ADVERTISEMENT

ಕುಶಾಲನಗರ | ಗಾಂಧಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಚೇತನ: ಪ್ರೊ. ಗಂಗಾಧರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:18 IST
Last Updated 17 ಫೆಬ್ರುವರಿ 2026, 4:18 IST
ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದಲ್ಲಿ ಗಾಂಧೀಜಿ ಆತ್ಮಕಥೆ ನೂರರ ಸಂಭ್ರಮ ಹಾಗೂ ಭೂದಾನ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಸಮ್ಮೇಳನ ಹಾಗೂ ಪುಸ್ತಕ ದಾಸೋಹ ಕಾರ್ಯಕ್ರಮವನ್ನು ಚಾಮರಾಜನಗರ ವಿ.ವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಉದ್ಘಾಟಿಸಿದರು
ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದಲ್ಲಿ ಗಾಂಧೀಜಿ ಆತ್ಮಕಥೆ ನೂರರ ಸಂಭ್ರಮ ಹಾಗೂ ಭೂದಾನ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಸಮ್ಮೇಳನ ಹಾಗೂ ಪುಸ್ತಕ ದಾಸೋಹ ಕಾರ್ಯಕ್ರಮವನ್ನು ಚಾಮರಾಜನಗರ ವಿ.ವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಉದ್ಘಾಟಿಸಿದರು   

ಕುಶಾಲನಗರ: ‘ಗಾಂಧೀಜಿ ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಮಹಾನ್ ಚೇತನ. ಅವರು ಸ್ವತಂತ್ರ ಹೋರಾಟಗಾರಲ್ಲದೆ, ಚಿಂತಕರು, ಪತ್ರಕರ್ತರು, ಶಾಂತಿಧೂತರಾಗಿದ್ದರು’ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.

ಕೊಡಗು ವಿಶ್ವವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಗಾಂಧೀಜಿಯವರ ಆತ್ಮಕಥೆ ನೂರರ ಸಂಭ್ರಮ, ಭೂದಾನ ಚಳವಳಿಯ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನ ಹಾಗೂ ಪುಸ್ತಕ ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವತಂತ್ರ, ಸತ್ಯಾಗ್ರಹ, ಸ್ವರಾಜ್ಯ, ಸತ್ಯ, ನೈತಿಕತೆ, ಶಾಂತಿ, ಅಹಿಂಸೆ ಅವರ ತತ್ವಗಳು ಸಮಾಜದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಮಂಜಸ ಎಂದರು.

ADVERTISEMENT

ಇಂದು ಜಗತ್ತು ಒಂದು ಜಾಗತಿಕ ಹಳ್ಳಿಯಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು ಮುಖ್ಯ. ಸಮಾಜದಲ್ಲಿ ದ್ವೇಷ ಭಾಷಣಗಳು, ಕೋಮುಗಲಭೆಗಳು ಹೆಚ್ಚುತ್ತಿವೆ. ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದು ತಿಳಿಸಿದರು.

ಇಂದಿನ ಯುವಜನತೆಗೆ ಅತ್ಯಂತ ಸರಳ ಸುಂದರ ಜೀವನ ನಡೆಸಿದ ಗಾಂಧೀಜಿ ಆದರ್ಶಪ್ರಾಯರಾಗಿದ್ದಾರೆ. ವಿದ್ಯಾರ್ಥಿಗಳು ಅವರು ಹಾಕಿ ಕೊಟ್ಟ ಮೌಲ್ಯಗಳನ್ನು ಬದುಕಿನ ಬುನಾದಿಯಾಗಿ ಮಾಡಿಕೊಂಡರೆ ಯಶಸ್ವಿ ಜೀವನದ ಜೊತೆಗೆ ಸುಸ್ಥಿರ ಸಮಾಜ ಕಾಣಬಹುದು ಎಂದರು.

ಪುಸ್ತಕ ದಾಸೋಹ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಎಚ್.ಜಂಗಮಶೆಟ್ಟಿ, ಓದುವ ದಾಹ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಪುಸ್ತಕದ ಜ್ಞಾನ ಮಸ್ತಕಕ್ಕೆ ಅವಶ್ಯ. ವಿದ್ಯಾರ್ಥಿಗಳು ಈ ಪುಸ್ತಕ ದಾಸೋಹದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಸುರೇಶ, ಡಾ.ಆಬಿದ ಬೇಗಮ್, ಗಾಂಧೀಜಿ ವಿಚಾರಧಾರೆಗಳ ಹಾಗೂ ಶಿಕ್ಷಣದ ಮೌಲ್ಯ ಕುರಿತು ಮಾತನಾಡಿದರು.

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುದರ್ಶನ ಕುಮಾರ್, ಕನ್ನಡ ಅಧ್ಯಯನ ವಿಭಾಗ ಉಪನ್ಯಾಸಕ ಜಮೀರ್ ಅಹಮದ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಸುವರ್ಣ ಕಂಬಿ ಇದ್ದರು.

‘ಗಾಂಧೀಜಿ ಕನಸು ಅಲೋಚನೆ ಪಸರಿಸು ಉದ್ದೇಶ’

ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಮಾತನಾಡಿ ಮಹಾತ್ಮ ಗಾಂಧೀಜಿ ಚಿಂತನೆ ಸರ್ವ ಕಾಲಕ್ಕೂ ಸ್ಮರಿಸುವ ಉದ್ದೇಶದಿಂದ ಕೊಡಗು ವಿಶ್ವವಿದ್ಯಾಲಯವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಗಾಂಧೀಜಿಯ ಕನಸುಗಳು ಹಾಗೂ ಆಲೋಚನೆ ಬಿತ್ತಲು ಇಂತಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಗತ್ತು ಬದಲಾದರೂ ಕೂಡ ಅವರು ಸಾರಿದ ತತ್ವಗಳು ಬದಲಾಗದ ಕಾರಣ ಇಂದಿನ ಮಕ್ಕಳಲ್ಲಿ ಗಾಂಧೀಜಿಯವರ ಕನಸುಗಳನ್ನು ಬಿತ್ತಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.