ಸುಂಟಿಕೊಪ್ಪ: ಮಕರ ಸಂಕ್ರಾಂತಿ (ಪೊಂಗಲ್) ಅಂಗವಾಗಿ ಇಲ್ಲಿನ ಪೊಂಗಲ್ ಸಮಿತಿಯಿಂದ ಕಳಸ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದಿಂದ ನೂರಾರು ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳು ಪೂಜೆ ನೆರವೇರಿಸಿ ಕೊಪ್ಪದ ನಾದಸ್ವರದ ಮುಂದಾಳತ್ವದಲ್ಲಿ ಗಣಪತಿ ದೇವಾಲಯದಿಂದ ಹಾಲಿನ ಕಳಸ ಹೊತ್ತು ಮೆರವಣಿಗೆ ಮೂಲಕ ಮುಖ್ಯ ಬೀದಿಯಲ್ಲಿ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಮಾಪ್ತಿಗೊಂಡಿತು.
ಇದಕ್ಕೂ ಮೊದಲು ವೃಕ್ಷೋದ್ಭವ ದೇವಾಲಯದ ಟ್ರಸ್ಟಿ ಎ.ಲೋಕೇಶ್ ಕುಮಾರ್ ಅವರು ಶಿರಕ್ಕೆ ಕಳಸ ಇಡುವ ಮೂಲಕ ಚಾಲನೆ ನೀಡಿದರು. ನಂತರ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಅಲ್ಲಿ ದೇವಿಗೆ ಅಭಿಷೇಕ ಮಾಡಿ ನಂತರ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ನಂತರ ನೆರೆದಿದ್ದ ಭಕ್ತ ಸಮೂಹಕ್ಕೆ ಸಮಿತಿಯಿಂದ ಪೊಂಗಲ್ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಕಾರ್ಯಕ್ರಮದ ಆಯೋಜಕರಾದ ಅಯ್ಯಪ್ಪ, ಎಸ್. ಸುರೇಶ್, ಎಸ್.ಸುಂದರೇಶ, ಎಂ.ರಾಜ, ಎಂ. ಗಣೇಶ, ರಾಜ, ಜಗದೀಶ, ವೆಂಕಟೇಶ, ಗಣೇಶ, ಸುಬ್ರಮಣಿ, ಮುರುಗೇಶ, ಗುಣಶೇಖರ, ಏಳುಮಲೈ, ಶರವಣ ಇತರರು ಇದ್ದರು.
ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡೆಗಳು ಹಾಗೂ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾತ್ರಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಸಾದ(ಪೊಂಗಲ್) ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.