ADVERTISEMENT

ನಾಪೋಕ್ಲು | ಮಕ್ಕಿ ಶಾಸ್ತಾವು ಉತ್ಸವ ಸಂಪನ್ನ

ಬೇತು ಗ್ರಾಮ; ಸಹಸ್ರಾರು ಮಂದಿ ಭಾಗಿ; ಭಕ್ತರಿಗೆ ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 7:33 IST
Last Updated 20 ಡಿಸೆಂಬರ್ 2022, 7:33 IST
ನಾಪೋಕ್ಲು ಸಮೀಪದ ಬೇತು ಗ್ರಾಮದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಸೋಮವಾರ ನಡೆದ ವಾರ್ಷಿಕ ಉತ್ಸವದಲ್ಲಿ ಕೆಂಡದ ರಾಶಿಯ ಮೇಲೆ ವಿಷ್ಣುಮೂರ್ತಿ ಕೋಲ ಬಿದ್ದ ದೃಶ್ಯ (ಎಡಚಿತ್ರ) ಅಲಂಕೃತ ಮಕ್ಕಿ ಶಾಸ್ತಾವು ದೇವಾಲಯ
ನಾಪೋಕ್ಲು ಸಮೀಪದ ಬೇತು ಗ್ರಾಮದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಸೋಮವಾರ ನಡೆದ ವಾರ್ಷಿಕ ಉತ್ಸವದಲ್ಲಿ ಕೆಂಡದ ರಾಶಿಯ ಮೇಲೆ ವಿಷ್ಣುಮೂರ್ತಿ ಕೋಲ ಬಿದ್ದ ದೃಶ್ಯ (ಎಡಚಿತ್ರ) ಅಲಂಕೃತ ಮಕ್ಕಿ ಶಾಸ್ತಾವು ದೇವಾಲಯ   

ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಕೊನೆಗೊಂಡಿತು.

ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸಿದವು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆದವು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು.

ಭಕ್ತರಿಂದ ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಲಾಯಿತು. ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ಮಧ್ಯಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಕ್ತಿಯಿಂದ ವೀಕ್ಷಿಸಿದರು. ಉತ್ಸವದ ಅಂಗವಾಗಿ ಭಾನುವಾರ ರಾತ್ರಿ ದೀಪಾರಾಧನೆ ನಡೆಯಿತು. ತಡರಾತ್ರಿಯವರೆಗೆ ದೇವಾಲಯದಲ್ಲಿ ಕೇರಳದ ಚಂಡೆವಾದ್ಯದೊಂದಿಗೆ ದೀಪಾರಾಧನೆ ನಡೆದು ಭಕ್ತರು ಅಧಿಕಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಜಿಲ್ಲೆಯ ಹಲವು ಭಾಗಗಳಿಂದ, ದೂರದ ಊರುಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಉತ್ಸವ
ವೀಕ್ಷಿಸಿದರು.

ಉತ್ಸವಕ್ಕೂ ಎರಡು ದಿನ ಮೊದಲು ಭಕ್ತರು ಸಾಂಪ್ರದಾಯಿಕ ಆಚರಣೆಯಾಗಿ ನಾಯಿಯ ಮೂರ್ತಿಗಳ ಹರಕೆ ಸಲ್ಲಿಸಿದರು. ಮೇ ತಿಂಗಳ ಮೂರು ಮತ್ತು ನಾಲ್ಕರಂದು ಮತ್ತೊಮ್ಮೆ ಉತ್ಸವ ಜರುಗಲಿದೆ. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ತಕ್ಕಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.