ADVERTISEMENT

ಚೊಚ್ಚಲ ಸಭೆಯಲ್ಲೆ ಹಲವು ವಿಷಯ ಚರ್ಚೆ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ‘ದಿಶಾ’ ಸಮಿತಿ ಸಭೆ, ಜಿಲ್ಲೆಯ ಸಮಸ್ಯೆಗಳ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 5:22 IST
Last Updated 12 ಜುಲೈ 2024, 5:22 IST
<div class="paragraphs"><p>ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. </p></div>

ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

   

ಮಡಿಕೇರಿ: ತೋಟಗಳಲ್ಲಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡಲು, ಕಾಡೊಳಗೆ ಬೆಳೆದಿರುವ ಲಂಟಾನ ತೆರವುಗೊಳಿಸಲು ಯೋಜನೆ ರೂಪಿಸಿ, ಕಾಡಂಚಿನ ಜನರಿಗೆ ಆಸ್ಪತ್ರೆಗೆ ಬರಲು ಸೂಕ್ತ ವ್ಯವಸ್ಥೆ ಕಲ್ಪಿಸಿ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಂದು ವಿವಿಧ ಇಲಾಖಾ ಅಧಿಕಾರಿಗಳಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದರು.

ಅವರು ಇಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ತಮ್ಮ ಚೊಚ್ಚಲ ಸಭೆಯಲ್ಲಿ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಸಭೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ತೋಟಗಳಲ್ಲಿರುವ ಕಾಡಾನೆಗಳ ಸ್ಥಳಾಂತರ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಪ್ರಧಾನವಾಗಿ ಚರ್ಚಿಸಿದರು.

‘ಸುಮಾರು 130–150 ಕಾಡಾನೆಗಳು ತೋಟಗಳಲ್ಲಿಯೇ ಇವೆ. ಇವುಗಳೆಲ್ಲವನ್ನೂ ಸ್ಥಳಾಂತರ ಮಾಡುವುದು ದೊಡ್ಡ ಮೊತ್ತದ ಕಾರ್ಯವಾಗಿದೆ’ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದರು.

‘ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಾಂತರ ಪ್ರಕ್ರಿಯೆ ಕುರಿತು ಯೋಜನೆ ರೂಪಿಸಲಾಗುವುದು’ ಎಂದು ಡಿಸಿಎಫ್ ಜಗನ್ನಾಥ್ ಹೇಳಿದರು.

‘ಮೊದಲಿಗೆ ಈ ಕುರಿತು ವಿಸ್ತೃತ ಯೋಜನಾ ವರದಿ ರೂಪಿಸಿ, ಕೊಡಿ. ಅದರ ಜಾರಿ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಯದುವೀರ್ ತಿಳಿಸಿದರು.

ತೋಟಗಳಲ್ಲಿರುವ ಕಾಡಾನೆಗಳೆಲ್ಲದರ ಸ್ಥಳಾಂತರ ಮಾಡುವುದರ ಜೊತೆಗೆ, ರೈಲ್ವೆ ಬ್ಯಾರಿಕೇಡ್ ನಿರ್ಮಾಣವನ್ನೂ ಚುರುಕುಗೊಳಿಸಬೇಕು. ಕಾಡಂಚಿನಲ್ಲೆಲ್ಲ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಆಗ ಕಾಡಿನಿಂದ ನಾಡಿಗೆ ಆನೆಗಳು ಬರುವುದು ತಪ್ಪುತ್ತದೆ. ಜೊತೆಗೆ, ಕಾಡಿನೊಳಗೆ ಬೆಳೆದಿರುವ ಲಂಟಾನ ತೆರವುಗೊಳಿಸಿ, ಅಲ್ಲಿ ಹುಲ್ಲು ಬೆಳೆಯುವಂತೆ ಮಾಡಬೇಕು ಎಂದು ಅವರು ಸೂಚಿಸಿದರು.

ಕಾಡಂಚಿನ ಜನರು ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಬರಲು ಹರಸಾಹಸ ಪಡಬೇಕಿದೆ ಎಂಬ ವಿಚಾರವನ್ನೂ ಪ್ರಸ್ತಾಪಿಸಿದ ಯದುವೀರ್, ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯವರಿಂದ ಮಾಹಿತಿ ಕೇಳಿದರು. ಇದಕ್ಕೆಂದೇ ಇರುವ ಸಂಚಾರಿ ಗಿರಿಜನ ಆರೋಗ್ಯ ವಾಹನಗಳು ಕೆಟ್ಟಿವೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ಕಾಡಂಚಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ವಿವರಣೆಗೆ ತೃಪ್ತರಾಗದ ಯದುವೀರ್, ಕೂಡಲೇ ಸಂಚಾರಿ ಆರೋಗ್ಯ ಗಿರಿಜನ ಘಟಕವನ್ನು ಬಲಪಡಿಸುವಂತೆ ನಿರ್ದೇಶನ ನೀಡಿದರು.

ಮೈಸೂರು– ಕುಶಾಲನಗರ ಚತುಷ್ಪಥ ರಸ್ತೆ, ಭಾಗಮಂಡಲ– ಕರಿಕೆ ರಸ್ತೆ ಅಭಿವೃದ್ಧಿ ಸೇರಿದಂತೆ ರಸ್ತೆ ಅಭಿವೃದ್ಧಿ ವಿಚಾರವಾಗಿಯೂ ಯದುವೀರ್ ಚರ್ಚೆ ನಡೆಸಿದರು.

ಜಲಜೀವನ ಮಿಷನ್‌ ಸಮರ್ಪಕವಾಗಿ ಜಾರಿಗೊಳಿಸಿ; ಸುಜಾ ಕುಶಾಲಪ್ಪ

ಜಲಜೀವನ್‌ ಮಿಷನ್‌ ಕಾಮಗಾರಿ ಸಂಬಂಧ ನಡೆದ ಚರ್ಚೆಯಲ್ಲಿ ಭಾಗವಹಿಸಿದ ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ‘ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು, ಒಂಟಿಯಂಗಡಿ ಮತ್ತಿತರ ಕಡೆಗಳಲ್ಲಿ ಜಲಜೀವನ ಮಿಷನ್‌ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ’ ಎಂದು ದೂರಿದರು. ಜೊತೆಗೆ, ‘ಈ ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಎಂಜಿನಿಯರ್‌ಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. ಅದನ್ನು ಬಿಟ್ಟು ಸ್ಥಳಕ್ಕೆ ಭೇಟಿ ನೀಡದೆ ಮಾಹಿತಿ ನೀಡುವುದು ಸರಿ ಇಲ್ಲ’ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.

‘ವಿರಾಜಪೇಟೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ’ ಎಂದೂ ಸುಜಾ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು. ‘ಈ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಗೋಣಿಕೊಪ್ಪಲು ಮತ್ತು ವಿರಾಜಪೇಟೆಗಳಲ್ಲಿ ವೃತ್ತಗಳು ವಿಸ್ತರಣೆಯಾದರೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ವತಿಯಿಂದ 63 ಹೊಸ ಟವರ್‌ಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಇದರಲ್ಲಿ 30 ಕ್ಕೂ ಹೆಚ್ಚು ಟವರ್ ನಿರ್ಮಾಣ ಮಾಡಲಾಗಿದೆ. ನಾಗರಹೊಳೆ ಸೇರಿದಂತೆ ವಿವಿಧ ಪ್ರದೇಶ ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ ಬಾಕಿ ಇದೆ ಎಂದು ಬಿಎಸ್‍ಎನ್‍ಎಲ್ ವ್ಯವಸ್ಥಾಪಕರು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ 125 ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ಹೆಚ್ಚಾಗಿ ಡೆಂಗಿ ಕಂಡುಬಂದಿದೆ. ಈಗ 4 ಪ್ರಕರಣಗಳು ಪಾಸಿಟಿವ್ ಕಂಡುಬಂದಿದ್ದು, 1 ಪ್ರಕರಣವನ್ನು ಹೊರ ಜಿಲ್ಲೆಗೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇಲ್ಲಿ ಪ್ರವಾಸಿಗರು ಎಸೆದು ಹೋದ ಪ್ಲಾಸ್ಟಿಕ್ ತ್ಯಾಜ್ಯವೇ ಮುಂದೆ ಮೈಸೂರಿಗೆ ಬರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ಇಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ಎಸೆಯದಂತೆ ಎಚ್ಚರಿಕೆ ವಹಿಸಬೇಕು ಎಂದೂ ಯದುವೀರ್ ಹೇಳಿದರು.

ಶಾಸಕ ಡಾ.ಮಂತರ್‌ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

ಚೊಚ್ಚಲ ಸಭೆಗೆ ಅರ್ಧ ಗಂಟೆ ತಡವಾಗಿ ಬಂದ ಸಂಸದ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಮೊದಲ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಅರ್ಧ ಗಂಟೆ ತಡವಾಗಿ ಬಂದರು. ಇವರಿಗಿಂತ ಮೊದಲು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸಭೆಗೆ ಬಂದು ಸಂಸದರ ಹಾದಿಯನ್ನು ಕಾಯುತ್ತಿದ್ದರು. ಯದುವೀರ್ ಅವರೊಂದಿಗೆ ಬಂದ ನಗರಸಭೆಯ ಕೆಲವು ಸದಸ್ಯರು ಕೆಲಹೊತ್ತು ಸಭೆಯ ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಶಾಸಕ ಡಾ.ಮಂತರ್‌ಗೌಡ ಅವರು ಸಭೆಗೆ ಬರುವ ವೇಳೆ ಸಭೆಯು ಮುಕ್ತಾಯದ ಹಂತ‌ಕ್ಕೆ ಬಂದಿತ್ತು. ಸ್ವಾಗತ ಪಡೆದ ಕೆಲಹೊತ್ತಿನಲ್ಲೆ ಅವರಿಗೆ ವಂದನಾರ್ಪಣೆಯನ್ನೂ ಮಾಡಲಾಯಿತು. ಯಾವುದೇ ಚರ್ಚೆಯಲ್ಲೂ ಮಂತರ್‌ಗೌಡ ಪಾಲ್ಗೊಳ್ಳಲಿಲ್ಲ.

ಚರ್ಚೆಯಾಗದ ಹಲವು ವಿಷಯ!

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಇ–ಕೆವೈಸಿ ಮಾಡುವುದಕ್ಕೆ ಇನ್ನೂ 3558 ಮಂದಿ ಬಾಕಿ ಉಳಿದಿರುವುದು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಕೇವಲ ಇಬ್ಬರಿಗೆ ಸಾಲ ನೀಡಿರುವುದು ಸೇರಿದಂತೆ ಹಲವು ಯೋಜನೆಗಳ ನಿರಾಶದಾಯಕ ಪ್ರಗತಿಯ ವರದಿಗಳು ಕೈಯಲ್ಲಿದ್ದರೂ ಈ ಕುರಿತು ಸಭೆಯಲ್ಲಿ ಯಾವುದೇ ಚರ್ಚೆಗಳೂ ನಡೆಯಲಿಲ್ಲ. ವಿವಿಧ ವಸತಿ ಯೋಜನೆಗಳ ಪ್ರಗತಿ ಸೇರಿದಂತೆ ಕೆಲವು ಇಲಾಖೆಗಳ ‍ಬಗೆಗಿನ ಚರ್ಚೆಗಳೂ ನೇಪಥ್ಯಕ್ಕೆ ಸರಿದವು. ಕಾವೇರಿ ನೀರಾವರಿ ನಿಗಮ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಸಭೆ ಗೈರಾಗಿದ್ದರಿಂದ ಆ ಇಲಾಖೆಗಳ ಬಗೆಗಿನ ಚರ್ಚೆಗಳೂ ನಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.