ಮಡಿಕೇರಿ: 7 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಅಸ್ಸಾಂ ರಾಜ್ಯದ ತಲ (22) ಎಂಬಾತನಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಅಪರಾಧಿಯು ಕಳೆದ ವರ್ಷ ಜುಲೈ 20ರಂದು ಮಧ್ಯಾಹ್ನ ಲೈನ್‌ಮನೆಯೊಂದರಲ್ಲಿ ವಾಸವಿದ್ದ ಬಾಲಕಿಗೆ ಮೊಬೈಲ್ ಫೋನ್ ಕೊಡುವುದಾಗಿ ಆಮಿಷ ಒಡ್ಡಿ ಸಮೀಪದ ಅರಣ್ಯ, ಹೋಂಸ್ಟೆ ಕಟ್ಟಡ ಹಾಗೂ ತನ್ನ ಲೈನ್‌ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಕುರಿತು ಬಾಲಕಿಯ ತಾಯಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಅಂದಿನ ಸಿಪಿಐ ಅನೂಪ್‌ಮಾದಪ್ಪ ಅವರು ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್ ಅವರು ಅಪರಾಧಿಗೆ 20 ವರ್ಷ ಶಿಕ್ಷೆ ಹಾಗೂ ₹ 15 ಸಾವಿರ ದಂಡ ವಿಧಿಸಿದರು. ನೊಂದ ಬಾಲಕಿಗೆ ₹ 4 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸರ್ಕಾರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ರುದ್ರಪ್ರಸನ್ನ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.