇವಾಲಯವು ಕೊಡಗಿನ ಅರಸರ ಅವಧಿಯಲ್ಲಿ ಆರಂಭಗೊಂಡಿದ್ದು,ಆ ಕಾಲದಲ್ಲಿ 14 ಪಾಳೆಗಾರರಿದ್ದು,ಅವರಿಗಾಗಿಯೇ 14 ಮಹಾದೇವ ದೇವಾಲಯ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಭಗವತಿ ಮತ್ತು ಭದ್ರಕಾಳಿ ದೇವಾಲಯಗಳನ್ನು ನಿರ್ಮಿಸಿದ್ದು,ಅದರಲ್ಲಿ ಕೆದಕಲ್ ಗ್ರಾಮದ ಈ ದೇವಾಲಯವೂ ಒಂದಾಗಿರುವುದು ವಿಶೇಷ.
ಈ ದೇವಸ್ಥಾನವು ಕೊಡಗಿನ ಅರಸ ಲಿಂಗರಾಜನಿಂದಲೂ ಆರಾಧಿಸಲ್ಪಟ್ಟು ನಂತರದ ದಿನಗಳಲ್ಲಿ ಅರಸನು ದೇವಸ್ಥಾನವನ್ನು ನಾಡಿನ ಉಪಯೋಗಕ್ಕೆ ಅರ್ಪಿಸಿದ್ದ ಎನ್ನಲಾಗಿದೆ.
ಪುತ್ರ ಸಂತಾನವಿಲ್ಲದ ಕೊಡಗಿನ ಆಳರಸ ಹಾಲೇರಿ ವಂಶದ ಲಿಂಗರಾಜನು ಇದೇ ಕಾಡಿನಲ್ಲಿ ಬೇಟೆಯಾಡಲು ಬಂದಾಗ ದೇವರನ್ನು ಬೇಡಿದರೆ ಇಷ್ಟದ ಸಂತಾನ ಪ್ರಾಪ್ತಿಯಾಗುವುದೆಂದು ತಿಳಿದುಕೊಂಡನು.ಭಕ್ತಿಯಿಂದ ಸಂಸ್ಕಾರನಾಗಿ ಬಂದು ಮೊದಲು ಮಹಾದೇವ ಈಶ್ವರನನ್ನು ಪೂಜಿಸಿ ನಂತರ ಭದ್ರಕಾಳೇಶ್ವರಿಯನ್ನು ಪೂಜಿಸಿ ಭಕ್ತಿಯಿಂದ ಬೇಡಿಕೊಂಡಾಗ ಪುತ್ರ ಸಂತಾನ ಹೊಂದಿ ರಾಜಪೀಳಿಗೆಯನ್ನು ಮುಂದುವರೆಸಿದ್ದು ಇತಿಹಾಸ.
ಅಲ್ಲದೇ, ಮಹಾದೇವನನ್ನು ಪೂಜಿಸಿ ಕೊಂಡಾಡಲು ಮರೆತ ಈ ಗ್ರಾಮದ ಹಲವು ಸಂಸಾರಗಳು ಅನೇಕ ತೊಂದರೆಗಳನ್ನು ಅನುಭವಿಸಿರುವುದು ಗ್ರಾಮಸ್ಥರ ಕಣ್ಣಿಗೆ ಗೋಚರಿಸಿದೆ‌.ಕ್ರಮೇಣ ಈ ಊರು ನಿರ್ನಾಮವಾಗಿ ಕೆಲವೇ ಬೆರಣಿಕೆಯ ಸಂಸಾರ ಮಾತ್ರ ಉಳಿಯಿತ್ತೆಂದು ಹಿರಿಯರು ಹೇಳುತ್ತಾರೆ.
ಆಶ್ಚರ್ಯ ಎಂದರೆ, ದೇವರ ತಾತ್ಕಾಲಿಕ ಪ್ರತಿಷ್ಠಾಪನೆ ಮಾಡಿ ಪೂಜಿಸಲು ಪ್ರಾರಂಭಿಸಿದ ದಿನದಿಂದ ಈ ದೇವಸ್ಥಾನದ ವ್ಯಾಪ್ತಿಯಲ್ಲಿ ಊರು ಬೆಳೆಯಲು ಶುರುವಾಗಿ ಈಗ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿವೆ.ಮಹಾದೇವ ಈಶ್ವರ ದೇವಸ್ಥಾನ ಗ್ರಾಮಸ್ಥರ ನೆರವಿನಿಂದ ಹಾಗೂ ದಾನಿಗಳ ಸಹಕಾರದಿಂದ 2012ಕ್ಕೆ ಪ್ರತಿಷ್ಠಾಪನೆಗೊಂಡಿತು.
ಧಾರ್ಮಿಕ ವಿಧಿವಿಧಾನದಂತೆ ಮೊದಲಿಗೆ ಮಹಾದೇವ ಈಶ್ವರನನ್ನು ಪ್ರಾರ್ಥನೆ ಮಾಡಿ ಆನಂತರ ಕೆದಕಲ್ ನಲ್ಲಿರುವ ಭದ್ರಕಾಳಿ ದೇವಿಯಲ್ಲಿ ಭಕ್ತರು ಇಷ್ಟಾರ್ಥ ಸಿದ್ದಿಯನ್ನು ಬೇಡಿಕೊಂಡು ಫಲ ಸಿಗುತ್ತದೆ ಎಂಬ ನಂಬಿಕೆಯನ್ನು ಕೆದಕಲ್ ವ್ಯಾಪ್ತಿಯ ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ.
ಮಹಾದೇವ ಈಶ್ವರನ ಶಕ್ತಿಯನ್ನು ಅರಿತ ಗ್ರಾಮಸ್ಥರು ವಾರದಲ್ಲಿ ಮೂರ್ನಲ್ಕು ಬಾರಿಯಾದರೂ ದೀಪರಾಧನೆ, ವಿಶೇಷ ಪೂಜೆಗಳನ್ನು ಮಾಡಿಸುತ್ತಾ ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತಾ ಸಮಸ್ಯೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಅನಿಸಿಕೆ
ದೇವಾಲಯದಲ್ಲಿ ದೀಪಾವಳಿ, ಶಿವರಾತ್ರಿ, ನವರಾತ್ರಿ, ಗೌರಿ ಗಣೇಶ ಹಬ್ಬ ಹರಿದಿನಗಳು ಗ್ರಾಮಸ್ಥರು ಸೇರಿಕೊಂಡು ಮಾಡುತ್ತಾರೆ.ಮಹಾದೇವ ಈಶ್ವರ ನಲ್ಲಿ ತಮ್ಮ ಬೇಡಿಕೆಗಳನ್ನು ಕೇಳಿದರೆ ಕೆಲವೇ ದಿನದಲ್ಲಿ ಇಷ್ಠಾರ್ಥವಾಗುತ್ತದೆ.
ಅವಿನಾಶ್ ಆರಾಧ್ಯ
ಪ್ರಧಾನ ಅರ್ಚಕರು
ಮಹಾದೇವ ಈಶ್ವರ ದೇವಸ್ಥಾನ.
ಇಂದಿನ ಕಾರ್ಯಕ್ರಮ;
ಶಿವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 5.30ರಿಂದ ಮಹಾ ಸಂಕಲ್ಪ , ಗಂಗಾ ಪೂಜೆ , ಗಣಪತಿ ಪೂಜೆ , ಪುಣ್ಯಾಹ , ನವಗ್ರಹ ಪೂಜೆ, ಹಾಗೂ ಗಣಪತಿ ಹೋಮ , ನವಗ್ರಹ ಹೋಮ , ಪೂರ್ಣಾಹುತಿ, ಮಹಾದೇವ ಈಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪುಷ್ಪಾಲಂಕಾರ, ಬಿಲ್ವಾರ್ಚನೆ ಮತ್ತು ದೀಪಾರಾಧನೆ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ.

ಕೆದಕಲ್ ಮಹಾದೇವ ಈಶ್ವರ ದೇವಾಲಯದಲ್ಲಿ ಪ್ರತಿವಾರ ದೀಪರಾಧನೆ ನಡೆಯುತ್ತದೆ.
ಕೆದಕಲ್ ಮಹಾದೇವ ಈಶ್ವರ ದೇವಾಲಯದಲ್ಲಿ ಪ್ರತಿವಾರ ದೀಪರಾಧನೆ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT