ಗೋಣಿಕೊಪ್ಪಲು: ಕೊಡಗಿನ ಸುಗ್ಗಿ ಹಬ್ಬ ಎಂದೇ ಕರೆಯಲಾಗುವ ಹುತ್ತರಿ ಹಬ್ಬದ ಕೋಲಾಟಕ್ಕೆ ಮಂದ್‌ಗಳು ಸಿದ್ಧಗೊಳ್ಳುತ್ತಿವೆ.
ಕೊಡಗಿನ ಬಹುತೇಕ ಊರುಗಳಲ್ಲಿ ಕೋಲ್ ಮಂದ್‌ಗಳಿವೆ. ಹುತ್ತರಿ ಕೋಲ್ ಮಂದ್‌ಗಾಗಿಯೇ ನೂರಾರು ವರ್ಷಗಳಿಂದ ಜಾಗವನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಬಹಳಷ್ಟು ಊರುಗಳಲ್ಲಿ ಈ ಮಂದ್‌ಗಳು ಒತ್ತುವರಿಯಾಗಿ ಇಲ್ಲವೇ ಕಾಡು ಬೆಳೆದು ಮುಚ್ಚಿ ಹೋಗಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಘ ಸಂಸ್ಥೆಗಳ ಒತ್ತಾಸೆ ಮತ್ತು ಸಹಕಾರದೊಂದಿಗೆ ಮಂದ್‌ಗಳಿಗೆ ಪುನರುಜ್ಜೀವ ಕೊಡಲಾಗಿದೆ. ಹೀಗಾಗಿ ಹುತ್ತರಿ ಹಬ್ಬ ಮುಗಿದ ಬಳಿಕ ಒಂದು ತಿಂಗಳವರೆಗೂ ಆಯಾ ಮಂದ್‌ಗಳಲ್ಲಿ ಹುತ್ತರಿ ಕೋಲಾಟ ವಿಜೃಂಭಣೆಯಿಂದ ಜರುಗುತ್ತಿದೆ.
ಪೊನ್ನಂಪೇಟೆ ತಾಲ್ಲೂಕಿನ ಬೆಕ್ಕೆಸೊಡ್ಲೂರು, ಬಾಳೆಲೆ, ಕಾರ್ಮಾಡು, ಕಾನೂರು, ಶ್ರೀಮಂಗಲ, ಬಿರುನಾಣಿ. ಬೀರುಗ, ಹುದಿಕೇರಿ, ಕುಂದ, ಕಿರುಗೂರು ಭಾಗಗಳ ಮಂದ್‌ಗಳಲ್ಲಿಯೂ ಹುತ್ತರಿ ಕೋಲಾಟವನ್ನು ನಡೆಸಲಾಗುತ್ತಿದೆ. ಐದಾರು ವರ್ಷಗಳ ಹಿಂದಿನವರೆಗೂ ಈ ಮಂದ್‌ಗಳು ಕಾರ್ಯಕ್ರಮಗಳಿಲ್ಲದೆ ಕಾಡು ಬೆಳೆದು ಕಳೆಗುಂದಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಿತಂತರವಾಗಿ ನಡೆಯುತ್ತಿರುವ ಹುತ್ತರಿ ಕೋಲಾಟದಿಂದ ಸ್ವಚ್ಛಗೊಂಡು ಕಂಗೊಳಿಸುತ್ತಿವೆ.
ಹುತ್ತರಿ ಹಬ್ಬ ಸಮೀಪಿಸುತ್ತಿದ್ದಂತೆ ಆಯಾ ಊರಿನ ಮುಖಂಡರು ಮಂದ್‌ಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಊರಿನ ಹಿರಿಯರು ಇದರ ಬಗ್ಗೆ ಹೆಚ್ಚಿನ ಮುತುವರ್ಜಿ ಮತ್ತು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ.
‘ಮಂದ್ ಎನ್ನುವಂತಹದ್ದು ಕೇವಲ ಹುತ್ತರಿ ಕೋಲಾಟ ನಡೆಸುವ ಮೈದಾನ ಮಾತ್ರವಲ್ಲ, ಅದು ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವೂ ಹೌದು. ಮಂದ್‌ಗಳು ಹಾಡು, ಕುಣಿತ ಮತ್ತಿತರ ಸಂಭ್ರಮವನ್ನು ಒಳಗೊಂಡ ಕೊಡವ ಸಾಂಸ್ಕೃತಿಕ ಕೇಂದ್ರ’ ಎನ್ನುತ್ತಾರೆ ಅಖಿಲ ಕೊಡವ ಯೂತ್ ವಿಂಗ್ ಅಧ್ಯಕ್ಷ ಚೆಮ್ಮಟೀರ ಪ್ರವೀಣ್ ಉತ್ತಪ್ಪ.
ಈ ಕಾರಣದಿಂದ ಮುಂದಿನ ಪೀಳಿಗೆಗೆ ಮಂದ್‌ನ ಮಹತ್ವ ಮತ್ತು ಅದರ ಸಾಂಸ್ಕೃತಿಕ ಹಿನ್ನೆಲೆ ತಿಳಿಸುವುದಕ್ಕಾಗಿಯೇ ತಜ್ಞರಿಂದ ವಿಚಾರ ಸಂಕಿರಣಗಳು ನಡೆಯುತ್ತಿವೆ. ಮಂದ್‌ಗಳಲ್ಲಿ ಹುತ್ತರಿ ಕೋಲಾಟ ನಡೆಸುವ ಸಂದರ್ಭದಲ್ಲಿ ಕೊಡವ ಜನರು ಸಾಂಪ್ರದಾಯಿಕ ಕೊಡವ ಉಡುಪುಗಳನ್ನು ಧರಿಸುತ್ತಾರೆ. ಪುರುಷರು ಕುಪ್ಪೆಚ್ಯಾಲೆ, ಮಂಡೆತುಣಿ ಧರಿಸಿದರೆ ಮಹಿಳೆಯರು ಕೂಡ ತಲೆ ವಸ್ತ್ರ, ಕೊಡವ ಸೀರೆ ಧರಿಸಿ ಮಂದ್‌ಗೆ ಇಳಿಯುತ್ತಾರೆ.
ಕೋಲ್ ಮಂದ್‌ನಲ್ಲಿ ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಬಾಳೋಪಾಟ್, ಪರೆಯಕಳಿ, ವಾಲಗತಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ಸ್ಥಳೀಯ ಬುಡಕಟ್ಟು ಸಮುದಾಯದ ಜನರಿಗೆ ಯರವಾಟ್ ಸ್ಪರ್ಧೆ ಏರ್ಪಡಿಸಲಾಗಿದೆ. ಜತೆಗೆ, ಎಲ್ಲರಿಗೂ ಹುತ್ತರಿ ಹಬ್ಬದ ವಿಶೇಷ ತಿನಿಸು ಮತ್ತು ಆಹಾರ ನೀಡಲಾಗುತ್ತದೆ.
ಪ್ರಮುಖ ಮಂದ್‌ಗಳಲ್ಲಿ ಒಂದಾದ ಪೊನ್ನಂಪೇಟೆ ಬಳಿಯ ಕುಂದ ಬೊಟ್ಟಿಯತ್ ಮೂಂದ್ ನಾಡ್ ಮಂದ್‌ನಲ್ಲಿ ಡಿ.17ರಂದು ಕೋಲ್ ಮಂದ್ ನಡೆಯಲಿದೆ. ಬೊಟ್ಟಿಯತ್ ನಾಡ್ ಕುತ್ತ್ ನಾಡ್ ಹಾಗೂ ಬೇರಳಿ ನಾಡ್‌ನ ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಕೋಲ್ ಮಂದ್ ಅನ್ನು ಈ ಬಾರಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಡಿ.17ರಂದು ಬೆಳಿಗ್ಗೆ 10 ಗಂಟೆಗೆ ಮೂರು ನಾಡಿನವರು ಮೂರು ಕಡೆಯಿಂದ ಓಡಿಬಂದು ಮಂದ್ ಮಧ್ಯದಲ್ಲಿರುವ ಅರಳಿ ಮರಕ್ಕೆ ಕೋಲು ಹೊಡೆಯುವ ಮೂಲಕ ಮಂದ್‌ಗೆ ಚಾಲನೆ ನೀಡಲಿದ್ದಾರೆ. ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿವೆ. ಪ್ರಾಥಮಿಕ ಶಾಲೆ ಪ್ರೌಢ ಹಾಗೂ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಂದು 3 ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದೆ. ಎಲ್ಲರಿಗೂ ಹುತ್ತರಿ ಹಬ್ಬದ ವಿಶೇಷ ಭೋಜನ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.