ADVERTISEMENT

ವಿರಾಜಪೇಟೆ: ಮಲೆ ಮಹಾದೇಶ್ವರ ಉತ್ಸವದಲ್ಲಿ ಚಂಡೆಮೇಳ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 5:34 IST
Last Updated 20 ಮಾರ್ಚ್ 2024, 5:34 IST
ವಿರಾಜಪೇಟೆ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೇರಳದ ಚಂಡೆಮೇಳ ತಂಡವು ಸಾರ್ವಜನಿಕರ ಗಮನ ಸೆಳೆಯಿತು
ವಿರಾಜಪೇಟೆ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೇರಳದ ಚಂಡೆಮೇಳ ತಂಡವು ಸಾರ್ವಜನಿಕರ ಗಮನ ಸೆಳೆಯಿತು   

ವಿರಾಜಪೇಟೆ: ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿನ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಮಂಗಳವಾರ ಮಹಾಪೂಜೆ ಹಾಗೂ ಅವಭೃತ ಸ್ನಾನ ಮತ್ತಿತರ ಧಾರ್ಮಿಕ ವಿಧಾನಗಳು ನಡೆದವು.

ಧಾರ್ಮಿಕ ಕಾರ್ಯಗಳಲ್ಲಿ ಪಟ್ಟಣ ಹಾಗೂ ವಿಶೇಷವಾಗಿ ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉತ್ಸವದ ಅಂಗವಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಮಧ್ಯಾಹ್ನ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.

ದೇವಾಲಯದ ವಾರ್ಷಿಕ ಉತ್ಸವಕ್ಕೆ ಈಚೆಗೆ ಚಾಲನೆ ನೀಡಲಾಗಿತ್ತು. ಉತ್ಸವದ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ 12ಕ್ಕೆ ನೆರುಪು, ಎತ್ತ್ ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಹಾಗೂ ಮಹಾಪೂಜೆ ನಡೆದು ಅನ್ನ ಸಂತರ್ಪಣೆ ನಡೆದಿತ್ತು. ಸಂಜೆ 6ಕ್ಕೆ ಆರಂಭವಾದ ಉತ್ಸವ ಮೂರ್ತಿಯ ಮೆರವಣಿಗೆಯು ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ರಾತ್ರಿ ಪಟ್ಟಣದ ಜೈನರ ಬೀದಿಯಲ್ಲಿನ ಬಸವೇಶ್ವರ ದೇವಾಲಯವನ್ನು ತಲುಪಿತು. ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಾಂಗ ಬೀದಿಯಲ್ಲಿನ ಮಹಾಲಕ್ಷ್ಮಿ ದೇವಾಲಯಕ್ಕೆ ಬಂದ ಮೆರವಣಿಗೆಯು ಪೂಜೆ ಸಲ್ಲಿಸಿತು. ಬಳಿಕ ಮೆರವಣಿಗೆಯು ಮಲೆ ಮಹಾದೇಶ್ವರ ದೇವಾಲಯಕ್ಕೆ ಹಿಂದಿರುಗಿತು.

ADVERTISEMENT

ಮೆರವಣಿಗೆ ಸಂದರ್ಭ ದಾರಿಯುದ್ದಕ್ಕೂ ಭಕ್ತರು ದೇವರಿಗೆ ಹಣ್ಣು–ಕಾಯಿ ಅರ್ಪಿಸಿ ಹಾಗೂ ಈಡುಗಾಯಿ ಒಡೆಯುತ್ತಿರುವುದು ಕಂಡು ಬಂತು.

ಉತ್ಸವಕ್ಕೆ ಇಂದು ತೆರೆ: ಕೇರಳದ ಚಂಡೆಮೇಳ ಹಾಗೂ ಕೊಡಗಿನ ಸಾಂಪ್ರದಾಯಕ ವಾದ್ಯ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಬುಧವಾರ (ಇಂದು) ಕೊಡಿ ಮರ ಇಳಿಸುವ ಧಾರ್ಮಿಕ ಕಾರ್ಯ ನಡೆದು, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಮೂಲಕ ಈ ಸಾಲಿನ ಉತ್ಸವಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.