ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯ ನಡುವೆ ಸೂರ್ಯನ ಕಿರಣಗಳು ರಾಜಾಸೀಟ್ ಉದ್ಯಾನದ ಹುಲ್ಲಿನ ಮೇಲೆ ಬೀಳುತ್ತಿದ್ದಂತೆ ಅಚ್ಚರಿ ಕಾದಿತ್ತು. 6ನೇ ತರಗತಿಯ ವಿದ್ಯಾರ್ಥಿಗಳಿಂದ ಹಿಡಿದು, 72 ವರ್ಷದ ಹಿರಿಯರವರೆಗೆ ಒಟ್ಟು 93 ಜನ ಒಟ್ಟಿಗೆ ನಿಂತು ಸೂರ್ಯನಮಸ್ಕಾರ ಮಾಡುವ ಮೂಲಕ ದಿನಕರನನ್ನು ಸ್ವಾಗತಿಸಿದರು.
ರಥಸಪ್ತಮಿ ಅಂಗವಾಗಿ ನಗರದ 4 ಯೋಗ ಶಿಕ್ಷಣ ಸಂಸ್ಥೆಗಳಾದ ಯೋಗಭಾರತಿ ವಿದ್ಯಾಭವನ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಮಾರ್ನಿಂಗ್ ಸ್ಟಾರ್ಸ್ ಯೋಗ ಸೆಂಟರ್ ಇಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಇಂತಹದ್ದೊಂದು ಅಪರೂಪದ ದೃಶ್ಯಗಳು ಕಣ್ಣಿಗೆ ಸಿಕ್ಕವು.
ನಸುಕಿನ ಕತ್ತಲಿನಲ್ಲೇ ಸೇರಿದ ಯೋಗಪಟುಗಳು ತಮ್ಮ ತಮ್ಮ ಮ್ಯಾಟ್‌ಗಳನ್ನು ಬಿಡಿಸಿಟ್ಟು ಸೂರ್ಯನಮಸ್ಕಾರಕ್ಕೆ ಅಣಿಯಾದರು. ಯೋಗ ಶಿಕ್ಷಕರಾದ ಮಹೇಶ್‌ಕುಮಾರ್, ಶಿಲ್ಪಾ ರೈ, ಸುಧಾಕರ್ ಮತ್ತು ಲಿಂಗಪ್ಪ ಅವರು ಬೋಧಿಸಲಾರಂಭಿಸುತ್ತಿದ್ದಂತೆ ಎಲ್ಲರೂ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿದರು.
ನಸುಕಿನ 5.30ಕ್ಕೆ ಸೂರ್ಯನ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮುಖೇನ ಆರಂಭವಾದ ಈ ಕಾರ್ಯಕ್ರಮ ಬೆಳಿಗ್ಗೆ 7.15ರವರೆಗೂ ನಡೆಯಿತು. ಒಟ್ಟು 108 ಬಾರಿ ಯೋಗಪಟುಗಳು ಸೂರ್ಯನಮಸ್ಕಾರ ಮಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ಅವರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರೆ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸೇರಿದಂತೆ ನಗರಸಭೆಯ ಅನೇಕ ಸದಸ್ಯರು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ವಿದ್ಯಾರ್ಥಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಮಾಜದ ಅನೇಕ ವಲಯಗಳಲ್ಲಿ ಸಕ್ರಿಯರಾಗಿರುವವರು ಸೂರ್ಯ ನಮಸ್ಕಾರ ಮಾಡಿದರು.
4 ಯೋಗ ಶಿಕ್ಷಣ ಸಂಸ್ಥೆಗಳ ಯೋಗಪಟುಗಳು ಭಾಗಿ ಒಟ್ಟು 108 ಬಾರಿ ಸೂರ್ಯನಮಸ್ಕಾರ ಮಾಡಿದ ಯೋಗಪಟುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.